ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಇರ್ದೆ ಗ್ರಾಮದ ಮುರುಕಲು ಮನೆಯೊಂದರ ಮಾಡು ದುರಸ್ತಿ ಮಾಡುವ ಮೂಲಕ ಮಾನವೀಯತೆ ಮೆರೆದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಇರ್ದೆ ಗ್ರಾಮದ ಬೈಲಾಡಿ ಬಾಬು, ಶೀಲಾವತಿ ದಂಪತಿಗಳು ತಮ್ಮ ಮನೆ ಮುರಿದು ಬೀಳುವ ಸ್ಥಿತಿಯಲ್ಲಿದ್ದು ಮನೆಯ ಮಾಡನ್ನು ದುರಸ್ತಿ ಮಾಡಿಕೊಡುವಂತೆ ವಿಪತ್ತು ನಿರ್ವಹಣಾ ತಂಡಕ್ಕೆ ಮನವಿಯನ್ನು ಸಲ್ಲಿಸಿದ್ದರು. ಮನವಿ ಸ್ವೀಕರಿಸಿ ಸ್ಪಂದಿಸಿದ ತಂಡ ಜೂ.18 ರಂದು ಬೀಳುವ ಸ್ಥಿತಿಯಲ್ಲಿದ್ದ ಹಂಚಿನ ಮಾಡನ್ನು ತೆಗೆದು ಸ್ವಚ್ಚಗೊಳಿಸಿ ಸಿಮೆಂಟ್ ಶೀಟ್ ಅಳವಡಿಸುವ ಮೂಲಕ ಮನೆಗೆ ಕಾಯಕಲ್ಪ ನೀಡಿದೆ.
ಕಡು ಬಡವರಾದ ಶೀಲಾವತಿ ಬಾಬು ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮದುವೆ ಮಾಡಿಕೊಡಲಾಗಿದೆ. ಕೂಲಿ ಮಾಡಿ ಜೀವಿಸುತ್ತಿದ್ದ ಬಾಬು ಅನಾರೋಗ್ಯಕ್ಕೆ ತುತ್ತಾದ ಕಾರಣ ತುತ್ತು ಕೂಳಿಗೂ ಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಪರಿಸ್ಥಿತಿಯಲ್ಲಿ ಪತ್ನಿ ಶೀಲಾವತಿ ಮೇಲೆ ಮನೆಯ ಜವಾಬ್ದಾರಿ ಬಿದ್ದು 60ರ ಇಳಿ ವಯಸ್ಸಿನಲ್ಲೂ ದುಡಿದು ಕಷ್ಟದ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಯಿತು. ಈ ನಡುವೆ ನೆರಳು ನೀಡುತ್ತಿದ್ದ ಮನೆಯ ಮಾಡು ಕುಸಿದು ಬೀಳುವ ಸ್ಥಿತಿಗೆ ತಲುಪಿದ್ದು ಇದ್ದ ಆಶ್ರಯವನ್ನು ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಶೋಚನೀಯ ಸ್ಥಿತಿಯಲ್ಲಿ ಕುಟುಂಬಕ್ಕೆ ಶೌರ್ಯ ವಿಪತ್ತು ನಿರ್ವಹಣಾ ತಂಡ ಬೆನ್ನೆಲುಬಾಗಿ ನಿಂತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡು ರಿಪೇರಿ ಮಾಡುವ ಮೂಲಕ ನೊಂದ ವೃಧ್ಧ ದಂಪತಿಗಳ ಮುಖದಲ್ಲಿ ಮಂದಹಾಸ ಮೂಡಲು ಕಾರಣರಾಗಿದ್ದಾರೆ. ತಂಡದ ಸಮಾಜಮುಖಿ ಕಾರ್ಯ ನಾಡಿನ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ.
ತಂಡದ ಅಧ್ಯಕ್ಷ ಆನಂದ, ಸಂಯೋಜಕಿ ಪದ್ಮಾವತಿ. ಡಿ ಹಾಗೂ ಎಲ್ಲಾ ಸದಸ್ಯರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು ಯೋಜನೆಯ ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಚಂದ್ರಶೇಖರ ಉಪಸ್ಥಿತರಿದ್ದರು.