ಪುತ್ತಿಲ-ಬಿಜೆಪಿ ನಡುವಿನ ಗೊಂದಲ ನಿವಾರಣೆಗೆ ಡಾ.ಪುತ್ತೂರಾಯ ಮನವಿ ?
ಲೋಕಸಭಾ ಚುನಾವಣೆಯಲ್ಲಿ ಯಾರೇ ಅಭ್ಯರ್ಥಿಯಾದರೂ ನಮ್ಮ ಗುರಿ ಮೋದಿಯ ಕಡೆ ಡಾ.ಪುತ್ತೂರಾಯ ಹೇಳಿಕೆ
ಪುತ್ತಿಲ-ಬಿಜೆಪಿ ನಡುವಿನ ವೈಮನಸ್ಸು ತಿಳಿಯಾಗುವ ಮುನ್ಸೂಚನೆ?
ಆರ್.ಎಸ್‌ಎಸ್ ಸಮನ್ವಯ ಬೈಠಕ್‌ನಲ್ಲಿ ಪ್ರಸ್ತಾಪವಿಲ್ಲ
ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಹಿಂದುತ್ವವಾದಿ ಸಿದ್ಧಾಂತದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣಾ ಫಲಿತಾಂಶದ ಬಳಿಕವೂ ಜಿಲ್ಲೆಯಾದ್ಯಂತ ನಿರಂತರ ಪ್ರವಾಸ ಕೈಗೊಂಡು ಸಕ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಚುನಾವಣೆ ಸಂದರ್ಭ ಪುತ್ತಿಲ ಪರ ಬ್ಯಾಟ್ ಬೀಸಿದ್ದ ಖ್ಯಾತ ವೈದ್ಯ ಡಾ.ಸುರೇಶ್ ಪುತ್ತೂರಾಯ ಅವರು ಹಿಂದುತ್ವವಾದಿಯಾಗಿದ್ದು ಬಿಜೆಪಿಯಲ್ಲಿ ಸಕ್ರಿಯರಾಗಿರುವ ಡಾ.ಎಂ.ಕೆ.ಪ್ರಸಾದ್ ಅವರನ್ನು ದಿಢೀರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.ಚುನಾವಣೆ ಸಂದರ್ಭದಲ್ಲಿ ಒಂದು ಹಂತದಲ್ಲಿ ರಾಜಕೀಯಪರಸ್ಪರ ಎದುರಾಳಿಗಳಾಗಿಯೇ ಗುರುತಿಸಿಕೊಂಡಿದ್ದ ವೈದ್ಯರೀರ್ವರ ನಡುವೆ ನಡೆದಿರುವ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ.
ಅರುಣ್ ಕುಮಾರ್ ಪುತ್ತಿಲ ಅವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರೂ ತನ್ನ ಕಾರ್ಯಚಟುವಟಿಕೆಗಳನ್ನು ನಿಲ್ಲಿಸದೆ, ಚುನಾವಣೆ ಸಂದರ್ಭ ಪುತ್ತೂರು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದ ತನ್ನ ಕಾರ್ಯಚಟುವಟಿಕೆಗಳನ್ನು ಇಡೀ ಜಿಲ್ಲೆಗೆ ವಿಸ್ತರಿಸಿ ಪ್ರತಿನಿತ್ಯ ಒಂದಿಲ್ಲೊಂದು ಕಡೆಗಳಲ್ಲಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಮತ್ತೊಂದೆಡೆ ಪುತ್ತಿಲ ಪರಿವಾರ ಅಲ್ಲಲ್ಲಿ ತನ್ನ ಸಮಿತಿಗಳನ್ನು ರಚಿಸಿಕೊಂಡು ಕಾರ್ಯೋನ್ಮುಖವಾಗಿದೆ.ಇದೆಲ್ಲವನ್ನೂ ಗಮನಿಸಿದರೆ, 2024ರ ಲೋಕಸಭಾ ಚುನಾವಣೆಗೆ ಪುತ್ತಿಲ ಪರಿವಾರ ಈಗಲೇ ಸಿದ್ಧತೆ ನಡೆಸುತ್ತಿರುವುದಂತೂ ಸ್ಪಷ್ಟವೆಂದೇ ಹೇಳಬಹುದು.
ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಅವಕಾಶ ವಂಚಿತರಾಗಿದ್ದ ಅರುಣ್ ಕುಮಾರ್ ಪುತ್ತಿಲ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಬೇಕು ಎಂದು ಪುತ್ತಿಲ ಪರ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆಯಾದರೂ ಅರುಣ್ ಕುಮಾರ್ ಪುತ್ತಿಲ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿಯಿಲ್ಲ,ಇದರ ಬದಲು ಅವರಿಗೆ ಪಕ್ಷದಲ್ಲಿ ರಾಜ್ಯಮಟ್ಟದಲ್ಲಿ ಇಲ್ಲವೇ ಜಿಲ್ಲಾ ಮಟ್ಟದಲ್ಲಿ ಪ್ರಮುಖ ಹುದ್ದೆ ನೀಡಬೇಕು ಅಥವಾ ವಿಧಾನ ಪರಿಷತ್ ಸದಸ್ಯನಾಗಿಸಬೇಕು ಎನ್ನುವ ಆಗ್ರಹ ಅವರ ಜೊತೆಗಿರುವ ಪ್ರಮುಖರಿಂದ ವ್ಯಕ್ತವಾಗಿದೆ.ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲ ಅವರಿಗೇ ಬಿಜೆಪಿಯಿಂದ ಅವಕಾಶ ನೀಡಬೇಕು ಎನ್ನುವ ಆಗ್ರಹವೂ ಇದೆ.ಈ ಕುರಿತು, ಪುತ್ತಿಲ ಅವರೊಂದಿಗಿರುವ ಪ್ರಮುಖರಿಂದ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಪಕ್ಷದ ರಾಷ್ಟ್ರೀಯ ಮಟ್ಟದ ನಾಯಕರ ಜೊತೆ ಒಂದು ಹಂತದ ಮಾತುಕತೆಯೂ ನಡೆದಿದೆ.ಆದರೆ ಯಾವ ತೀರ್ಮಾನವೂ ಆಗಿಲ್ಲ.ಒಂದು ವೇಳೆ ಪುತ್ತಿಲ ಅವರಿಗೆ ಸೂಕ್ತ ಸ್ಥಾನ-ಮಾನ ನೀಡದೇ ಇದ್ದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ಇರುವುದರಿಂದ ಪುತ್ತಿಲ ಅವರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಪಕ್ಷದ ಪ್ರಮುಖರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಮಧ್ಯೆ ದಿಢೀರ್ ಬೆಳವಣಿಗೆಯೊಂದರಲ್ಲಿ ಡಾ.ಸುರೇಶ್ ಪುತ್ತೂರಾಯ ಅವರು ಜೂ.25ರಂದು ಬೆಳಿಗ್ಗೆ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿ ಡಾ.ಎಂ.ಕೆ.ಪ್ರಸಾದ್ ಅವರನ್ನು ಭೇಟಿಯಾಗಿ ಸುಮಾರು ಎರಡು ಗಂಟೆ ಕಾಲ ಆಂತರಿಕ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನ ಸಭೆ ಚುನಾವಣೆಯಲ್ಲಿ ಪುತ್ತಿಲ ಪರ ಬ್ಯಾಟ್ ಬೀಸಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಡಾ.ಸುರೇಶ್ ಪುತ್ತೂರಾಯ ಅವರು ಡಾ.ಎಂ.ಕೆ.ಪ್ರಸಾದ್ ಅವರ ಜೊತೆ ಮಾತನಾಡುವ ಸಂದರ್ಭ, ವಿಧಾನಸಭೆ ಚುನಾವಣೆಯಲ್ಲಿ ಏನೇನೋ ಘಟನೆಗಳಾದವು.ಆದರೆ ಮುಂದಿನ ಸಂಸದೀಯ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾದರೂ ನಮ್ಮ ಗುರಿ ನರೇಂದ್ರ ಮೋದಿಯವರ ಕಡೆ ಎಂದು ಹೇಳಿರುವುದಾಗಿ ಮತ್ತು ಪುತ್ತಿಲ ಹಾಗೂ ಬಿಜೆಪಿ ನಡುವಿನ ಗೊಂದಲವನ್ನು ನೀವೇ ಮುಂಚೂಣಿಯಲ್ಲಿ ನಿಂತು ಸರಿಪಡಿಸಬೇಕು ಎಂದೂ ಡಾ.ಎಂ.ಕೆ.ಪ್ರಸಾದ್ ಅವರನ್ನು ಕೇಳಿಕೊಂಡಿರುವುದಾಗಿಯೂ ಮೂಲಗಳಿಂದ ತಿಳಿದು ಬಂದಿದೆ.ಇದು, ಮುಂದಿನ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಮತ್ತು ಪುತ್ತಿಲ ನಡುವಿನ ವೈಮನಸ್ಸು ತಿಳಿಯಾಗಲಿದೆಯೇ? ಎನ್ನುವ ಪ್ರಶ್ನೆ ಹುಟ್ಟು ಹಾಕಿದೆ. ದ.ಕ.ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇನ್ನೇನು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಅಧಿಕವಾಗಿದೆ ಎನ್ನುವ ಮಾತುಗಳ ನಡುವೆ, ಅವರು ಪ್ರತಿನಿಧಿಸುತ್ತಿರುವ ದ.ಕ.ಲೋಕಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆ ಸಂದರ್ಭದ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಈಗಾಗಲೇ ಚರ್ಚೆಗಳು ನಡೆಯುತ್ತಿವೆ.ನಳಿನ್ ಕುಮಾರ್ ಕಟೀಲ್ ಅವರಿಗೇ ಮತ್ತೆ ದ.ಕ.ಕ್ಷೇತ್ರದಲ್ಲಿ ಅವಕಾಶ ದೊರೆಯುವುದೇ ಅಥವಾ ಹೊಸಬರಿಗೆ ಪಕ್ಷ ಮಣೆಹಾಕಲಿದೆಯೇ ಎನ್ನುವ ಕುರಿತೂ ಚರ್ಚೆಗಳಾಗುತ್ತಿದೆ.ಕ್ಯಾ|ಬ್ರಿಜೇಶ್ ಚೌಟ ಅವರು ಈ ಬಾರಿ ದ.ಕ.ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉತ್ಸುಕತೆಯಲ್ಲಿದ್ದು ಈಗಾಗಲೇ ಕ್ಷೇತ್ರದಾದ್ಯಂತ ಪ್ರವಾಸ ಆರಂಭಿಸಿದ್ದಾರೆ.ಯಾರೇ ಅಭ್ಯರ್ಥಿಯಾದರೂ ಅರುಣ್ ಪುತ್ತಿಲ ಅವರಿಗೆ ಲೋಕಸಭಾ ಚುನಾವಣೆಗೆ ಮೊದಲು ಸೂಕ್ತ ಸ್ಥಾನಮಾನ ದೊರೆಯದೇ ಇದ್ದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಗಿರುವಂತೆಯೇ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷಕ್ಕೆ ಸಂಕಷ್ಟ ಎದುರಾಗುವುದು ನಿಶ್ಚಿತ ಎನ್ನುವುದನ್ನು ಮನಗಂಡಿರುವ ಪಕ್ಷದ ರಾಷ್ಟ್ರೀಯ ನಾಯಕರು ಈ ವಿಚಾರದಲ್ಲಿ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು ಲೋಕಸಭಾ ಚುನಾವಣೆಗೆ ಮೊದಲೇ ಪುತ್ತಿಲ ಅವರಿಗೆ ಸೂಕ್ತ ಸ್ಥಾನಮಾನ ದೊರೆಯುವುದು ಖಚಿತ ಎಂದು ಹೇಳಲಾಗುತ್ತಿರುವ ನಡುವೆಯೇ ಡಾ.ಸುರೇಶ್ ಪುತ್ತೂರಾಯ ಅವರು ಡಾ.ಎಂ.ಕೆ.ಪ್ರಸಾದ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಸೃಷ್ಟಿಸಿದೆ.
ಪೇಜಾವರ ಶ್ರೀ ಭೇಟಿ ನೀಡಿದ್ದರು:
ಅರುಣ್ ಕುಮಾರ್ ಪುತ್ತಿಲ ಅವರ ಮನೆಗೆ ಕೆಲವು ದಿನಗಳ ಹಿಂದೆಯಷ್ಟೆ ಪೇಜಾವರ ಶ್ರೀಗಳು ಭೇಟಿ ನೀಡಿದ್ದರು.ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಮಟ್ಟದ ನಾಯಕರೊಂದಿಗೆ ಸಂಪರ್ಕ ಹೊಂದಿರುವ ಪೇಜಾವರ ಶ್ರೀಗಳು ಪುತ್ತಿಲ ಅವರ ಮನೆಗೆ ಭೇಟಿ ನೀಡಿದ್ದ ಸಂದರ್ಭವೇ, ಬಿಜೆಪಿ ಮತ್ತು ಪುತ್ತಿಲ ನಡುವಿನ ಗೊಂದಲ ಇನ್ನೇನು ಶೀಘ್ರ ನಿವಾರಣೆಯಾಗುವ ಸಾಧ್ಯತೆ ಇದೆ ಎಂದು ಸುದ್ದಿ ಹರಡಿತ್ತು.ಇದಾದ ಬಳಿಕ ಇದೀಗ ಡಾ.ಸುರೇಶ್ ಪುತ್ತೂರಾಯ ಅವರು ಡಾ.ಎಂ.ಕೆ.ಪ್ರಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಬಿಜೆಪಿ ಕಚೇರಿಯಲ್ಲೂ ಪ್ರಸ್ತಾಪ:
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಇತ್ತೀಚೆಗೆ ನಡೆದಿದ್ದ ಆಂತರಿಕ ಸಭೆಯಲ್ಲಿಯೂ, ಪುತ್ತಿಲ ಮತ್ತು ಬಿಜೆಪಿ ನಡುವಿನ ಗೊಂದಲಕ್ಕೆ ತೆರೆ ಎಳೆಯುವಂತೆ ಪಕ್ಷದ ಪ್ರಮುಖರು ಚರ್ಚಿಸಿದ್ದಾರೆ.ಇತ್ತೀಚೆಗೆ ಬಿಜೆಪಿ ಸಂಸ್ಥಾಪಕರ ಬಲಿದಾನ ದಿನ ಕಾರ್ಯಕ್ರಮದ ಬಳಿಕ ಪಕ್ಷದ ಪ್ರಮುಖರ ಆಂತರಿಕ ಸಭೆ ನಡೆದಿತ್ತು.ಅದರಲ್ಲಿ ಈ ಪ್ರಸ್ತಾಪ ಆಗಿದೆ ಎಂದು ತಿಳಿದು ಬಂದಿದೆ.
ಆರ್.ಎಸ್‌ಎಸ್ ಸಮನ್ವಯ ಬೈಠಕ್‌ನಲ್ಲಿ ಪ್ರಸ್ತಾಪವಿಲ್ಲ
ಜೂ.25ರಂದು ಮಂಗಳೂರುನಲ್ಲಿ ನಡೆದಿದ್ದ ಆರ್‌ಎಸ್‌ಎಸ್ ಸಮನ್ವಯ ಬೈಠಕ್‌ನಲ್ಲಿ ಪುತ್ತಿಲ ವರ್ಸಸ್ ಬಿಜೆಪಿ ವಿಚಾರ ಪ್ರಸ್ತಾಪವಾಗಿಲ್ಲ ಎಂದು ತಿಳಿದು ಬಂದಿದೆ.ಹಿಂದು ಧಾರ್ಮಿಕ ಪದ್ಧತಿಗೆ ಸಂಬಂಧಿಸಿ ಸಂಘದ ಮೂಲಕ ಆಚರಿಸಿಕೊಂಡು ಬರಲಾಗುತ್ತಿರುವ ಗುರುಪೂಜೆ, ರಕ್ಷಾ ಬಂಧನ ಸಹಿತ ಇತರ ಕಾರ್ಯಕ್ರಮಗಳ ಕುರಿತು ಸಮನ್ವಯ ಬೈಠಕ್‌ನಲ್ಲಿ ಚರ್ಚೆ ನಡೆಯುತ್ತದೆ.ಪ್ರತಿ ಎರಡುಮೂರು ತಿಂಗಳಿಗೊಮ್ಮೆ ಈ ಬೈಠಕ್ ನಡೆಯುತ್ತದೆ.ಜೂ.25ರಲ್ಲಿ ಮಂಗಳೂರು ಸಂಘ ನಿಕೇತನದಲ್ಲಿ ನಡೆದ ಬೈಠಕ್‌ನಲ್ಲಿ ಆರ್‌ಎಸ್‌ಎಸ್ ಪ್ರಾಂತ ಮಟ್ಟದ ಪ್ರಮುಖರು ಭಾಗವಹಿಸಿದ್ದಾರೆ.ಅಲ್ಲಿ ಪುತ್ತಿಲ ಮತ್ತು ಬಿಜೆಪಿ ನಡುವಿನ ಗೊಂದಲ ವಿಚಾರದಲ್ಲಿ ಚರ್ಚೆಗಳು ನಡೆಯಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.ಆದರೆ ಈ ಕುರಿತು ಬೈಠಕ್‌ನಲ್ಲಿ ಯಾವುದೇ ಪ್ರಸ್ತಾಪ ಆಗಿಲ್ಲ ಎಂದು ತಿಳಿದು ಬಂದಿದೆ.