ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆ

0

ಬಡಗನ್ನೂರು: ಗ್ರಾ.ಪಂ ಸಿಬ್ಬಂದಿಯೋರ್ವರು ಏಕಕಾಲದಲ್ಲಿ ಎರಡು ಸಂಬಳ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ ಎಂದು 2012-13 ಅವಧಿಯಲ್ಲಿ ಜಿ.ಪಂ ಗೆ ಸಲ್ಲಿಕೆಯಾಗಿದ್ದ ದೂರಿನ ಹಿನ್ನೆಲೆಯಲ್ಲಿ, ದೂರುದಾರರನ್ನು ಹುದ್ದೆಯಿಂದ ವಜಾಗೊಳಿಸುವಂತೆ ನಿರ್ಣಯ ಕೈಗೊಳ್ಳಲು ಸದಸ್ಯರೊಳಗೆ ಚರ್ಚೆ ನಡೆದ ಘಟನೆ ಜೂ.22 ರಂದು ಅಧ್ಯಕ್ಷೆ ಶ್ರೀಮತಿ ಕೆ ರವರ ಅಧ್ಯಕ್ಷತೆಯಲ್ಲಿ ನಡೆದ ಬಡಗನ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.

ಗ್ರಾ.ಪಂ ಸಿಬ್ಬಂದಿಯೋರ್ವರು ಪಂಪ್ ಚಾಲಕ ಹಾಗೂ ಗ್ರಂಥಪಾಲಕರ ಹುದ್ದೆಯಲ್ಲಿದ್ದು ಏಕಕಾಲದಲ್ಲಿ ಎರಡು ಸಂಬಳ ಪಡೆದು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು 2012-13 ರ ಅವಧಿಯಲ್ಲಿ ಕೆಲಂದೂರು  ಕುಡಿಯುವ ನೀರು ನಿರ್ವಾಹಕರು ಜಿ.ಪಂ ಗೆ ದೂರು ಅರ್ಜಿ ನೀಡಿದ್ದರು. ಈ ಬಗ್ಗೆ ಜಿ.ಪಂ ದೂರು ಅರ್ಜಿ ಬಗ್ಗೆ ತನಿಖೆ ನಡೆಸಿ ದೂರು ನಿರಾಧರವೆಂದು ಪರಿಗಣಿಸಿ ಅರ್ಜಿಯನ್ನು ವಜಾ ಮಾಡಿ ಆದೇಶ ನೀಡಿತ್ತು.ಜಿ.ಪಂ ನಿರಪರಾಧಿಯೆಂದು ಹೇಳಿದ್ದರೂ ಈ ವರೆಗೆ ಆರೋಪ ಮುಂದುವರಿಸಿ ಕಿರುಕುಳ ನೀಡುತ್ತಿದ್ದಾರೆ. ಅಂತಹ ವ್ಯಕ್ತಿ ಗ್ರಾ.ಪಂ ಸಿಬ್ಬಂದಿಯಾಗಿರುವುದು ಎಷ್ಟು ಸರಿ ? ಅವರನ್ನು ಹುದ್ದೆಯಿಂದ ವಜಾ ಗೊಳಿಸುವ ಬಗ್ಗೆ ನಿರ್ಣಯ ಕೈಗೊಳ್ಳುವಂತೆ ಗ್ರಾ.ಪಂ ಸದಸ್ಯ ರವಿರಾಜ ರೈ ಸಜಂಕಾಡಿ  ಪಿಡಿಒ ರವರನ್ನು ಒತ್ತಾಯಿಸಿದ್ದಾರೆ. ಒಬ್ಬ ಅಭಿವೃದ್ಧಿ ಅಧಿಕಾರಿಯಾಗಿ ಸಿಬ್ಬಂದಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರ ಇಲ್ಲವೇ ? ಎಂದು ಪ್ರಶ್ನಿಸಿ ನೀರು ನಿರ್ವಾಹಕ ಹುದ್ದೆಯಿಂದ ತೆಗೆಯುವ ಬಗ್ಗೆ ನಿರ್ಣಯ ಮಾಡಿ ಇಲ್ಲದಿದ್ದಲ್ಲಿ ಯಾವ ರೀತಿ ಮಾಡಬೇಕು ಎಂದು ಗೊತ್ತಿದೆ ಎಂದು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದಾರೆ.

ಈ ವೇಳೆ ಉಪಾಧ್ಯಕ್ಷ, ಸಂತೋಷ್ ಆಳ್ವ ಮಧ್ಯೆ ಪ್ರವೇಶಿಸಿ ನೀವು ಹೇಳಿದ ತಕ್ಷಣ ಕೆಲಸದಿಂದ ತೆಗೆಯಲು ಆಗುದಿಲ್ಲ ಈ ಬಗ್ಗೆ ಪರಿಶೀಲನೆ ಆಗಬೇಕು. ನೀವು ಮಾಡುದನ್ನು ಮಾಡಿ ಎಂದಾಗ  ಅಕ್ರೋಶಗೊಂಡ ಸದಸ್ಯ ರವಿರಾಜ ರೈ, ಉಪಾಧ್ಯಕ್ಷನಿಗೆ ಯಾವುದೇ ಅಧಿಕಾರ ಇಲ್ಲ, ಅಧ್ಯಕ್ಷರು ಇರುವಾಗ ನಿಮ್ಮ ಮಾತಿಗೆ ಬೆಲೆ ಇಲ್ಲ ಒಬ್ಬ ಪಕ್ಷದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿಯನ್ನು ನೀರು ನಿರ್ವಾಹಕ ಹುದ್ದೆ ನೀಡಿದ್ದು ತಪ್ಪು. ನಾನು  ಇಷ್ಟರ ತನಕ ಮಾನವೀಯ ದೃಷ್ಟಿಯಿಂದ ನೋಡಿದ್ದೇನೆ. ಆದರೆ ಅವನು ಪಂ.ಸಿಬ್ಬಂದಿಗೆ ಕಿರುಕುಳ ಕೊಡುತ್ತಾ ಬರುತ್ತಾನೆ. ಮುಂದೆ ಏನು ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ. ಇವರ ಮಾತಿಗೆ ಸದಸ್ಯರಾದ  ಲಿಂಗಪ್ಪ ಗೌಡ, ಧರ್ಮೇಂದ್ರ ಪದಡ್ಕ, ಕಲಾವತಿ ಗೌಡ ಪಟ್ಲಡ್ಕ, ಜ್ಯೋತಿ ಅಂಬಟೆಮೂಲೆ, ಧ್ವನಿ ಗೂಡಿಸಿ ಪಂಪ್ ಚಾಲಕ ಹುದ್ದೆಯಿಂದ ವಜಾಗೊಳಿಸುವಂತೆ ಪಟ್ಡುಹಿಡಿದಿದ್ದಾರೆ. ನೀವು ಮಾಡುದನ್ನು ಮಾಡಿ ನಾನು ನೋಡುತ್ತೇನೆ ಎಂದು ಉಪಾಧ್ಯಕ್ಷ ಸಂತೋಷ್ ಆಳ್ವ ಹೇಳಿದಾಗ ಮಾತಿಗೆ ಮಾತು ಬೆಳೆದು ಸ್ವಲ್ಪ ಸಮಯ ಗೊಂದಲ ವಾತಾವರಣ ಸೃಷ್ಟಿಯಾಗಿತ್ತು.

ಮಧ್ಯೆ ಪ್ರವೇಶಿಸಿದ ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಮಾತನಾಡಿ, ಪಂಚಾಯತ್ ಒಳಗೆ ಹಾಗೂ ಹೊರಗೆ ಕೆಲಸ ಮಾಡುವ ಪಂಚಾಯತ್ ಸಿಬ್ಬಂದಿಗಳು  ಯಾವುದೇ ಪಕ್ಷದ ಜೊತೆ ಗುರುತಿಸಿ ಕೊಳ್ಳುವಂತಿಲ್ಲ ಈ ಮಾತನ್ನು ಪ್ರಾರಂಭದಲ್ಲಿ ಹೇಳಿದ್ದೆ. ಯಾವುದೇ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದು ಕಂಡು ಬಂದಲ್ಲಿ ಅಂತಹ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳಲು ಅವಕಾಶವಿದೆ. ಕೆಲಂದೂರು ಭಾಗದ ಕುಡಿಯುವ ನೀರಿನ ಪಂಪ್ ಚಾಲಕರು ಯಾವುದೇ ಒಂದು ಪಕ್ಷದಲ್ಲಿ ಗುರುತಿಸಿಕೊಂಡ ಬಗ್ಗೆ ಯಾವುದೇ ಆಧಾರ ನಮ್ಮಲ್ಲಿ ಇಲ್ಲ. ಇದ್ದಲ್ಲಿ ನನಗೆ ಕೊಡಿ, ಮುಂದಿನ ಸಭೆಯಲ್ಲಿ ತೀರ್ಮಾನಿಸಿ ಕ್ರಮ ಕೈಗೊಳ್ಳುತ್ತೇವೆ. ಅದಕ್ಕಿಂತ ಮೊದಲು ಫಲಾನುಭವಿಗಳ ಸಭೆ ಕರೆದು ಮಾಹಿತಿ ಪಡೆದುಕೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ರವಿರಾಜ ರೈ ಫಲಾನುಭವಿಗಳ ಸಭೆಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಾರ್ಡ್ ಸದಸ್ಯರು ಮಾತ್ರ ಭಾಗವಹಿಸಬೇಕು ಇತರರಿಗೆ ಅವಕಾಶ ಇಲ್ಲ. ಫಲಾನುಭವಿಗಳ ಆಯ್ಕೆ ಪಂಪ್ ಚಾಲಕರ ವಿರುದ್ಧ ಕಂಡುಬಂದಲ್ಲಿ ತುರ್ತು ಸಭೆ ಕರೆದು ಪಂಪ್ ಚಾಲಕರನ್ನು ಕೆಲಸದಿಂದ ವಜಾ ಗೊಳಿಸಿ ಆ ಹುದ್ದೆಗೆ ಬೇರೊಬ್ಬ ವ್ಯಕ್ತಿಯನ್ನು ನೇಮಕಾತಿ ಮಾಡಬೇಕು ಎಂದು ಹೇಳಿದರು. ತುರ್ತು ಸಭೆ ಕರೆಯುವ ಅಧಿಕಾರ ನನಗೆ ಇಲ್ಲ, ಅಧ್ಯಕ್ಷರು ಮಾತ್ರ ತುರ್ತು ಸಭೆ ಕರೆಯಬಹುದು ಎಂದು ಪಿಡಿಒ ಸ್ಪಷ್ಟಪಡಿಸಿದರು. ಗೊಂದಲ ಬಗೆ ಹರಿಸುವ ನಿಟ್ಟಿನಲ್ಲಿ ತುರ್ತು ಸಭೆಗೆ ಅಧ್ಯಕ್ಷ ಶ್ರೀಮತಿ ಕೆ ಸಮ್ಮತಿ ನೀಡಿದ ಬಳಿಕ ಈ ಕುರಿತ ಚರ್ಚೆಗೆ ಪೂರ್ಣ ವಿರಾಮ ನೀಡಲಾಯಿತು.

ಯಾವುದೇ ವ್ಯಕ್ತಿ  ಪಂಚಾಯತ್ ಅಥವಾ ಪಂಚಾಯತ್ ಸಿಬ್ಬಂದಿಗಳ ಮೇಲೆ ನಿರಾಧರವಾಗಿ ಅರೋಪ ವೆಸಗಿದಲ್ಲಿ ಪಂಚಾಯತ್ ಮುಖಾಂತರ ಕ್ರಮಕೈಗೊಳ್ಳಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಎಚ್ಚರಿಕೆ ನೀಡಿದ್ದಾರೆ.

ಗೃಹ ಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಪಡೆದುಕೊಳ್ಳಲು ಗ್ರಾ.ಪಂ ನಲ್ಲಿ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಆರಂಭಗೊಂಡಿದೆ. ಫಲಾನುಭವಿಗಳು ಈ ಬಗ್ಗೆ ಅರ್ಜಿ ಸಲ್ಲಿಸುವಂತೆ ಸಭೆಯಲ್ಲಿ ಕೋರಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಆಳ್ವ ಸದಸ್ಯರಾದ  ರವಿರಾಜ ರೈ ಸಜಂಕಾಡಿ, ಲಿಂಗಪ್ಪ ಗೌಡ ಮೋಡಿಕೆ, ವಸಂತ ಗೌಡ ಕನ್ನಯ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮುಲೆ, ವೆಂಕಟೇಶ ಕನ್ನಡ್ಕ, ಧರ್ಮೇಂದ್ರ ಕುಲಾಲ್ ಪದಡ್ಕ, ಹೇಮಾವತಿ ಮೋಡಿಕೆ, ಪುಷ್ಪಲತಾ ದೇವಕಜೆ, ಸುಶೀಲಾ ಪ್ಯಕ್ಯೋಡ್, ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ,ಕಲಾವತಿ ಗೌಡ ಪಟ್ಲಡ್ಕ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಸೀಮ ಗಂಧದ ಸ್ವಾಗತಿಸಿ, ವಂದಿಸಿ, ಸಾರ್ವಜನಿಕ ಅರ್ಜಿ ಹಾಗೂ ಸರಕಾರಿ ಸುತ್ತೋಲೆಗಳನ್ನು ಓದಿದರು.ಗ್ರಾ.ಪಂ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here