42 ಮಕ್ಕಳಿಗೆ ಒಬ್ಬರೇ ಶಿಕ್ಷಕಿ…!?-ತೆಗ್ಗು ಸ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರ ಕೊರತೆ, ಎಸ್‌ಡಿಎಂಸಿಯಿಂದ ಮನವಿ

0

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತನಕ ತರಗತಿಗಳಿದ್ದು ಒಟ್ಟು 42 ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲೆಯಲ್ಲಿ ಇರೋದು ಮಾತ್ರ ಒಬ್ಬರೇ ಖಾಯಂ ಶಿಕ್ಷಕಿ. ಇನ್ನೊಬ್ಬರು ಅತಿಥಿ ಶಿಕ್ಷಕಿ ಇದ್ದು ಇಬ್ಬರೇ 1 ರಿಂದ 7 ನೇ ತನಕ ತರಗತಿಗಳನ್ನು ನಿಭಾಯಿಸಬೇಕಾದ ಅನಿವಾರ್‍ಯತೆ ಎದುರಾಗಿದೆ. ಈ ಬಗ್ಗೆ ಎಸ್‌ಡಿಎಂಸಿಯವರು ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರಿಗೆ ಮನವಿ ಸಲ್ಲಿಸಿದ್ದು ಶೀಘ್ರವೇ ಶಾಲೆಗೆ ಶಿಕ್ಷಕರ ಖಾಯಂ ನೇಮಕಾತಿ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.


4 ಖಾಯಂ ಶಿಕ್ಷಕರ ಹುದ್ದೆ
ತೆಗ್ಗು ಸರಕಾರಿ ಹಿ.ಪ್ರಾ.ಶಾಲೆಯು ತೀರಾ ಗ್ರಾಮೀಣ ಪ್ರದೇಶದಲ್ಲಿದ್ದು ಬಹಳಷ್ಟು ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಿದ್ದಾರೆ. ಶಾಲೆಯಲ್ಲಿ 4 ಖಾಯಂ ಶಿಕ್ಷಕರ ಹುದ್ದೆ ಇದ್ದರೂ ಪ್ರಸ್ತುತ ಒಬ್ಬರೇ ಖಾಯಂ ಶಿಕ್ಷಕಿ ಇದ್ದಾರೆ. ಈ ಹಿಂದೆ ಇಬ್ಬರು ಖಾಯಂ ಶಿಕ್ಷಕರಿದ್ದು ಅದರಲ್ಲಿ ಶಾಲಾ ಮುಖ್ಯಗುರುಗಳಾಗಿದ್ದ ಕಿರಣ್‌ರಾಜ್‌ರವರು ಮೇ.31 ಕ್ಕೆ ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ.ಇದೀಗ ಒಬ್ಬರೇ ಶಿಕ್ಷಕಿ ರಶ್ಮಿತಾರವರು ಶಾಲೆಯ ಎಲ್ಲಾ ಕೆಲಸಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಅತಿಥಿ ಶಿಕ್ಷಕಿಯಾಗಿ ಸ್ಥಳೀಯ ನಳಿನಿ ಎಂಬವರು ಸೇವೆ ಸಲ್ಲಿಸುತ್ತಿದ್ದಾರೆ.


42 ವಿದ್ಯಾರ್ಥಿಗಳು
ಮಧ್ಯಮ ಮತ್ತು ಬಡ ವರ್ಗದ ಜನರ ಮಕ್ಕಳೇ ಶಾಲೆಗೆ ಹೆಚ್ಚಾಗಿ ಬರುತ್ತಿದ್ದು ಅತಿಥಿ ಶಿಕ್ಷಕರ ನೇಮಕಾತಿ ಮಾಡಿದರೆ ಅವರಿಗೆ ತಿಂಗಳ ಸಂಬಳ ಕೊಡಲು ಕಷ್ಟಸಾಧ್ಯವಾಗುತ್ತಿದೆ. ಮಕ್ಕಳಿಂದ ಪ್ರತಿ ತಿಂಗಳು ಹಣ ಸಂಗ್ರಹ ಮಾಡಿ ಅತಿಥಿ ಶಿಕ್ಷಕರಿಗೆ ನೀಡುವುದು ಕಷ್ಟ ಸಾಧ್ಯವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ 42 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇಬ್ಬರು ಶಿಕ್ಷಕಿಯರು ಎಲ್ಲಾ ವಿಷಯಗಳ ಬಗ್ಗೆ ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.


ಮನವಿ ಸಲ್ಲಿಕೆ
ಶಾಲೆಗೆ ಶೀಘ್ರವೇ ಖಾಯಂ ಶಿಕ್ಷಕರ ನೇಮಕಾತಿ ಮಾಡುವಂತೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷೆ ಅಸ್ಮಾ ಹಾಗೂ ಸರ್ವ ಸದಸ್ಯರುಗಳು ಕೆಯ್ಯೂರು ಗ್ರಾಪಂ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರಿಗೆ ಜೂ.24 ರಂದು ನಡೆದ ಸಭೆಯೊಂದರಲ್ಲಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮೇರ್ಲರವರು ಈ ಬಗ್ಗೆ ಶಾಸಕರ ಗಮನಕ್ಕೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಗಮನಕ್ಕೆ ತರಲಾಗುವುದು, ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿ ಮಾಡುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಆರ್‌ಪಿ ನಿರಂಜನ್, ಬೀಟ್ ಪೊಲೀಸ್ ದಯಾನಂದ, ನಿವೃತ್ತ ಮುಖ್ಯಗುರು ಕಿರಣ್‌ರಾಜ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here