ನೆಲ್ಯಾಡಿ: ಜೇಸಿಐ ನೆಲ್ಯಾಡಿ, ನೋಕಿಪಡಿ ಕ್ರಿಕೆಟರ್‍ಸ್ ಅಬುದಾಬಿ ಮತ್ತು ನೆಲ್ಯಾಡಿ ಹಾಗೂ ಇತರೇ ಸಂಘಟನೆಗಳ ಆಶ್ರಯದಲ್ಲಿ ದಿ.ನಾರಾಯಣ ಮಾಸ್ಟರ್ ಮತ್ತು ಈಶೋ ಮಾಸ್ಟರ್‌ರವರ ಸ್ಮರಣಾರ್ಥ ಬಡಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಸಮಾರಂಭ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ನೆಲ್ಯಾಡಿ ಅಸುಪಾಸಿನ ಶಾಲೆಗಳಲ್ಲಿ ಕಲಿಯುತ್ತಿರುವ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು. ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾಗಿರುವ ಅಬ್ರಹಾಂ ವರ್ಗೀಸ್‌ರವರು ಉದ್ಘಾಟಿಸಿ ಮಾತನಾಡಿ, ಹಲವು ಸಂಘಟನೆಗಳು ಸೇರಿಕೊಂಡು ಮಾಡಿರುವ ಈ ಪುಣ್ಯದ ಕೆಲಸ ವಿದ್ಯಾರ್ಥಿಗಳ ಮನದಲ್ಲಿ ಅಚ್ಚಲಿಯದೆ ಉಳಿಯಲಿ ಎಂದು ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೇಸಿಐ ಅಧ್ಯಕ್ಷ ದಯಾಕರ ರೈಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳ ಜೊತೆಗೆ ವಿದ್ಯಾಭ್ಯಾಸ ಸಿಗುತ್ತಿರುವುದು ಶ್ಲಾಘನೀಯ. ಈ ಪ್ರಯೋಜನವನ್ನು ಪಡೆದುಕೊಂಡು ವಿದ್ಯಾಭ್ಯಾಸ ಮಾಡುವುದು ವಿದ್ಯಾರ್ಥಿಗಳಿಗೆ ಸಿಕ್ಕಿರುವ ಭಾಗ್ಯ ಎಂದರು.
ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೋಟರಿ ಮತ್ತು ವಕೀಲರಾದ ಇಸ್ಮಾಯಿಲ್ ಎನ್.,ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಲ್ಯಾಡಿ ಅಸುಪಾಸಿನ ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.