ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಉದ್ಘಾಟನೆ – ಅಂಕಗಳೊಂದಿಗೆ ಜೀವನ ಮೌಲ್ಯಗಳು ಮುಖ್ಯ: ಡಾ.ಗಣೇಶ್ ಪ್ರಸಾದ್ ಮುದ್ರಾಜೆ

0

ಪುತ್ತೂರು : ವಿದ್ಯಾಭ್ಯಾಸದೊಂದಿಗೆ ಜೀವನದ ಸಮಸ್ಯೆಗಳನ್ನು ಎದುರಿಸಬಲ್ಲ ಜೀವನ ಮೌಲ್ಯ, ಭಾರತೀಯ ಸಂಸ್ಕೃತಿಗಳನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಮುಂದೆ ಬರಲು ಒಳ್ಳೆಯ ಸಂವಹನ ಕಲೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅಂಕ ಪಡೆಯುವುದು ಮಾತ್ರ ಮುಖ್ಯವಲ್ಲ ಜೀವನ ಮೌಲ್ಯಗಳೂ ಅತೀ ಮುಖ್ಯ ಎಂದು ಪುತ್ತೂರಿನ ಮಾನಸಿಕ ತಜ್ಞ ಡಾ. ಗಣೇಶ್ ಪ್ರಸಾದ್ ಮುದ್ರಾಜೆ ಹೇಳಿದರು.ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದಲ್ಲಿ ಗುರುವಾರ 2023-24ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾಲಯದ ಶೇಯಸ್ಸಿಗೆ ಪೂರಕವಾಗುವ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಕಾಲೇಜಿನ ಘನತೆಗೆ ಯಾವುದೇ ಕುಂದು ಕೊರತೆಗಳು ಬಾರದಂತೆ ಎಚ್ಚರವಹಿಸುವುದು ಮುಖ್ಯ. ಇದಕ್ಕಾಗಿ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘವನ್ನು ರಚಿಸುತ್ತಾರೆ. ವಿದ್ಯಾರ್ಥಿ ಸಂಘದ ನಾಯಕರುಗಳು ವಿದ್ಯಾಲಯದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳನ್ನು ಸಂಬಂಧಪಟ್ಟ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿಯ ಜೊತೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ನುಡಿದರು.
ಆಯ್ಕೆಯಾದ ನಾಯಕರು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ನಡುವಿನ ಸೇತುವೆಯಂತೆ ಕೆಲಸಮಾಡಬೇಕು. ಕಲಿಯುವಾಗ ಕೊರತೆ, ಸಮಸ್ಯೆ ಹಾಗೂ ಗೊಂದಲಗಳು ಬರುವುದು ಸಹಜ. ಇಂತಹಾ ಸಂದರ್ಭದಲ್ಲಿ ಮನಸ್ಸಿಗೆ ಒತ್ತಡಗಳು ಬರುತ್ತವೆ. ಇದನ್ನು ಪರಿಹರಿಸಿಕೊಳ್ಳಲು ಯೋಗ ಧ್ಯಾನದ ಮೂಲಕ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ. ಪ್ರತಿಯೊಬ್ಬರೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಹಾಗೂ ಸಾಮಾಜಿಕ ಬದುಕಿನಲ್ಲೂ ಸಹಿತ ಪ್ರತಿಯೊಬ್ಬರೂ ಪ್ರಶ್ನೆ ಕೇಳುವವರಾಗಬೇಕು. ನಮ್ಮ ಸನಾತನ ಧರ್ಮದ ರಕ್ಷಣೆಯನ್ನು ಮಾಡುವ ರಾಷ್ಟ್ರ, ಧರ್ಮವನ್ನು ಉಳಿಸುವ ಬೆಳೆಸುವ ನಾಯಕರಾಗಿ ವಿದ್ಯಾರ್ಥಿಗಳು ಹೊರಹೊಮ್ಮಬೇಕು ಎಂದು ತಿಳಿಸಿದರು.
ನೂತನ ಶೈಕ್ಷಣಿಕ ವರ್ಷದ ಮಂತ್ರಿಮಂಡಲದಲ್ಲಿ ಆಯ್ಕೆಯಾದ ನಾಯಕ, ಕಾರ್ಯದರ್ಶಿ ಹಾಗೂ ತರಗತಿ ಪ್ರತಿನಿಧಿಗಳಿಗೆ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಪ್ರತಿಜ್ಞಾ ವಿಧಿ ಬೋಧಿಸಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕ ಹರಿಕಿಶನ್ ಟಿ ಗೌಡ ಹಾಗೂ ಕಾರ್ಯದರ್ಶಿ ಸಂದೀಪ್ ಎಸ್ ಪಾಟೀಲ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶ್ರಾವ್ಯ ವೈ ಪ್ರಾರ್ಥಿಸಿ, ಜೀವಶಾಸ್ತ್ರ ಉಪನ್ಯಾಸಕಿ ಕೃತಿ ಸ್ವಾಗತಿಸಿದರು. ಕಾರ್ಯಕ್ರಮದ ಜೀವಶಾಸ್ತ್ರ ಉಪನ್ಯಾಸಕಿ ಗೀತಾ ಸಿ.ಕೆ ನಿರ್ವಹಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸುಚೇತರತ್ನಾ ವಂದಿಸಿದರು.

LEAVE A REPLY

Please enter your comment!
Please enter your name here