ಸೌಂದರ್ಯ ಪ್ರಜ್ಞೆಯಿಲ್ಲದವನು ದೇಶಕ್ಕೆ ಅಪಾಯಕಾರಿ-ಡಾ.ಎಂ. ಮೋಹನ ಆಳ್ವ
ಪುತ್ತೂರು: ಸೌಂದರ್ಯ ಪ್ರಜ್ಞೆ ಎನ್ನುವುದು ಜೀವನದಲ್ಲಿ ಬಹುಮುಖ್ಯ. ಅದು ದೇಶದ ದೊಡ್ಡ ಸಂಪತ್ತು. ಸೌಂದರ್ಯ ಪ್ರಜ್ಞೆಯಿರುವವರು ದೇಶ, ಕಲೆ, ಕಲಾವಿದ, ಪ್ರಕೃತಿ, ಸೌಹಾರ್ದಯು ತವಾದ ಬದುಕನ್ನು ಪ್ರೀತಿಸುತ್ತಾನೆ. ಸೌಂದರ್ಯ ಪ್ರಜ್ಞೆಯಿಲ್ಲದವನು ದೇಶಕ್ಕೆ ಅಪಾಯಕಾರಿ ವ್ಯಕ್ತಿ. ಸೌಂದರ್ಯ ಪ್ರಜ್ಞೆ ನನ್ನ ಬದುಕಿಗೂ ಹೊಸ ಆಯಾಮ ನೀಡಿದೆ. ಹೀಗಾಗಿ ಸೌಂದರ್ಯ ಪ್ರಜ್ಞೆಗೆ ಬಹಳಷ್ಟು ಒತ್ತು ನೀಡಿರುವ ನಾನು ಎಲ್ಲಾ ಕಲೆಗಳಿಗೆ ಪ್ರೋತ್ಸಾಹ ನೀಡಿ ಕಾರ್ಯಕ್ರಮಗಳ ಮೂಲಕ ಅವುಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದಾಗಿ ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು.
ಬಪ್ಪಳಿಗೆ ಜೈನ ಭವನದ ವಠಾರದಲ್ಲಿ ಜೂ.17ರಂದು ನಿವೃತ್ತ ನೌಕರರ ಸಂಘದ ವತಿಯಿಂದ ನೀಡುವ ಸ್ವರ್ಣ ಸಾಧನ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಶಿಕ್ಷಣ ಕ್ಷೇತ್ರವು ಇಂದು ವ್ಯಾಪಾರೀಕರಣವಾಗುತ್ತಿದೆ. ಇದರಿಂದ ಮೌಲ್ಯಗಳು ಕುಸಿಯುತ್ತಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳನ್ನು ಮುನ್ನಡುಸುವುದೇ ದೊಡ್ಡ ಸವಾಲಾಗಿದೆ. ಹೊರ ರಾಜ್ಯಗಳಿಂದ ಬಂದ ಶಿಕ್ಷಣ ಸಂಸ್ಥೆಗಳ ವ್ಯಾಪಾರಿಗಳಿಂದಾಗಿ ವಿದ್ಯಾ ಕ್ಷೇತ್ರ ಸವಾಲಾಗಿದೆ. ಸುಳ್ಳು, ವೈಭವೀಕರಣಗಳಿಂದಾಗುವ ವ್ಯಾಪಾರೀಕಣದಿಂದಾಗಿ ಮೌಲ್ಯಾಧಾರಿತ ವಿದ್ಯಾಭ್ಯಾಸ ನೀಡುವುದು ಪ್ರಶ್ನಾರ್ಥಕವಾಗಿದೆ. ಆರೋಗ್ಯ ಕ್ಷೇತ್ರದಲ್ಲಿಯೂ ಕಾರ್ಪೋರೇಟ್ ಶೈಲಿಯಿಂದಾಗಿ ಮಾನವೀಯತೆ, ಕರುಣೆಯಿಲ್ಲದೆ ಪ್ರತಿಯೊಂದು ಸಂಬಂಧವಿಲ್ಲದಂತಾಗಿದೆ. ಎಲ್ಲವೂ ಹಣಕ್ಕಾಗಿ ನಡೆಯುತ್ತಿದ್ದು ಬದುಕೇ ಬದಲಾಗಿದೆ. ಅಹಂ ನಮ್ಮಲ್ಲಿರಬಾರದು. ಸಂಪಾದನೆ ಪಾರದರ್ಶಕವಾಗಿರಬೇಕು. ಯಾವ ಸಮಯದಲ್ಲಿಯೂ ನಮ್ಮ ಜೀವನೋಲ್ಲಾಸಕ್ಕೆ ಕಡಿಮೆಯಾಗಬಾರದು. ಋಣಾತ್ಮಕ ಚಿಂತನೆಗಳನ್ನು ಮಾಡಬಾರದು ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ ಶಿವರಾಮಯ್ಯ ಮಾತನಾಡಿ, ಕಲೆ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸಾಧಕರಾಗಿರುವ ಡಾ.ಮೋಹನ ಆಳ್ವರವರಿಗೆ ನಿವೃತ್ತ ಸರಕಾರಿ ನೌಕರರ ಸಂಘವು ಅರ್ಹರಿಗೇ ಪ್ರಶಸ್ತಿ ನೀಡುತ್ತಿದೆ ಎಂದರು.
ಎಲ್ಲರೊಂದಿಗೆ ಉತ್ತಮ ಸಂಬಂಧವಿದ್ದರೆ ಎಲ್ಲವೂ ಉತ್ತಮವಾಗಿರಲು ಸಾಧ್ಯ. ಬೆಂಗಳೂರಿನಲ್ಲಿ ಇಲ್ಲಿನ ರೀತಿ ಬೀಳ್ಕೊಡುಗೆಗಳನ್ನು ಕಾಣಲು ಸಾಧ್ಯವಿಲ್ಲ. ವೃತ್ತಿಯ ಸಮಯದಲ್ಲಿ ಎಲ್ಲರೊಂದಿಗೆ ಉತ್ತಮ ಸಂಬಂಧವಿದ್ದರೂ ನಿವೃತ್ತಿಯ ಬಳಿಕ ಇಲ್ಲಿರುವ ರೀತಿ ಭಾವನಾತ್ಮಕ ಗುಣಗಳನ್ನು ಕಾಣಲು ಸಾಧ್ಯವಿಲ್ಲ. ವಯಸ್ಸಾದಾಗ ಮಕ್ಕಳು ತಮ್ಮೊಂದಿರಬೇಕು. ನಮ್ಮ ಯೋಗಕ್ಷೇಮವನ್ನು ನೋಡಬೇಕು ಎಂಬ ಹಂಬಲ ಪ್ರತಿಯೊಬ್ಬ ತಂದೆ-ತಾಯಿಯವರಲ್ಲಿರುತ್ತದೆ. ಆದರೆ ಮಕ್ಕಳು ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಕಡಿಮೆ. ನಾವು ನಾವಾಗಿ ಬದುಕಬೇಕಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಇತಿಹಾಸ ಸಂಶೋಧಕರಾಗಿರುವ ನಿವೃತ್ತ ಪ್ರಾಧ್ಯಾಪಕ ಡಾ| ಪುಂಡಿಕಾ ಗಣಪಯ್ಯ ಭಟ್ ಮಾತನಾಡಿ, ಸಣ್ಣ ವೈದ್ಯನಾಗಿ ತನ್ನ ಸೇವೆ ಪ್ರಾರಂಭಿಸಿದ ಮೋಹನ ಅಳ್ವರವರು ಕಲೆ, ಶೈಕ್ಷಣಿಕ, ಸಾಂಸ್ಕೃತಿಕ ಸಾಧನೆ ಮೂಡಬಿದರೆಯನ್ನೇ ಬೆಳಗಿಸಿದವರು. ನೂರಾರು ಜನ ಮಾಡುವ ಸಾಧನೆಯನ್ನು ಏಕವ್ಯಕ್ತಿ ಮಾಡಿ ತೋರಿಸಿದ್ದಾರೆ. ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಿ, ಬಳಿಕ ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ವಿಶ್ವರೂಪ ಪರಿಚಯವಾಗಿದೆ. ಶಿಕ್ಷಣ ಮತ್ತು ಸಂಸ್ಕೃತಿಯನ್ನು ಜೊತೆಯಾಗಿ ಕೊಂಡುಹೋಗುವ ಮೂಲಕ ಸಾಂಸ್ಕೃತಿಕ ಪ್ರತಿಭೆ, ರಾಯಭಾರಿಗಳನ್ನಾಗಿ ಬೆಳೆಸಿದ್ದಾರೆ. ಸಾಂಸ್ಕೃತಿಕ ವೇದಿಕೆಗಳ ಮೂಲಕ ಸುಸಂಸ್ಕೃತ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂಘಟನಾ ಚಾತುರ್ಯ, ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ಅನನ್ಯ ಸಾಧಕರಾಗಿರುವ ಮೋಹನ ಆಳ್ವರವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಐತ್ತಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘ ನಿವೃತ್ತರ ನೌಕರರ ಸಂಘವಾದರೂ ಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಘವು ಕಳೆದ ಬಾರಿ ಸುವರ್ಣ ಮಹೋತ್ಸವ ಕಂಡಿದ್ದು ಇದರ ನೆನಪಿಗಾಗಿ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ , ಕೃಷಿ ಹಾಗೂ ನೀರಾವರಿ ಕ್ಷೇತ್ರದ ಸಾಧಕರಿಗೆ `ಸ್ವರ್ಣ ಸಾಧನ ಪ್ರಶಸ್ತಿ’ ನೀಡಲಾಗುತ್ತಿದ್ದು ಕೃಷಿ ಹಾಗೂ ನೀರಾವರಿ ಕ್ಷೇತ್ರದ ಸಾಧಕ ಅಮೈ ಮಹಾಲಿಂಗ ನಾಯ್ಕರವರಿಗೆ ಪ್ರಥಮ ಬಾರಿಗೆ ನೀಡಿದೆ. ಈ ಬಾರಿ ಡಾ. ಮೋಹನ ಆಳ್ವರವರಿಗೆ ನೀಡಲಾಗುತ್ತಿದೆ. ಎಲ್ಲರ ಆಶಯದಂತೆ ಸಂಘಕ್ಕೆ ಸ್ವಂತ ಕಟ್ಟಡ ಹೊಂದಿದೆ. ಇಲ್ಲಿ ಕಚೇರಿಯನ್ನು ಪ್ರಾರಂಭಿಸಿ ಸದಸ್ಯರ ಸಮಸ್ಯೆಗಳಿಗೆ ಸ್ಪಂಧಿಸಲಾಗುತ್ತಿದ್ದು ಹಲವಾರು ಸಮಸ್ಯೆಗಳನ್ನು ಪರಿಹರಿಸಿದ ಕೀರ್ತಿ ಸಂಘಕ್ಕಿದೆ ಎಂದರು.
ಪ್ರಶಸ್ತಿ ಪ್ರಧಾನ:
ಕಲೆ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧಕ ಆಳ್ವಾ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವರವರಿಗೆ ಈ ವರ್ಷದ ಸ್ವರ್ಣ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಲು, ಫಲಪುಷ್ಫ, ಪ್ರಶಸ್ತಿ ಪತ್ರ, ರೂ.15,000ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸುಮಂಗಲಿಯರಿಂದ ಆರತಿ ಬೆಳಗಿಸಿ, ತಿಲಕವಿಟ್ಟು ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು.
ಅಭಿನಂದನೆ, ಸನ್ಮಾನ:
ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600ರಲ್ಲಿ 600 ಅಂಕಗಳಿಸಿದ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನನ್ಯ ಕೆ.ಎ., ಎಸ್ಎಸ್ಎಲ್ಸಿಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಉತ್ತಮ್ ಜಿ., ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ತೇಜಸ್ ಹಾಗೂ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಹಿಮಾನಿ ಎ.ಸಿ. ಅನುಪಸ್ಥಿತಿಯಲ್ಲಿ ಆಕೆಯ ತಂದೆಯನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ 2023 ಮಾರ್ಚ್ 31ಕ್ಕೆ 75 ವರ್ಷ ಪೂರ್ಣಗೊಳಿಸಿದ 38 ಮಂದಿ ಸದಸ್ಯರು, 80 ವರ್ಷ ಪೂರ್ಣಗೊಳಿಸಿದ 12 ಮಂದಿ ಸದಸ್ಯರು ಹಾಗೂ 85 ವರ್ಷ ಪೂರ್ಣಗೊಳಿಸಿದ 11 ಮಂದಿ ಸೇರಿದಂತೆ ಒಟ್ಟು 61 ಮಂದಿ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಬೆಳ್ತಂಗಡಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ, ಕಾರ್ಯದರ್ಶಿ ತಿರುಮಲೇಶ್ವರ ಭಟ್, ಕೋಶಾಧಿಕಾರಿ ಶಾಂತಿ ಟಿ ಹೆಗಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು
ವಿವೇಕಾನಂದ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳಾದ ವೈಷ್ಣವೀ ಪದ್ಯಾಣ, ಆಶಿಕಾ, ಪ್ರತೀಕ್ಷಾ ಹಾಗೂ ಪ್ರತಿಭಾ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರಾಮದಾಸ ಗೌಡ ಎಸ್. ಸ್ವಾಗತಿಸಿದರು. ಎ.ವಿ ನಾರಾಯಣ, ಕಾಂಚನ ಸುಂದರ ಭಟ್, ಡಾ.ಮಾಧವ ಭಟ್, ಸುಂದರ ನಾಯ್ಕ್ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ರಾಧಾಕೃಷ್ಣ ಭಟ್, ವತ್ಸಲಾ ರಾಜ್ಞಿ, ಶರತ್ ಕುಮಾರ್ ರಾವ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ ಭಟ್ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆಯ ನಂತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.