ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆಗೆ ವಿರೋಧ:ಬೈಲು-ಬಿಳಿನೆಲೆ ಶಾಲೆಗೆ ಮಕ್ಕಳನ್ನು ಕಳುಹಿಸದೇ ಪ್ರತಿಭಟನೆ

0

ಕಡಬ: ಬಿಳಿನೆಲೆ ಗ್ರಾಮದ ಬೈಲು-ಬಿಳಿನೆಲೆ ಸರಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶನಿವಾರ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟಿಸಿದರು. ಇದರಿಂದ ಶನಿವಾರ ಬೈಲು ಬಿಳಿನೆಲೆ ಶಾಲೆಗೆ ಶಿಕ್ಷಕರು ಮಾತ್ರವೇ ಹಾಜರಾಗಿದ್ದರು.


ಇಲ್ಲಿನ ಬೈಲು ಬಿಳಿನೆಲೆ ಶಾಲೆಯಲ್ಲಿ 90ಕ್ಕೂ ಅಧಿಕ ಮಕ್ಕಳಿದ್ದರೂ ಇಲ್ಲಿದ್ದ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಅವರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿರುವುದಕ್ಕೆ ಶಾಲಾ ಎಸ್‌ಡಿಎಂಸಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರವರು ವಿರೋಧ ವ್ಯಕ್ತಪಡಿಸಿ, ಶಿಕ್ಷಕ ಚಂದ್ರಶೇಖರ ಅವರನ್ನು ಇಲ್ಲಿಯೇ ಉಳಿಸಲು ಸಭೆಗಳನ್ನು ನಡೆಸಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟಿಸಲು ತೀರ್ಮಾನಿಸಿದ್ದರು. ಅದರಂತೆ ಶನಿವಾರ ಶಾಲೆಗೆ ಯಾವುದೇ ಮಕ್ಕಳು ಹಾಜರಾಗಿರಲಿಲ್ಲ. ಶೂನ್ಯ ಹಾಜರಾತಿಯಾಗಿತ್ತು. ಶಾಲೆಗೆ ಶಿಕ್ಷಕರು ಆಗಮಿಸಿ ಶಾಲಾ ತರಗತಿಗಳನ್ನು ತೆರೆದಿದ್ದರೂ ಮಕ್ಕಳು ಬಾರದ ಹಿನ್ನಲೆಯಲ್ಲಿ ಯಾವುದೇ ತರಗತಿಗಳು ನಡೆದಿರಲಿಲ್ಲ.


ಸಿಆರ್‌ಪಿ ಕುಮಾರ್ ಶನಿವಾರ ಶಾಲೆಗೆ ಆಗಮಿಸಿ, ಇಲಾಖೆಯ ಆದೇಶದಂತೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡ ಶಿಕ್ಷಕರು ಈಗಾಗಲೇ ಬೇರೆ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಹೇಳಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಸ್ಥಳದಲ್ಲಿದ್ದ ಎಸ್‌ಡಿಎಂಸಿ, ಪೋಷಕರಲ್ಲಿ ವಿನಂತಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಯಶೋಧರ, ವಿನೀಶ್, ಉಮೇಶ್, ವಿನಯ ಕಳಿಗೆ, ದಯಾನಂದ ಸಣ್ಣಾರ ಮತ್ತಿತರರು, ಶಿಕ್ಷಕರು ಉಪಸ್ಥಿತರಿದ್ದರು.
ಇಂದು ಸಭೆ:
ಶಿಕ್ಷಕರ ವರ್ಗಾವಣೆ ವಿರೋಧಿಸಿ ಮುಂದಿನ ನಡೆಯ ಬಗ್ಗೆ ಜೂ.25ರಂದು ಎಸ್‌ಡಿಎಂಸಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರವರು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here