ಅಂಬಿಕಾ ಮಹಾವಿದ್ಯಾಲಯದಲ್ಲಿ ಪಾರಂಪರಿಕ ದಿನಾಚರಣೆ ಹಾಗೂ ಬಹುಮಾನ ವಿತರಣೆ

0

ಶಿಕ್ಷಣದೊಂದಿಗೆ ಗಳಿಸುವ ಸಂಸ್ಕಾರ ಅತ್ಯಂತ ಮುಖ್ಯ : ಸುರೇಶ ಶೆಟ್ಟಿ
ಪುತ್ತೂರು: ಶಿಕ್ಷಣ ಪಡೆಯುವ ಹೊತ್ತಿನಲ್ಲಿ ನಾವು ಗಳಿಸುವ ಸಂಸ್ಕಾರ ಅತ್ಯಂತ ಮುಖ್ಯವಾದದ್ದು. ನಾಳಿನ ಸಮಾಜದಲ್ಲಿ ಬದುಕುವ ಹೊತ್ತಿನಲ್ಲಿ ನಮ್ಮಲ್ಲಿನ ಒಳ್ಳೆಯತನಗಳು ಉಪಯೋಗಕ್ಕೆ ಬರುತ್ತವೆ. ಎಲ್ಲ ವಿಷಯಗಳನ್ನೂ ಬದುಕಿಗೆ ಅನುಕೂಲಕರವಾಗಿ ಪರಿವರ್ತಿಸಿ ಮುನ್ನಡೆಯಬೇಕು. ಆಗ ಜೀವನ ಸಮೃದ್ಧಗೊಳ್ಳುತ್ತದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಜೂ.28ರಂದು ನಡೆದ ಪಾರಂಪರಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಗುರು ಹಿರಿಯರ ಬಗೆಗೆ ಗೌರವವನ್ನು ಇಟ್ಟುಕೊಂಡು ಮುಂದುವರಿಯಬೇಕು. ಅವರ ಸಹಾಯದೊಂದಿಗೆ ಕಲಿಕೆಯನ್ನು ನಿರಂತರವಾಗಿ ಮುಂದುವರೆಸಬೇಕು. ಹೊಸ ಹೊಸ ಸಂಗತಿಗಳು ಎಲ್ಲೇ ಕಂಡರೂ ಅದನ್ನು ನಮ್ಮದಾಗಿಸುವ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಪತ್ರಿಕೆಯಲ್ಲಿ ಪ್ರಕಟವಾಗುವ ತುಣುಕು ವಿಚಾರಗಳು ಕೂಡ ನಮ್ಮ ಜ್ಞಾನ ವಿಸ್ತರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನೆನಪಿನಲ್ಲಿಡಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ನಮ್ಮ ಜೀವನ ಶೈಲಿ ಬದಲಾಗುತ್ತಿದೆ. ಎರಡು ದಶಕಗಳ ಹಿಂದಿನ ಜೀವನಕ್ರಮಕ್ಕೂ ಈಗಿನ ಜೀವನ ಕ್ರಮಕ್ಕೂ ಸಾಕಷ್ಟು ವ್ಯತ್ಯಾಸಗಳಾಗಿವೆ. ಇಂದಿನ ಉಡುಗೆ ತೊಡುಗೆಗಳು ಮೈಮುಚ್ಚುವುದಕ್ಕಿಂತ ಪ್ರದರ್ಶನಕ್ಕೇ ಆದ್ಯತೆ ನೀಡುತ್ತಿವೆ. ನಮ್ಮತನವಿಲ್ಲದ ಬದುಕಿಗೆ ಅರ್ಥವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನವರಿಕೆ ಮಾಡಿಕೊಳ್ಳಬೇಕು ಎಂದರು.

ನಮ್ಮ ದೇಹ ನಮ್ಮ ಆಯ್ಕೆಯಲ್ಲ, ಭಗವಂತನ ನಿರ್ಣಯ. ಹಾಗಾಗಿ ದೇಹಕ್ಕೆ ಅತ್ಯಂತ ಹೆಚ್ಚು ಪಾವಿತ್ರ್ಯವಿದೆ. ಅಂತಹ ಪವಿತ್ರತೆಯ ಮಹತ್ವವನ್ನು ಅರಿಯದೆ ಮೈಪ್ರದರ್ಶನ ಮಾಡುವ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸುವ ವ್ಯವಸ್ಥೆಗಳೂ ಆಧುನಿಕ ಜಗತ್ತಿನಲ್ಲಿವೆ. ಇಂತಹ ಸ್ಪರ್ಧೆಗಳಲ್ಲಿ ಭಾರತೀಯರು ವಿಜೇತರಾದರೆ ಅದು ಗೌರವವಲ್ಲ, ಅವಮಾನ. ಯಾಕೆಂದರೆ ನಮ್ಮ ದೇಶದ ಸಂಸ್ಕೃತಿ, ಆಚಾರ ವಿಚಾರ ಮೈತೋರುವುದನ್ನು ಮತ್ತು ಮೈಮಾರುವುದನ್ನು ಒಪ್ಪಿಕೊಳ್ಳುವುದಿಲ್ಲ. ಇದನ್ನು ಯುವಸಮುದಾಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜು ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪಂಚಮಿ ಬಾಕಿಲಪದವು ಹಾಗೂ ಅಂಕಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಚಂದ್ರಕಾಂತ ಗೋರೆ ವಂದಿಸಿದರು.

LEAVE A REPLY

Please enter your comment!
Please enter your name here