ನೆಲ್ಯಾಡಿ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಧಾರವಾಡ ನಿವಾಸಿಗಳಿಬ್ಬರು ಗಾಯಗೊಂಡು ಮಂಗಳೂರಿನ ಎ.ಜೆ.ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜೂ.22ರಂದು ಮಧ್ಯಾಹ್ನ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯದಲ್ಲಿ ನಡೆದಿದೆ.
ಘಟನೆಯಲ್ಲಿ ಕಾರಿನಲ್ಲಿದ್ದ ಧಾರವಾಡ ಬನಶಂಕರಿನಗರ ನಿವಾಸಿ ವಿನಯ ದೀಕ್ಷಿತ್‌ರವರ ಪತ್ನಿ ಶಾಂತಾ ದೀಕ್ಷಿತ್ ಹಾಗೂ ಸೊಸೆ ಅಪರ್ಣಾ ದೀಕ್ಷಿತ್‌ರವರು ಗಾಯಗೊಂಡಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿದ್ದ ವಿನಯ ದೀಕ್ಷಿತ್ ಹಾಗೂ ಕಾರು ಚಲಾಯಿಸುತ್ತಿದ್ದ ಅವರ ಮಗ ಶ್ರೇಯಸ್ ದೀಕ್ಷಿತ್‌ರವರು ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಜೂ.21ರಂದು ಬೆಳಿಗ್ಗೆ ಧಾರವಾಡದಿಂದ ತಮ್ಮ ಕಾರಿನಲ್ಲಿ (ಕೆಎ 25, ಎಂಡಿ 5258) ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದು ಅಲ್ಲಿಂದ ಜೂ.22ರಂದು ಮಧ್ಯಾಹ್ನ ಧರ್ಮಸ್ಥಳಕ್ಕೆಂದು ಹೊರಟು ಬರುತ್ತಿರುವಾಗ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿಗೆ ತಲುಪಿದಾಗ ಎದುರುಗಡೆ ಅಂದರೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಲಾರಿ ಚಾಲಕ ಲಾರಿಯನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ರಸ್ತೆಯ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಕಾರಿನ ಬಲ ಬದಿಗೆ ಡಿಕ್ಕಿವುಂಟು ಮಾಡಿರುವುದಾಗಿ ಹೇಳಲಾಗಿದೆ. ಘಟನೆ ಕುರಿತಂತೆ ವಿನಯ ದೀಕ್ಷಿತ್‌ರವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 279,337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.