ಉಪ್ಪಿನಂಗಡಿ: ಗ್ರಾಹಕರೊಬ್ಬರ ಕೈಯಿಂದ ಆಕಸ್ಮಿಕವಾಗಿ ಜಾರಿ ಬಿದ್ದಿದ್ದ ಬ್ರಾಸ್ ಲೈಟೊಂದು ಇಲ್ಲಿನ ಜ್ಯೂಸ್ ಸೆಂಟರಿನಲ್ಲಿದ್ದು, ನೈಜ ವಾರೀಸುದಾರರ ಪತ್ತೆಗಾಗಿ ಅಂಗಡಿ ಮಾಲಕರು ಪೊಲೀಸರ ನೆರವು ಯಾಚಿಸಿದ್ದಾರೆ.
ಕೆಲ ದಿನಗಳ ಹಿಂದೆ ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿಯಲ್ಲಿರುವ ಸಚಿನ್ ಜ್ಯೂಸ್ ಸೆಂಟರ್‌ನಲ್ಲಿ ಗ್ರಾಹಕರೊಬ್ಬರ ಕೈಯಿಂದ ಎರಡೂವರೆ ಪವನ್ ತೂಕಕ್ಕೂ ಮಿಗಿಲಾದ ( ನಿಖರ ತೂಕವನ್ನು ಮರೆಮಾಚಲಾಗಿದೆ ) ಚಿನ್ನದ ಬ್ರಾಸ್ ಲೈಟ್ ಬಿದ್ದು ಸಿಕ್ಕಿತ್ತು. ಜ್ಯೂಸ್ ಸೆಂಟರ್ ನಲ್ಲಿ ಆ ದಿನದ ಸಿಸಿ ಕ್ಯಾಮಾರಾ ದೃಶ್ಯಾವಳಿಯನ್ನು ಪರಿಶೀಲಿಸಿದರೂ ಬ್ರಾಸ್ ಲೈಟ್ ಕಳೆದುಕೊಂಡ ಗ್ರಾಹಕರನ್ನು ಪತ್ತೆ ಹಚ್ಚಲು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬ್ರಾಸ್ ಲೈಟ್ ಕಳೆದುಕೊಂಡವರು ಬರಬಹುದೆಂಬ ನಿರೀಕ್ಷೆಯಲ್ಲಿ ಅಂಗಡಿ ಮಾಲಕರು ಕಾಯುತ್ತಿದ್ದರು.
ವಾಟ್ಸಪ್ ನಲ್ಲಿ ಹರಿದಾಡಿದ ಮಾಹಿತಿ: ಧಾವಿಸಿ ಬಂದ ಹತ್ತಾರು ಮಂದಿ
ಈ ಬಗ್ಗೆ ಆದಿತ್ಯವಾರದಂದು ಬ್ರಾಸ್ ಲೈಟ್ ಸಿಕ್ಕಿರುವ ಬಗ್ಗೆ ವಾಟ್ಸಫ್‌ನಲ್ಲಿ ಸಂದೇಶ ಹರಿಯಬಿಡಲಾಗಿದ್ದು, ಕಳೆದುಕೊಂಡವರು ನಿಖರ ಮಾಹಿತಿ ನೀಡಿ ಪಡೆದುಕೊಳ್ಳಬಹುದೆಂದು ತಿಳಿಸಲಾಗಿತ್ತು. ಆದರೆ ಈ ಸಂದೇಶವನ್ನು ಓದಿದ ಸುಮಾರು ಹತ್ತಕ್ಕೂ ಮಿಕ್ಕಿದ ಮಂದಿ ತಾವು ಕಳೆದುಕೊಂಡ ಚಿನ್ನಾಭರಣಗಳ ಬಗ್ಗೆ ಮಾಹಿತಿ ನೀಡಿ ದೊರಕಿದ ಬ್ರಾಸ್ ಲೈಟಿಗೂ ತಾವು ಕಳೆದುಕೊಂಡ ಆಭರಣಕ್ಕೂ ಹೊಂದಿಕೆ ಇದೆಯೇ ಎಂದು ವಿಚಾರಿಸತೊಡಗಿದ್ದಾರೆ. ಆಭರಣ ಸಿಕ್ಕಿದ ದಿನ ಸದ್ರಿ ಜ್ಯೂಸ್ ಸೆಂಟರ್‌ಗೆ ಗ್ರಾಹಕನಾಗಿ ಬಂದಿರುವ ಬಗ್ಗೆ ಸಿಸಿ ಕ್ಯಾಮರಾದಲ್ಲಿನ ದಾಖಲೆಗಳನ್ನು ತುಲನೆ ಮಾಡಿ ಆಭರಣ ಕಳೆದುಕೊಂಡ ನೈಜ ವ್ಯಕ್ತಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿದೆಯಾದರೂ, ಸಿಕ್ಕಿರುವ ಆಭರಣ ತನ್ನದೆಂದು ಹೆಚ್ಚಿನ ಜನರು ಬರತೊಡಗಿರುವುದರಿಂದ ಜ್ಯೂಸ್ ಸೆಂಟರ್ ಮಾಲಕ ಸುಂದರ ಗೌಡ ರವರು ನೈಜ ವಾರಸುದಾರರನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ.