ಲಂಚ, ಭ್ರಷ್ಟಾಚಾರವಿಲ್ಲದ ಆಡಳಿತದಿಂದ ಬಂಟ ಸಮಾಜಕ್ಕೆ ಗೌರವ ತರುತ್ತೇನೆ- ಅಶೋಕ್ ರೈ ಘೋಷಣೆಗೆ ಮೆಚ್ಚುಗೆ

0

ಪಠ್ಯಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ, ಗ್ಯಾರೆಂಟಿ ಯೋಜನೆಗಳ ಚರ್ಚೆಗಿಂತ ಲಂಚ, ಭ್ರಷ್ಟಾಚಾರ ಮುಕ್ತ ಊರಿನ ಚರ್ಚೆ ಪ್ರಾಮುಖ್ಯವಾಗಲಿ

ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಯಿಂದ ರಾಜ್ಯ ದಿವಾಳಿಯತ್ತ -ಪ್ರಧಾನಿ ಮೋದೀಜಿ, ಬಿಜೆಪಿ ನಾಯಕರ ಚಿಂತನೆಯಾದರೆ ಅದನ್ನು ತಿರಸ್ಕರಿಸಲು ಜನತೆಗೆ ಕರೆ ಕೊಟ್ಟು ರಾಜ್ಯವನ್ನು ರಕ್ಷಿಸಲಿ

ಪುತ್ತೂರು ಬಂಟರ ಸಮಾಜದಿಂದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಅದಕ್ಕೆ ಉತ್ತರಿಸಿದ ಅಶೋಕ್ ಕುಮಾರ್ ರೈಯವರು ತಾನು ಲಂಚ, ಭ್ರಷ್ಟಾಚಾರ ರಹಿತ ಹಾಗೂ ಬಡ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಆಡಳಿತ ನೀಡುವ ಮೂಲಕ ಬಂಟ ಸಮಾಜಕ್ಕೆ ಹೆಮ್ಮೆ, ಗೌರವ ತರುತ್ತೇನೆ ಎಂದು ಘೋಷಿಸಿದ್ದಾರೆ. ಅದಕ್ಕೆ ಅಲ್ಲಿ ಸೇರಿದ ಜನರಿಂದ ಚಪ್ಪಾಳೆಯ ಪ್ರೋತ್ಸಾಹ ದೊರಕಿದೆ. ಅಂತಹ ಯೋಜನೆ ಎಲ್ಲರೂ ಮಾಡಿದರೆ, ಎಲ್ಲಾ ಪಕ್ಷದ ನಾಯಕರುಗಳು ಆ ಪ್ರತಿಜ್ಞೆ ಮಾಡಿದರೆ ಏನಾಗಬಹುದು? ನಮ್ಮ ಊರಿನ ಎಲ್ಲಾ ಸಮಸ್ಯೆಗಳಿಗೆ, ಗಲಾಟೆಗಳಿಗೆ, ಅನ್ಯಾಯಕ್ಕೆ, ಶೋಷಣೆಗೆ ಮತ್ತು ಬಡವರ ದುಖಃಕ್ಕೆ ಕಾರಣವಾದ ಲಂಚ, ಭ್ರಷ್ಟಾಚಾರ ರಹಿತ ಉತ್ತಮ ಸೇವೆ ನೀಡುವ ಸಮಾಜ ನಮ್ಮದಾಗಲಿಕ್ಕಿಲ್ಲವೇ? ಇಂದು ಟಿವಿ, ಮಾಧ್ಯಮಗಳಲ್ಲಿ ದಿನ ಬೆಳಗಾದರೆ ಪಠ್ಯ ಪುಸ್ತಕ ಪರಿಷ್ಕರಣೆ, ಮತಾಂತರ ನಿಷೇಧ ಕಾಯ್ದೆ, ಕಾಂಗ್ರೆಸ್‌ನ ಗ್ಯಾರೆಂಟಿಗಳ ಬಗ್ಗೆ ಚರ್ಚೆಯಾಗುತ್ತಿದೆ. ಅದನ್ನು ತಜ್ಞರಿಗೆ ಬಿಟ್ಟುಕೊಟ್ಟು ಅಶೋಕ್ ರೈಯವರ ಘೋಷಣೆಯ ಅನುಷ್ಠಾನದ ಬಗ್ಗೆ, ಲಂಚ, ಭ್ರಷ್ಟಾಚಾರ ಮುಕ್ತ ಉತ್ತಮ ಸೇವೆ ನೀಡುವ ವ್ಯವಸ್ಥೆಯ ಬಗ್ಗೆ ಪ್ರಾಮುಖ್ಯತೆ ನೀಡಿ ಮಾಧ್ಯಮಗಳು, ರಾಜಕೀಯ ನಾಯಕರುಗಳು ಚರ್ಚೆ ಮಾಡಲಿ ಎಂದು ಕರೆ ನೀಡುತ್ತಿದ್ದೇವೆ.

ಪಠ್ಯ ಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಯಾರದ್ದೋ ಪಾಠ ತೆಗೆದು ಯಾರದ್ದೋ ಹಾಕುವುದರಿಂದ ಆಗುವ ತೊಂದರೆಗಳೇನು?, ಪ್ರಯೋಜನಗಳೇನು? ಎಂಬುವುದನ್ನು ತಜ್ಞರಿಗೆ ಬಿಟ್ಟು ಕೊಡುವುದರೊಂದಿಗೆ ತಪ್ಪು ಮಾಹಿತಿ ನೀಡದಂತೆ ಜಾಗೃತೆ ವಹಿಸುವಂತೆ ಜನತೆ ಆಗ್ರಹಿಸಬೇಕಾಗಿದೆ. ಚರ್ಚೆಯನ್ನು ಅನಗತ್ಯವಾಗಿ ಸಾರ್ವಜನಿಕಗೊಳಿಸುವ ಬದಲು ಶಿಕ್ಷಣ ತಜ್ಞರ ನಡುವೆ ನಡೆಯುವಂತೆ ಸೀಮಿತಗೊಳಿಸುವುದು ಒಳಿತು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಮತಾಂತರ ನಿಷೇಧ ಕಾನೂನು ಜಾರಿ ಮತ್ತು ರದ್ಧು ಎರಡರಲ್ಲಿಯೂ ಆಗಿರುವ ತೊಂದರೆಗಳು ಮತ್ತು ಪ್ರಯೋಜನಗಳನ್ನು ತಜ್ಞರ ಮತ್ತು ಜನರ ಮುಂದಿಟ್ಟು ಮಾತನಾಡುವುದು ಉತ್ತಮ.

ಸ್ವ ಇಚ್ಛೆಯ ಮತಾಂತರ ಆತನ ಹಕ್ಕು, ಬಲಾತ್ಕಾರದ ಮತಾಂತರ ಕಾನೂನು ಬಾಹಿರ. ಮತಾಂತರಗೊಂಡ ವ್ಯಕ್ತಿ ಪುನಃ ಮಾತೃ ಧರ್ಮಕ್ಕೆ ಮರಳಬಹುದು ಯಾವುದೇ ಧರ್ಮದ ವ್ಯಕ್ತಿ ಸ್ವ ಇಚ್ಛೆಯಿಂದ ಜಗತ್ತಿನಲ್ಲಿರುವ ಯಾವುದೇ ಧರ್ಮಕ್ಕೆ ಮತಾಂತರಗೊಳ್ಳಬಹುದು. ಆ ಧರ್ಮದಿಂದ ಪುನಃ ತನ್ನ ಮಾತೃಧರ್ಮಕ್ಕೆ ಬರಬಹುದು. ಇತರ ಧರ್ಮಕ್ಕೂ ಮತಾಂತರವಾಗಬಹುದು. ಅದು ಎಲ್ಲರಿಗೂ ಇರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು. ವಿಶ್ವಸಂಸ್ಥೆ ಅದಕ್ಕೆ ಮಾನ್ಯತೆ ನೀಡಿದೆ. ಆದರೆ ಬಲಾತ್ಕಾರದ ಮತಾಂತರ ಅದು ಯಾವುದೇ ಕಾರಣಕ್ಕೆ ಆಗುವುದಿದ್ದರೂ ತಪ್ಪು ಮತ್ತು ಕಾನೂನು ಬಾಹಿರವಾಗಿರುತ್ತದೆ. ಆದುದರಿಂದ ಇಲ್ಲಿ ಬಲಾತ್ಕಾರದ ಮತಾಂತರವಾಗುವುದಿದ್ದರೆ ಅದಕ್ಕೆ ಕಾರಣ ಏನು?, ಯಾವ್ಯಾವ ಆಮಿಷಗಳಿಗೆ, ಒತ್ತಡಗಳಿಗೆ ಒಳಗಾಗುತ್ತಾರೆ ಎಂಬುವುದನ್ನು ಅರಿತು ಅದನ್ನು ತಡೆಯಲು, ಸಮಾಜವನ್ನು ರಕ್ಷಿಸಲು ಆಯಾ ಸಮಾಜದ ನಾಯಕರುಗಳು, ಸರಕಾರ ಮುಂದೆ ಬರಬೇಕು. ಅದಕ್ಕೆ ಬೇಕಾದ ಕಾನೂನುಗಳನ್ನು ರಚಿಸಿಕೊಳ್ಳಬೇಕು. ಉದಾ: ರಾಜಕೀಯದಲ್ಲಿ ಆಯಾ ಪಕ್ಷದವರು ತಮ್ಮ ಪಕ್ಷದ ಕಾರ್ಯಕರ್ತರ ಹಿತವನ್ನು ಕಾಪಾಡಿ, ರಕ್ಷಿಸಿ ಪಕ್ಷಾಂತರವಾಗದಂತೆ ನೋಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ಕಾನೂನಿನ ವ್ಯವಸ್ಥೆಯನ್ನು ಚುನಾವಣಾ ಆಯೋಗ ರಚಿಸಿದೆ. ಆದರೂ ಆಯಾ ಪಕ್ಷದ ನಾಯಕರುಗಳು ತಮ್ಮ ಪಕ್ಷದ ಮೇಲೆ ಕಾರ್ಯಕರ್ತರಿಗೆ ಸದಾ ಅಭಿಮಾನ ಇರುವಂತೆ ನೋಡಿಕೊಳ್ಳುತ್ತಾರೆ. ಒಂದು ವೇಳೆ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗಿ ಪಕ್ಷಾಂತರವಾದರೆ ಅವರನ್ನು ಪುನಃ ತಮ್ಮ ಕಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಾರೆ ಕೆಲವೊಮ್ಮೆ ಯಶಸ್ವಿಯೂ ಆಗುತ್ತಾರೆ. ಅದೇ ರೀತಿಯಲ್ಲಿ ಎಲ್ಲಾ ಧರ್ಮದವರು ತಮ್ಮ ತಮ್ಮ ಧರ್ಮದ ಅನುಯಾಯಿಗಳನ್ನು ರಕ್ಷಿಸಿ ಅವರ ಹಿತವನ್ನು ಕಾಪಾಡಬೇಕು. ತಮ್ಮ ತಮ್ಮ ಧರ್ಮದಲ್ಲಿರುವ, ಪದ್ಧತಿ, ಆಚರಣೆಯಲ್ಲಿರುವ ಕುಂದು ಕೊರತೆಗಳನ್ನು ನಿವಾರಿಸಿ ಜನರಿಗೆ ಹಿತ ಮತ್ತು ರಕ್ಷಣೆ ನೀಡಬೇಕು. ಹಾಗೆ ಮಾಡಿದರೆ ಆಮಿಷಕ್ಕೆ ಮತ್ತು ಒತ್ತಡಕ್ಕೆ ಒಳಗಾಗಿ ಮತಾಂತರವಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಒಂದು ವೇಳೆ ಮತಾಂತರಗೊಂಡರೂ ಅವರು ಪುನಃ ಸ್ವ ಧರ್ಮಕ್ಕೆ ಬರಲು ಹಾತೊರೆಯುವುದರಿಂದ ಅವರನ್ನು ಪುನಃ ತಮ್ಮ ಧರ್ಮಕ್ಕೆ ಕರೆಸಿಕೊಳ್ಳುವ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು, ಅಂತಹ ಸಂದರ್ಭಗಳಲ್ಲಿ ಅದಕ್ಕೆ ಬೇಕಾದ ಕಾನೂನಿನ ಶಕ್ತಿಯನ್ನು ಪಡೆಯಲಿ ಎಂಬ ಸಲಹೆ ನೀಡಲು ಇಚ್ಛಿಸುತ್ತೇನೆ. ಈ ನಡುವೆ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಮತ್ತು ತಮ್ಮ ತಮ್ಮ ಊರುಗಳಲ್ಲಿ ಯಾರಾದರು ಮತಾಂತರಕ್ಕೆ ಒಳಗಾಗಿದ್ದಾರೆಯೇ? ಆಗಿದ್ದರೆ ಎಷ್ಟು ಜನ ಮತಾಂತರಕ್ಕೆ ಒಳಗಾಗಿದ್ದಾರೆ ಎಂಬುವುದನ್ನು ತಿಳಿದುಕೊಂಡು ಈ ಕಾನೂನಿನ ಪ್ರಯೋಜನ, ತೊಂದರೆಗಳ ಬಗ್ಗೆ ಜನಾಭಿಪ್ರಾಯವನ್ನು ಪಡೆದು ಆ ನಂತರ ಕಾನೂನು ಬೇಕೇ? ಬೇಡವೇ? ಇದ್ದರೆ ಹೇಗೆ ಇರಬೇಕು ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳಬಹುದು, ಪರಸ್ಪರ ದ್ವೇಷ ಉಂಟು ಮಾಡುವ ಚರ್ಚೆಗೆ ವಿರಾಮ ಹಾಕಬಹುದು ಎಂದು ತಿಳಿಸಲು ಇಚ್ಛಿಸುತ್ತೇನೆ.

ಗ್ಯಾರೆಂಟಿ ಯೋಜನೆ ಸರಿಯಲ್ಲ ಎಂದು ಕಂಡು ಬಂದರೆ ಕಾಂಗ್ರೆಸ್ ತಪ್ಪನ್ನು ಒಪ್ಪಿಕೊಂಡು ಯೋಜನೆಗಳನ್ನು ಕಡಿತಗೊಳಿಸಲಿ
ಕಾಂಗ್ರೆಸ್ ಪಕ್ಷ ಗ್ಯಾರೆಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಅದರ ಬಗ್ಗೆ ಪೂರ್ಣ ತಯಾರಿ ನಡೆಸಲಿಲ್ಲ ಎಂಬುವುದಂತು ಸ್ಪಷ್ಟ. ಆದರೆ ಅದನ್ನು ಕೊಡಲು ಸಾಧ್ಯವಿದೆ ಎಂಬುವುದು ಅಷ್ಟೇ ಸತ್ಯ. ಆದರೆ ಅದರಿಂದ ಜನರಿಗೆ ಪ್ರಯೋಜನವಾಗುತ್ತದೆಯೇ?, ರಾಜ್ಯ ದಿವಾಳಿಯತ್ತ ಸಾಗಲಿದೆಯೇ? ಎಂಬುವುದು ಗಂಭೀರ ಚರ್ಚೆಯ ವಿಷಯ. ಕಾಂಗ್ರೆಸ್‌ನವರು ಇದರಿಂದ ಬಡ, ಮಧ್ಯಮ ವರ್ಗದ ಜನರಿಗೆ ಜೀವನ ಸಾಗಿಸಲು ಪ್ರಯೋಜನ ಎಂದು ಹೇಳಿದರೆ, ಪ್ರಧಾನಿ ಮೋದೀಜಿಯವರಿಂದ ಹಿಡಿದು ಬಿಜೆಪಿ ನಾಯಕರೆಲ್ಲ ಅದು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುವ, ಶ್ರೀಲಂಕಾ ಮತ್ತು ಪಾಕಿಸ್ತಾನದಂತೆ ಮಾಡುವ ಯೋಜನೆ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಗ್ಯಾರೆಂಟಿ ಯೋಜನೆ ಸರಿಯಲ್ಲ ಎಂದು ಕಂಡು ಬಂದರೆ, ತಪ್ಪನ್ನು ಒಪ್ಪಿಕೊಂಡು ಯೋಜನೆಗಳನ್ನು ಕಡಿತಗೊಳಿಸಿ ಅಗತ್ಯಉಳ್ಳ ಫಲಾನುಭವಿಗಳಿಗೆ ಮಾತ್ರ ಕೊಡುವುದು ಒಳಿತು. ಪ್ರಧಾನಿ ಮೋದೀಜಿ ಹೇಳುವಂತೆ ಅದು ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುವ ಯೋಜನೆ ಹೌದಾದರೆ, ಅದನ್ನು ಬಿಜೆಪಿ ನಾಯಕರುಗಳು ನಂಬಿದ್ದರೆ ಆ ಯೋಜನೆಗಳನ್ನು ಅವರು ವಿರೋಧಿಸಲೇಬೇಕು. ತಮ್ಮ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ಕಾಂಗ್ರೆಸ್‌ನ ಕೊಡುಗೆಗಳನ್ನು ನಿರಾಕರಿಸುವಂತೆ, ಬಹಿಷ್ಕರಿಸುವಂತೆ ಕರೆ ನೀಡಬೇಕು. ಅಕ್ಕಿಯನ್ನು ಕಡಿಮೆ ದರದಲ್ಲಿ ಕೊಡುವಂತೆ ಕೇಂದ್ರಕ್ಕೆ ಆಗ್ರಹಿಸಿ ಕರ್ನಾಟಕ ಜನತೆಗೆ ಪ್ರಯೋಜನ ದೊರೆಯುವಂತೆ ಮಾಡಬೇಕು. ಆ ರೀತಿ ಉಳಿಸಿದ ಹಣದಿಂದ ಯಾವ್ಯಾವ ಯೋಜನೆ ಕೈಗೊಳ್ಳಬೇಕು ಎಂದು ಸರಕಾರಕ್ಕೆ ಸಲಹೆ ನೀಡಬೇಕು. ಆ ಮೂಲಕ ರಾಜ್ಯ ದಿವಾಳಿ ಆಗುವುದನ್ನು ತಪ್ಪಿಸಬೇಕು. ಪೆಟ್ರೋಲ್ ಬೆಲೆ ಏರಿದಾಗ, ಅಡುಗೆ ಅನಿಲ ದರ ಹೆಚ್ಚಾದಾಗ ಜನತೆ ಅದನ್ನು ದೇಶಕ್ಕಾಗಿ ಎಂದು ಸಹಿಸಿಕೊಂಡಿದ್ದಾರೆ. ಈ ಹಿಂದೆ ಅಡುಗೆ ಅನಿಲಕ್ಕೆ ಇದ್ದ ಸಬ್ಸಿಡಿ ಹಣವನ್ನು ಸ್ವ ಇಚ್ಛೆಯಿಂದ ಕೆಲವರು ಬಿಟ್ಟು ಕೊಟ್ಟಿದ್ದಾರೆ. ಹೀಗಿರುವಾಗ ಬಿಜೆಪಿ ನಾಯಕರ ಕರೆಗೆ ಜನ ಸ್ಪಂದಿಸುವುದು ಖಂಡಿತ. ಹಾಗೆ ಮಾಡುವುದನ್ನು ಬಿಟ್ಟು ಬಿಜೆಪಿ ನಾಯಕರುಗಳು ತಾವೇ ಮುಂದೆ ನಿಂತು ಯೋಜನೆಯ ಫಲವನ್ನು ಪಡೆದುಕೊಳ್ಳಲು ಆಗ್ರಹಿಸುತ್ತಿರುವುದು ಯಾಕೆ? ಎಂಬುವುದು ಆಶ್ಚರ್ಯಕ್ಕೆ ಕಾರಣವಾಗಿದೆ. ರಾಜ್ಯ ದಿವಾಳಿಯತ್ತ ಸಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾದಂತೆ ಆದ ಮೇಲೆ ಜನರು ರೊಚ್ಚಿಗೆದ್ದು, ದೊಂಬಿಗಳು ಉಂಟಾಗಿ ತಮಗೆ ಆಡಳಿತ ದೊರಕುತ್ತದೆ ಎಂದು ಕಾಯುತ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡುವುದು ಒಳಿತಲ್ಲವೇ?.

ಒಟ್ಟಿನಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಬೀದಿನಾಯಿಗಳಂತೆ ಪರಸ್ಪರ ಕಚ್ಚಾಡುವುದು ಬಿಟ್ಟು ಜನರ ಹಿತಕ್ಕಾಗಿ ಕೆಲಸ ಮಾಡಲಿ ಎಂಬ ಉದ್ಧೇಶಕ್ಕೆ ಈ ಲೇಖನವನ್ನು ಸಮರ್ಪಿಸಿದ್ದೇನೆ. -ಡಾ. ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here