ಗವರ್ನರ್ ಮನೆ ಮುಂದೆ ಅಮರಣಾಂತ ಉಪವಾಸ ಕೂತಾದರೂ ಕಾಯಿದೆ ಹಿಂಪಡೆಯುವುದನ್ನು ತಡೆಯುತ್ತೇವೆ-ಹಸಂತಡ್ಕ
ನಮ್ಮ ಮನೆಯಲ್ಲೇ ನಮಗೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ-ಕಣಿಯೂರು ಶ್ರೀ
ಹಿಂದೂ ಧರ್ಮದ ಮೇಲೆ ದಬ್ಬಾಳಿಕೆಗೆ ಕೈಹಾಕಬೇಡಿ-ಡಾ.ಕೃಷ್ಣಪ್ರಸನ್ನ
ಪುತ್ತೂರು: ಈ ಹಿಂದೆ ಬಿಜೆಪಿ ಸರಕಾರ ತಿದ್ದುಪಡಿ ಮಾಡಿರುವ ‘ಬಲವಂತದ ಮತಾಂತರ ನಿಷೇಧ ಕಾಯಿದೆ’ಯನ್ನು ಇದೀಗ ರಾಜ್ಯದ ಕಾಂಗ್ರೆಸ್ ಸರಕಾರ ಹಿಂಪಡೆದುಕೊಂಡಿದೆ. ಇದಕ್ಕೆ ರಾಜ್ಯ ಪಾಲರ ಸಹಿಯಾಗಬೇಕಿದೆ. ವಿಧಾನ ಸಭಾ ಅಧಿವೇಶನದಲ್ಲಿ ಮಂಜೂರುಗೊಳಿಸುವ ಶಕ್ತಿಯೂ ನಿಮ್ಮಲ್ಲಿದೆ. ಆದರೆ ನಮ್ಮ ಸಂಘಟನೆಯ ನೇತೃತ್ವದಲ್ಲಿ ರಾಜ್ಯಪಾಲರ ಮನೆ ಮುಂದೆ ಅಮರಣಾಂತ ಉಪವಾಸ ಕೂತಾದರೂ ಈ ಕಾಯಿದೆಯನ್ನು ಹಿಂಪಡೆಯುವುದನ್ನು ತಡೆಯುವುದಾಗಿ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಹಿಂಪಡೆಯಲು ನಿರ್ಧರಿಸಿರುವುದರ ವಿರುದ್ಧ ವಿಶ್ವಹಿಂದು ಪರಿಷತ್, ಬಜರಂಗದಳದ ವತಿಯಿಂದ ಜೂ.19ರಂದು ಸಂಜೆ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದ ಕಾಯಿದೆಯನ್ನು ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ ಸರಕಾರ ಹಿಂಪಡೆಯುವ ಪ್ರಯತ್ನ ಮಾಡಿದೆ. ಆದರೆ ಹಿಂದು ಸಮಾಜ ನಿದ್ದೆ ಮಾಡುತ್ತಿಲ್ಲ. ಉತ್ತರ ಕೊಡುವ ಸಮಾಜವಾಗಿದೆ ಎಂದು ಎಚ್ಚರಿಸಲು ಪ್ರತಿಭಟನೆ ನಡೆಯುತ್ತಿದೆ. ಹಿಂದು ಸಮಾಜದ ಅಸ್ಮಿತೆಗೆ, ನಂಬಿಕೆಗಳಿಗೆ ಧಕ್ಕೆ ಆದಾಗ ಎಲ್ಲರನ್ನು ಒಟ್ಟು ಸೇರಿಸಿ ಹೋರಾಟ ನಡೆಸಲಾಗುವುದು. ತಿರುಪತಿ ಉಳಿಸಲು ನಡೆದ ಹೋರಾಟ, ರಾಮಸೇತು ಭಂಗದ ವಿರುದ್ಧ ನಡೆದ ಹೋರಾಟ ಮಾದರಿಯಲ್ಲಿ ಈ ಹೋರಾಟವೂ ನಡೆಯಲಿದೆ ಎಂದು ಹೇಳಿದ ಹಸಂತಡ್ಕ, ಬಲವಂತದ ಮತಾಂತರ ಮಾತ್ರ ಶಿಕ್ಷಾರ್ಹ ಅಪರಾಧ ಎಂದು ಬಿಜೆಪಿ ಸರಕಾದ ತಿದ್ದುಪಡಿ ಮಾಡಿದ ಕಾಯಿದೆಯಲ್ಲಿತ್ತು. ಇದನ್ನು ಕಾಂಗ್ರೆಸ್ ಸರಕಾರ ಹಿಂಪಡೆದುಕೊಂಡು ಬಲವಂತವಾಗಿ, ಆಸೆ, ಆಮಿಷ ಒಡ್ಡಿಯೂ ಮತಾಂತರ ಮಾಡಲು ಅವಕಾಶ ನೀಡಿದೆ ಎಂದರಲ್ಲದೆ, ಉಚಿತ ಕೊಡುಗೆಗಳನ್ನು ನೀಡುವ ಮಾದರಿಯಲ್ಲಿ ಸರಕಾರ ಮತಾಂತರವನ್ನೂ ಉಚಿತವಾಗಿ ನೀಡಿದೆ ಎಂದರು. ಹಿಂದುಗಳ ಭಾವನೆಗಳೊಂದಿಗೆ ಚೆಲ್ಲಾಟವಾಡಬೇಡಿ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ನಾವು ಯಾವುದೇ ಹೋರಾಟ, ತ್ಯಾಗ, ಬಲಿದಾನಗಳನ್ನು ಮಾಡಿಯಾದರೂ ಹಿಂದೂ ಸಮಾಜದ ಅಸ್ಮಿತೆ, ನಂಬಿಕೆ ಉಳಿಸಿಕೊಳ್ಳಲು ಸಿದ್ದ ಎಂದು ಹೇಳಿದ ಮುರಳೀಕೃಷ್ಣ ಅವರು, ಹಿಂದೂ ಸಮಾಜದ ಮೇಲಿನ ದಬ್ಬಾಳಿಕೆ ತಡೆಯಲು ಕಾರ್ಯಕರ್ತರು ಕೈಜೋಡಿಸಲಿದ್ದಾರೆ ಎಂದರು. ಹಿಂದೂ ಸಮಾಜದ ಭಾವನೆಗಳನ್ನು ಗುರಿಯಾಗಿಸಿ ಉತ್ತಮ ಪಠ್ಯ ವಿಚಾರಗಳನ್ನು ಕೈ ಬಿಟ್ಟಿದ್ದಾರೆ ಎಂದು ಆರೋಪಿಸಿದ ಅವರು ಮತಾಂತರ ನಿಷೇಧ ಕಾಯಿದೆ ಹಿಂಪಡೆಯುವ ನಿರ್ಧಾರವನ್ನು ಕೈಬಿಡದಿದ್ದರೆ ಹಲವು ಧರಣಿ, ಹೋರಾಟ, ಸಮಾವೇಶ, ಉಪವಾಸ ಸತ್ಯಾಗ್ರಹದ ಮೂಲಕ ಕಾಂಗ್ರೆಸ್ನ ಧೂರ್ತತನದ, ಅಹಂಕಾರದ ಕೆಲಸವನ್ನು ತಡೆಯುವ ಕೆಲಸ ಮಾಡಲಿದ್ದೇವೆ ಎಂದು ಹಸಂತಡ್ಕ ಎಚ್ಚರಿಸಿದರು.
ನಮ್ಮ ಮನೆಯಲ್ಲಿಯೇ ನಮಗೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ಬರಬಹುದು-ಮಹಾಬಲ ಸ್ವಾಮೀಜಿ: ಕಣಿಯೂರು ಶ್ರೀ ಚಾಮುಂಡೇಶ್ವರಿ ಮಠದ ಶ್ರೀ ಮಹಾಬಲ ಸ್ವಾಮೀಜಿ ಮಾತನಾಡಿ, ಸರಕಾರದ ಒಪ್ಪಿಗೆ ಇದ್ದರೆ ಮತಾಂತರ ಅವ್ಯಾಹತವಾಗಿ ನಡೆದೇ ನಡೆಯುತ್ತದೆ. ಈಗಲೂ ನಡೆಯುತ್ತಿದೆ. ಗೋವುಗಳನ್ನು ಕಳ್ಳತನ ಮಾಡುವುದನ್ನು ತಡೆದವರ ವಿರುದ್ದವೇ ಕೇಸು, ಶಿಕ್ಷೆಯಾದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು.ನಮ್ಮ ಮನೆಯಲ್ಲಿಯೇ ನಮಗೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ಬರಬಹುದು ಎಂದರು. ಮತಾಂತರ ಪಿಡುಗು ಸಾಮಾನ್ಯದ್ದಲ್ಲ .ಮತಾಂತರ ಆದರೆ ನಾಲ್ಕು ಗೋಡೆಗಳ ಮಧ್ಯೆ ನರಕಯಾತನೆ ಅನುಭವಿಸಬೇಕು. ಹೀಗಾಗಿ ನಾವು ಎಚ್ಚೆತ್ತುಕೊಳ್ಳಬೇಕು. ನಮ್ಮ ಮನವಿ, ಯಾತನೆ, ಆಕ್ರೋಷ, ವೇದನೆಗಳನ್ನು ಸರಕಾರಕ್ಕೆ ಮುಟ್ಟಿಸಬೇಕು. ಹಿಂದು ಬಂಧುಗಳನ್ನೇ ನಮ್ಮ ಮತ ನೀಡಿ ಕಳಿಸಿಕೊಟ್ಟಿದ್ದೇವೆ. ನಾವೂ ಹಿಂದುಗಳು, ಧರ್ಮವನ್ನು ರಕ್ಷಿಸಬೇಕು ಎಂದು ಅವರು ಅರಿತಿರಬೇಕು. ಈ ಹಿಂದೆಯೂ ಹಲವು ಹೋರಾಟ, ಪ್ರತಿಭಟನೆ ನಡೆಸಿ ಯಶಸ್ಸು ಕಂಡವರು.ಮುಂದೆಯೂ ಅಲ್ಲಲ್ಲಿ ಪ್ರತಿಭಟನೆಗಳು ನಡೆಯಬೇಕು.ಪ್ರತಿಯೊಬ್ಬ ಸಂತರೂ ಒಟ್ಟಾಗಿ ಎಚ್ಚರಿಸಬೇಕು ಎಂದರು.
ಹಿಂದು ಧರ್ಮದ ದಬ್ಬಾಳಿಕೆಗೆ ಕೈ ಹಾಕಬೇಡಿ-ಡಾ.ಕೃಷ್ಣಪ್ರಸನ್ನ: ವಿಶ್ವಹಿಂದು ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿ, ಮತಾಂತರದಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. ಮತಾಂತರವನ್ನು ಮಹಾತ್ಮ ಗಾಂಧೀಜಿಯವರೂ ವಿರೋಧಿಸಿದ್ದರು. ಆದರೆ ನಾವು ಗಾಂಧೀಜಿಯವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಗಾಂಧೀಜಿಯವರ ಮಾತು ಕೇಳುತ್ತಿಲ್ಲ.ಕೈಯಲ್ಲಿ ಅಧಿಕಾರವಿದೆ ಎಂದು ಹಿಂದೂ ಧರ್ಮದ ಮೇಲೆ ದಬ್ಬಾಳಿಕೆಗೆ ಕೈ ಹಾಕಬೇಡಿ.ಮತಾಂತರಕ್ಕೆ ಅವಕಾಶ ನೀಡಿದರೆ ರಾಜ್ಯದಾದ್ಯಂತ ವಿಶ್ವಹಿಂದು ಪರಿಷತ್ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಮಾಜಿ ಸದಸ್ಯರಾದ ಹರೀಶ್ ಬಿಜತ್ರೆ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನಗರ ಸಭಾ ಮಾಜಿ ಉಪಾಧ್ಯಕ್ಷೆ ವಿದ್ಯಾ ಗೌರಿ, ಪೂಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರ ಸಭಾ ಸದಸ್ಯ ಮನೋಹರ್ ಕಲ್ಲಾರೆ, ಮಾಜಿ ಸದಸ್ಯ ರಾಜೇಶ್ ಬನ್ನೂರು, ಜನಾರ್ದನ ಬೆಟ್ಟ, ಜಯಂತಿ ನಾಯಕ್, ಪ್ರೇಮಲತಾ ರಾವ್, ಜಯಶ್ರೀ ಶೆಟ್ಟಿ, ಶ್ರೀಧರ ತೆಂಕಿಲ, ಕಿರಣ್ ಶೆಟ್ಟಿ, ದಿನೇಶ್ ಪಂಜಿಗ, ಪುನೀತ್ ಮಾಡತ್ತಾರು, ಸಚಿನ್ ಶೆಣೈ, ಹರೀಶ್ ದೋಳ್ಪಾಡಿ, ಅಜಿತ್ ರೈ ಹೊಸಮನೆ, ರಾಘವೇಂದ್ರ ಅಂದ್ರಟ್ಟ, ನಾಗೇಶ್ ಟಿ.ಎಸ್., ಮಧುಸೂದನ ಪಡ್ಡಾಯೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.ನವೀನ್ ನೆರಿಯ ಸ್ವಾಗತಿಸಿದರು.ವಿಶಾಕ್ ರೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.