ಓದುವ ಹವ್ಯಾಸಕ್ಕೆ ಸ್ಪೂರ್ತಿ ‘ಗ್ರಂಥ ಮಿತ್ರ’: ವಿಜಯ್ ಕುಮಾರ್
ಪುತ್ತೂರು: ಓದುವ ಹವ್ಯಾಸಕ್ಕೆ ಸ್ಪೂರ್ತಿ ‘ಗ್ರಂಥ ಮಿತ್ರ’ ಕಾರ್ಯಕ್ರಮವಾಗಲಿದೆ. ಶಾಲಾ ಮಕ್ಕಳಲ್ಲಿ ಓದಿನ ಆಸಕ್ತಿ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಶಾಲಾ ವಿದ್ಯಾರ್ಥಿಗಳು ಗಣಿತ, ವಿಜ್ಞಾನ ವಿಷಯಗಳ ಜತೆಗೆ ಡಿಜಿಟಲ್ ಲೈಬ್ರರಿಯನ್ನು ಬಳಸುವ ಮೂಲಕ ಸಾಮಾನ್ಯ ಜ್ಞಾನವನ್ನು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸರ್ಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ಮುಖ್ಯ ಶಿಕ್ಷಕ ವಿಜಯ್ ಕುಮಾರ್ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಹಾಗೂ ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆದ ‘ಗ್ರಂಥ ಮಿತ್ರ’ ಎಂಬ ವಿದ್ಯಾರ್ಥಿ ಸ್ನೇಹಿ ಅಭಿಯಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಹರಿಪ್ರಸಾದ್ ಎಸ್ ಮಾತನಾಡಿ ಮಕ್ಕಳಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನ ಸಿಗುತ್ತದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳಿಂದ ದೊರೆಯುವ ಜ್ಞಾನ ತುಂಬಾ ಮಹತ್ವವನ್ನು ಪಡೆದಿದೆ. ಪ್ರೌಢಶಾಲಾ ಮಕ್ಕಳ ಕಲಿಕೆ, ಭಾಷಾ ಬೆಳವಣಿಗೆ, ಮಾತುಗಾರಿಕೆ, ಆತ್ಮವಿಶ್ವಾಸ ವೃದ್ಧಿಸುವ ಪಠ್ಯ ಕ್ರಮವನ್ನು ಒಳಗೊಂಡಿರುವ ‘ಗ್ರಂಥ ಮಿತ್ರ ‘ ಕಾರ್ಯಕ್ರಮದ ಪ್ರಯೋಜನ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತಿನ ಸಾರ್ವಜನಿಕ ಗ್ರಂಥಾಲಯದ ಮುಖ್ಯಸ್ಥೆ ಪ್ರೇಮಲತಾ ಮಾತನಾಡಿ ಗ್ರಂಥಾಲಯಗಳಲ್ಲಿ ಮಕ್ಕಳಿಗೆ ಅವಶ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮನರಂಜನೆಯನ್ನು ನೀಡುವ ಮೂಲಕ ಕಲಿಕೆಯತ್ತ ಅವರನ್ನು ಸೆಳೆಯಲಾಗುತ್ತದೆ. ನಂತರ ಡಿಜಿಟಲ್ ಕೌಶಲ್ಯಗಳನ್ನು ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶಶಿಕುಮಾರ ಹಾಗೂ ಗ್ರಂಥ ಮಿತ್ರದ ನಾಯಕಿ ರಕ್ಷಿತಾ ಕೆ ಹಾಗೂ ಸಹ ನಾಯಕಿ ಪಲ್ಲವಿ ಬಿ ರೈ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸ್ವಯಂ ಸೇವಕಿ ದೀಪ್ತಿ ಪಿ ಸ್ವಾಗತಿಸಿ, ಕೃತಿಕಾ ಪಿ ವಂದಿಸಿ, ಹರ್ಷಿತಾ ಕೆ ನಿರೂಪಿಸಿದರು.