ಪುತ್ತೂರು: ಕಳೆದ 12 ವರ್ಷಗಳಿಂದ ಪುತ್ತೂರು, ಬೆಳ್ತಂಗಡಿ ಮತ್ತು ಕಡಬ ತಾಲೂಕುಗಳಿಗೆ ಏರ್ಟೆಲ್ ಡಿ.ಟಿ.ಎಚ್.ನ ಅಧಿಕೃತ ವಿತರಕರಾಗಿರುವ ಪುತ್ತೂರಿನ ದುರ್ಗಾಶ್ರೀ ಎಂಟರ್‌ಪ್ರೈಸಸ್ ಮಾಲಕ ನಾಗೇಶ್ ಬಲ್ನಾಡುರವರಿಗೆ 2022-2023ನೇ ಸಾಲಿನ ಮಾರಾಟ ಮತ್ತು ಸೇವಾ ವ್ಯವಹಾರದ ಸಾಧನೆಗಾಗಿ ಕ್ವಾಲಿಟಿ ಅಕ್ವಿಸಿಸನ್ ಟಾಪರ್ ಪ್ರಶಸ್ತಿ ಲಭಿಸಿದೆ. ಈ ಪುರಸ್ಕಾರವು 2022-2023ರ ರಾಜ್ಯಮಟ್ಟದ ಡಿ.ಟಿ.ಏಚ್. ವ್ಯವಹಾರ ಸಾಧನೆಗಾಗಿ ನೀಡಲಾಗಿದೆ.ಜೂ.24ರಂದು ಹುಬ್ಬಳ್ಳಿಯಲ್ಲಿ ನಡೆದ ಏರ್‌ಟೆಲ್ ಡಿ.ಟಿ.ಎಚ್. ಅನ್ಮೊಲ್ ರತ್ನ ರಾಜ್ಯ ವಿತರಕರ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಸಮಾವೇಶದ ಸಂದರ್ಭದಲ್ಲಿ ಪ್ರಶಸ್ತಿ ಪತ್ರ ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಏರ್ಟೆಲ್ ಡಿ.ಟಿ.ಎಚ್.ನ ಕರ್ನಾಟಕ ರಾಜ್ಯ ಮುಖ್ಯಸ್ಥ ಶಶಿಕಾಂತ್ ಕೊಪ್ಪಲ್ ಪ್ರಶಸ್ತಿ ವಿತರಿಸಿದರು.
ಕರ್ನಾಟಕ ರಾಜ್ಯ ಮಾರಾಟ ಮತ್ತು ಸೇವಾ ವಿಭಾಗದ ಮುಖ್ಯಸ್ಥರಾದ ಕಿರಣ್ ಕುಮಾರ್ ಮತ್ತು ಸತ್ಯಮೂರ್ತಿ ಅವದಾನಿ, ದ.ಕ., ಉಡುಪಿ ಮತ್ತು ಚಿಕ್ಕಮಗಳೂರು ವಿಭಾಗದ ಮುಖ್ಯಸ್ಥ ಗುರುರಾಜ್ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ್ನಾಟಕದ ವಿವಿಧ ಜಿಲ್ಲೆಗಳ 152 ವಿತರಕರು ಭಾಗವಹಿಸಿದ್ದರು. ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ವಿಮಾ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ನಾಗೇಶ್ ಬಲ್ನಾಡುರವರು ನಟ, ನಿರ್ದೇಶಕರಾಗಿ ಹೆಸರಾಂತ ಸಂಸಾರ ಕಲಾವಿದೆರ್, ಪುತ್ತೂರು ನಾಟಕ ತಂಡದ ಸ್ಥಾಪಕರಾಗಿರುತ್ತಾರೆ.