ವಿವೇಕಾನಂದ ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ

0

ಸಾಂಸ್ಕೃತಿಕ ಕಲೆಗಳು ಶಿಕ್ಷಣದ ಅವಿಭಾಜ್ಯ ಅಂಗ-ಪ್ರೊ. ವಿಷ್ಣು ಗಣಪತಿ ಭಟ್
ಪುತ್ತೂರು: ಸಾಂಸ್ಕೃತಿಕ ಕಲೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ಭಾರತೀಯ ಮನಸ್ಸಿನ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನಸ್ಸಿಗೆ ಮನೋರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನ ಶೀಲರನ್ನಾಗಿಸುತ್ತದೆ. ಎಲ್ಲಾ ಕಲೆಗಳನ್ನು ಗೌರವಿಸಿ ಪ್ರೀತಿಸಿದಾಗ ಅದು ನಮ್ಮನ್ನುಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಹೇಳಿದರು.


ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ ಆಯೋಜಿಸಲಾದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ-2023ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾಲ್ಕು ಗೋಡೆಯ ಶಿಕ್ಷಣ ಪ್ರಸ್ತುತ ಕಾಲಘಟ್ಟದಲ್ಲಿ ಸಾಕಾಗುವುದಿಲ್ಲ. ಜ್ಞಾನ ಹೆಚ್ಚಿಸಿಕೊಳ್ಳಬೇಕಾದರೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಓದುವುದರ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ ಅತ್ಯಗತ್ಯ.ಭಾರತೀಯ ಕಲೆಗಳು ಸಂಸ್ಕೃತಿಯನ್ನು ಬೆಳೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತಿದೆ ಸಂಗೀತವು ಹೃದಯಕ್ಕೆ ಆನಂದವನ್ನೂ ಬುದ್ಧಿಗೆ ಜ್ಞಾನವನ್ನೂ ನೀಡುತ್ತದೆ. ಬದುಕಿನಲ್ಲಿ ಶಿಸ್ತನ್ನು ರೂಪಿಸುತ್ತದೆ ಅಂತಃ ಸತ್ವವನ್ನು ಅರಳಿಸುತ್ತದೆ. ಶ್ರದ್ಧೆ, ಸಹನೆ. ಸತತ ಪ್ರಯತ್ನ ಮತ್ತು ಆತ್ಮ ವಿಶ್ವಾಸದಿಂದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಲು ಸಾಧ್ಯ. ಅವಕಾಶಗಳು ಸಿಕ್ಕಿದಾಗ ಧೃತಿಗೆಡದೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡಾಗ ವಿದ್ಯಾರ್ಥಿಗಳು ಜಯಶೀಲರಾಗಲು ಸಾಧ್ಯ ಎಂದರು.


ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಜೆಸಿಐನ ರಾಷ್ಟ್ರೀಯ ರಬೇತುದಾರ, ಶಿಕ್ಷಣ ತಜ್ಞ ಮತ್ತು ಪ್ರಗತಿಪರ ಉದ್ಯಮಿ ಕೃಷ್ಣಮೋಹನ್ ಪಿ. ಎಸ್ ಮಾತನಾಡಿ ಕಲಿಕೆಯ ಜೊತೆ ಜೊತೆಗೆ ಲೋಕಜ್ಞಾನವು ಅತ್ಯಗತ್ಯ. ಈ ಮೂಲಕ ವಿದ್ಯಾರ್ಥಿಗಳು ಚುರುಕಾಗಲು ಸಾಧ್ಯವಿದೆ. ಕಾಲೇಜು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಲ್ಲ, ಇಲ್ಲಿ ಬಹಳ? ಅವಕಾಶಗಳಿವೆ, ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು.ಪ್ರತಿಭೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಡಕವಾಗಿರುತ್ತದೆ. ಸತತ ಪರಿಶ್ರಮದೊಂದಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದಾಗ ತೃಪ್ತಿಯನ್ನು ಹೊಂದಬಹುದು. ಸೋಲು ಬಂದಾಗಲೆಲ್ಲ ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು.ಯಾವುದೇ ವಿಷಯದಲ್ಲಿ ವಿಶೇಷ ಪ್ರಾವಿಣ್ಯತೆಯನ್ನು ಪಡೆದು ಅದರಲ್ಲಿ ವಿಶೇಷ ಸಾಧನೆ ಮಾಡಿ ತೋರಿಸಬೇಕು. ತನ್ನ ಗುರಿಯನ್ನು ವಿದ್ಯಾರ್ಥಿಗಳು ಈಗಲೇ ನಿರ್ಧಾರ ಮಾಡಿಕೊಂಡು ಅದರಕಡೆಗೆ ಗಮನ ಹರಿಸಿದಾಗ ಸಾಧನೆಯ ಉತ್ತುಂಗಕ್ಕೆ ಏರಲು ಸಾಧ್ಯ. ಹಾಗೆಯೇ ನಮಗೆ ನಾವೇ ಸವಾಲು ಹಾಕಿಕೊಂಡಾಗ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ. ಜ್ಞಾನವನ್ನು ಗಳಿಸುವುದರ ಜೊತೆಗೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಅನ್ವಯಕೂಡ ಅಷ್ಟೇ ಪ್ರಾಮುಖ್ಯವಾದುದು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲರಾಜ್ಞಿ ಮಾತನಾಡಿ ಉನ್ನತ ಮಟ್ಟಕ್ಕೆಏರಲು ಕಾರಣವಾದ ಮೆಟ್ಟಿಲುಗಳ ಸ್ಮರಣೆ ನಮಗೆ ಯಾವತ್ತೂ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕೃತಿ ನೀಡಿದಾಗ ಅದು ಪ್ರತಿಭೆಗೆ ಅವಕಾಶ ನೀಡುತ್ತದೆ.ಬದುಕಿನಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡಾಗ ಜೀವನದ ಪಯಣ ಸುಗಮವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸತತ ಪ್ರಯತ್ನದಿಂದ ಇಂತಹ ಗುರಿಯನ್ನು ಸಾಧಿಸಲು ಸಾಧ್ಯ ಎಂದರು.


ಎಸ್‌ಎಸ್‌ಎಲ್‌ಸಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸುಮಾರು 72 ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಗೋಪಾಲಕೃಷ್ಣ ಭಟ್, ಕೋಶಾಧಿಕಾರಿ ಸಚಿನ್ ಶೆಣೈ ಕೆ, ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್‌ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ವಂದಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿ ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮ ದಬಳಿಕ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here