ರಾಮಕುಂಜ: ವಿದ್ಯಾರ್ಥಿಗಳ ಅವಿರತ ಪರಿಶ್ರಮದಿಂದ ಶ್ರೇಷ್ಠವಾದ ಸಾಧನೆಯನ್ನು ಮಾಡಬಹುದು ಎಂದು ಕಡಬ ಆರಕ್ಷಕ ಠಾಣಾಧಿಕಾರಿ ಆಂಜನೇಯ ರೆಡ್ಡಿಯವರು ಹೇಳಿದರು.
ಅವರು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಆರ್.ಪಿ.ಎಲ್ ಪಂದ್ಯಾಟದ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಅಂತ:ಸತ್ವವನ್ನು ಹೆಚ್ಚಿಸಿಕೊಳ್ಳಲು ಅರಿವು, ಪ್ರತ್ಯುತ್ಪನ್ನಮತಿ, ಸೋಲಿಗೆ ಎದೆಗುಂದದ ಧೈರ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಆಂಜನೇಯ ರೆಡ್ಡಿ ಅವರು ಹೇಳಿದರು. ಪಂದ್ಯವನ್ನು ದ್ವಿತೀಯ ಮತ್ತು ಪ್ರಥಮ ಪದವಿ ತರಗತಿಯ ವಿದ್ಯಾರ್ಥಿಗಳು ಏರ್ಪಡಿಸಿದ್ದರು. ಕಾಲೇಜಿನಲ್ಲಿ ಪ್ರತಿ ತಿಂಗಳು ನಡೆಸುತ್ತಿದ್ದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯ ಕೊನೆಯ ತಿಂಗಳ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅವರು ಪಾರಿತೋಷಕಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಹಾಗೂ ವಾಣಿಜ್ಯ ವಿಭಾಗದ ಉಪನ್ಯಾಸಕ ದಿವಾಕರರವರು ಆಂಜನೇಯ ರೆಡ್ಡಿಯವರನ್ನು ಗೌರವಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಕೃಷ್ಣ ಪ್ರಸಾದ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಹಾಗೂ ವಿದ್ಯಾರ್ಥಿ ಶ್ರೀಹರಿ ಸಹಕರಿಸಿದರು.