ಎಂಡೋ ವಿರೋಧಿ ಹೋರಾಟ ಸಮಿತಿಯಿಂದ ಸಚಿವ ದಿನೇಶ್ ಗುಂಡುರಾವ್‌ಗೆ ಮನವಿ
ಪುತ್ತೂರು: ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಪ್ಯಾಕೇಜ್ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಂಡೋ ಸಲಾನ್ ವಿರೋಧಿ ಹೋರಾಟ ಸಮಿತಿ ವತಿಯಿಂದ ಆರೋಗ್ಯ ಸಚಿವರೂ ಆಗಿರುವ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್‌ರವರಿಗೆ ಮಂಗಳೂರಿನಲ್ಲಿ ಮನವಿ ಮಾಡಲಾಗಿದೆ.
ದ.ಕ., ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಎಂಡೋ ಸಲಾನ್ ಸಂತ್ರಸ್ತರಿದ್ದಾರೆ. ಇವರಿಗೆ ಈಗಾಗಲೇ ಮಾಸಿಕ ಪಿಂಚಣಿ 4 ಸಾವಿರ ರೂ.,ಹಾಗೂ ರೂ.2ಸಾವಿರದಂತೆ ಸಿಗುತ್ತಿದೆ. ಅಲ್ಲದೇ ಕೆಲವೊಂದು ಬೇಡಿಕೆಗಳು ಈಡೇರಿದೆ. ಆದರೆ ಹಾಸಿಗೆ ಹಿಡಿದಿರುವ ಸಂತ್ರಸ್ತರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಹೆತ್ತವರನ್ನೇ ಅವಲಂಬಿಸಿದ್ದಾರೆ. ಇವರ ಜೀವನ ನರಕಸದೃಶವಾಗಿದೆ. ಹೆತ್ತವರು ಸಂತ್ರಸ್ತರ ನರಳಾಟ, ಚೀರಾಟ, ನೋವು, ವೇದನೆ, ಕಣ್ಣೀರಿನಿಂದ ಖಿನ್ನತೆಗೊಳಗಾಗಿದ್ದಾರೆ. ಹೆತ್ತವರು ಅಗಲಿಕೆಯ ನಂತರ ಸಂತ್ರಸ್ತರ ಗತಿ ಏನು ? ಎಂಬ ಚಿಂತೆ ಇದೆ. ಆದ್ದರಿಂದ ಜಿಲ್ಲೆಗೊಂದು ಶಾಶ್ವತ ಪುನರ್ವಸತಿ ಕೇಂದ್ರ ಆಗಬೇಕಾಗಿದೆ. ಹೋರಾಟ ಸಮಿತಿಯ ಪ್ರಯತ್ನದ ಫಲವಾಗಿ ಆಲಂಕಾರಿನಲ್ಲಿ ಶಾಶ್ವತ ಪುನರ್ವಸತಿ ಕೇಂದ್ರ ಸ್ಥಾಪನೆಗಾಗಿ 5 ಎಕ್ರೆ ಜಾಗ ಈಗಾಗಲೇ ಕಾಯ್ದಿರಿಸಲಾಗಿದೆ. ಆದ್ದರಿಂದ ಎಂಡೋ ಸಂತ್ರಸ್ತರ ಪರ ಕಾಳಜಿ ಇರುವ ತಾವು ದ.ಕ., ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೂಡಲೇ ಶಾಶ್ವತ ಪುನರ್ವಸತಿ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಲ್ಲದೇ ಈಗಿರುವ ಮಾಸಾಶನ 4 ಸಾವಿರ ರೂ.,ಹಾಗೂ 2 ಸಾವಿರ ರೂ.ಬದಲಾಗಿ 6 ಸಾವಿರ ರೂ.,ಹಾಗೂ ರೂ.4 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಹಾಸಿಗೆ ಹಿಡಿದಿರುವ ಎಂಡೋಸಂತ್ರಸ್ತರ ಹೆತ್ತವರಿಗೆ 5 ಸಾವಿರ ರೂ.ಮಾಸಾಶನ ಹಾಗೂ ಅವರ ಮನೆಗೆ ವಾರಕ್ಕೊಮ್ಮೆ ನುರಿತ ವೈದ್ಯರು ಭೇಟಿ ನೀಡಬೇಕು. ಎಂಡೋಪಾಲನಾ ಕೇಂದ್ರ ಹಾಗೂ ಶಾಶ್ವತ ಪುನರ್ವಸತಿ ಕೇಂದ್ರದ ಜವಾಬ್ದಾರಿಯನ್ನು ಎಂಡೋ ಸಂತ್ರಸ್ತರ ಹೆತ್ತವರ ಸದಸ್ಯತನದಿಂದಲೇ ಸ್ಥಾಪಿಸಲ್ಪಟ್ಟ ಜಿಲ್ಲಾ ಎಂಡೋ ಸಂತ್ರಸ್ತರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಕೊಡಬೇಕು. ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಪ್ರಸ್ತಾವನೆ ಸಲ್ಲಿಸಬೇಕು. ಹಾಸಿಗೆ ಹಿಡಿದಿರುವ ಸಂತ್ರಸ್ತರಿಗೆ ಹಾಗೂ ಮರಣ ಹೊಂದಿರುವ ಸಂತ್ರಸ್ತರಿಗೆ ತಲಾ 5 ಲಕ್ಷ ರೂ.,ಪರಿಹಾರ ಕೊಡಬೇಕು. ಈ ಎಲ್ಲಾ ಪರಿಹಾರ ಪ್ಯಾಕೇಜ್‌ಗೆ ಎಂಡೋಸಂತ್ರಸ್ತರ ಹೋರಾಟಕ್ಕೆ ಸ್ಪಂದಿಸಿದ ಮಾಜಿ ರಾಷ್ಟ್ರಪತಿ ’ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪರಿಹಾರ ಪ್ಯಾಕೇಜ್’ ಎಂದು ನಾಮಕರಣ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದ.ಕ.ಜಿಲ್ಲಾ ಎಂಡೋಸಲಾನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಾಹೇಬ್ ಆಲಂಕಾರು, ಸಂಚಾಲಕ ಅಬ್ಬಾಸ್ ಕೋಚಕಟ್ಟೆ, ಸಂತ್ರಸ್ತರಾದ ಸೇಸಪ್ಪ ಪೂಜಾರಿ, ಪೋಷಕ ಎನ್.ಎ.ಅಬೂಬಕ್ಕರ್, ಶ್ರೀನಿವಾಸ ಕೆರೆಮೂಲೆ, ಅನಂತ ಕೆರೆಮೂಲೆ, ಕೇಶವ ದೇವಾಡಿಗ ಉಪಸ್ಥಿತರಿದ್ದರು.