ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ
ಪುತ್ತೂರು: ಸರಕಾರ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಇತರ ಯೋಜನೆಗಳನ್ನು ನೀಡಿದಂತೆ ಪಂಚಾಯತ್ನ ಕುಡಿಯುವ ನೀರಿನ ಪಂಪ್ಗಳ ವಿದ್ಯುತ್ ಬಿಲ್ಲಿಗೂ ಸಬ್ಸಿಡಿ ನೀಡಬೇಕು ಎಂದು ಆರ್ಯಾಪು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಸಭೆಯು ಜೂ.28ರಂದು ಅಧ್ಯಕ್ಷೆ ಸರಸ್ವತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.ಕುಡಿಯುವ ನೀರಿನ ಪಂಪ್ಗಳ ವಿದ್ಯುತ್ ಬಿಲ್ ಮೆಸ್ಕಾಂಗೆ ಪಾವತಿಸಲು ಬಾಕಿಯಿರುವ ಬಗ್ಗೆ ಪಿಡಿಓ ಸಭೆಯ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಸದಸ್ಯ ಹರೀಶ್ ನಾಯಕ್ ಮಾತನಾಡಿ, ಗ್ರಾಮದ ಜನರಿಗೆ ಅವಶ್ಯಕವಾದ ಕುಡಿಯುವ ನೀರಿನ ಪಂಪ್ಗಳ ವಿದ್ಯುತ್ ಬಿಲ್ ಬಾಕಿಯಿರುವುದು.ಸರಕಾರ ಉಚಿತ ಯೋಜನೆಗಳನ್ನು ಜಾರಿಗೊಳಿಸಿದಂತೆ ಪಂಚಾಯತ್ನ ಕುಡಿಯುವ ನೀರಿನ ಪಂಪ್ಗಳಿಗೂ ಉಚಿತ ವಿದ್ಯುತ್ ನೀಡಲಿ ಎಂದರು.ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ಮಾತನಾಡಿ, ಪಂಚಾಯತ್ಗೆ ಬರುವ ಅನುದಾನ ಮೂರನೇ ಒಂದು ಭಾಗ ವಿದ್ಯುತ್ ಬಿಲ್ಗೆ ಸಂದಾಯವಾಗುತ್ತಿರುವುದರಿಂದ ಗ್ರಾಮದ ಅಭಿವೃದ್ಧಿ ಹಿನ್ನಡೆಯಾಗುತ್ತಿದೆ.ಆದರೆ ಕುಡಿಯುವ ನೀರು ಪೂರೈಕೆ ಅತೀ ಮುಖ್ಯವಾದ್ದರಿಂದ ಕುಡಿಯುವ ನೀರಿನ ಸಂಪರ್ಕದ ವಿದ್ಯುತ್ ಶುಲ್ಕದಲ್ಲಿ ಸಬ್ಸಡಿ ನೀಡಬೇಕು ಎಂದು ಆಗ್ರಹಿಸಿದರು.ಇದಕ್ಕೆ ಇತರ ಸದಸ್ಯರು ಸಹಮತ ಸೂಚಿಸಿದರು.
ತೆರಿಗೆ ಏರಿಕೆಗೆ ಸದಸ್ಯರ ವಿರೋಧ:
ಪಂಚಾಯತ್ ವ್ಯಾಪ್ತಿಯಲ್ಲಿರುವ ಕಟ್ಟಡಗಳನ್ನು ಸಮಗ್ರವಾಗಿ ಸಮೀಕ್ಷೆ ನಡೆಸಿ ತೆರಿಗೆ ಪರಿಷ್ಕರಣೆ ಮಾಡುವಂತೆ ಸರಕಾರದಿಂದ ಬಂದಿರುವ ಸೊತ್ತೋಲೆಯನ್ನು ಪಿಡಿಓ ಸಭೆಯಲ್ಲಿ ಮಂಡಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈಯವರು ತೆರಿಗೆ ಏರಿಕೆ ಮಾಡುವುದು ಬೇಡ. ಇರುವ ತೆರಿಗೆಯೇ ಬಹಳಷ್ಟಿದೆ. ತೆರಿಗೆ ಏರಿಕೆ ಮಾಡುವುದರಿಂದ ಜನರಿಗೆ ಇನ್ನಷ್ಟು ಹೊರೆಯಾಗುತ್ತಿದ್ದು ಏರಿಕೆ ಮಾಡುವುದು ಬೇಡ ಎಂದರು. ಸದಸ್ಯರಾದ ವಸಂತ, ಹರೀಶ್ ನಾಯಕ್, ಯಾಕೂಬ್ ಮೊದಲಾದವರು ತೆರಿಗೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು. ತೆರಿಗೆ ಪರಿಷ್ಕರಣೆಗೆ ಮನೆ ಅಳತೆ ಮಾಡುವಾಗ ಎಲ್ಲರಿಗೂ ಒಂದೇ ನ್ಯಾಯವನ್ನು ಪಾಲಿಸುವಂತೆ ಸದಸ್ಯ ವಸಂತರವರು ಆಗ್ರಹಿಸಿದರು.
ಭೂಮಿ, ಕಟ್ಟಡ ತೆರಿಗೆ ರಶೀದಿ ಅಪೂರ್ಣ-ಸರಿಪಡಿಸಲು ಆಗ್ರಹ:
ಗ್ರಾಮಸ್ಥರು ಸಂದಾಯ ಮಾಡುವ ಭೂಮಿ ಹಾಗೂ ಕಟ್ಟಡದ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಅವರಿಗೆ ನೀಡುವ ರಶೀದಿಯು ಅಪೂರ್ಣವಾಗಿದೆ. ಅದರಲ್ಲಿ ಪಾವತಿ ಮಾಡುವವರ ಹೆಸರು, ಮನೆ ನಂಬರ್ ಹಾಗೂ ಪಾವತಿ ಸಹಿತ ಯಾವುದೇ ಮಾಹಿತಿಗಳು ರಶೀದಿಯಲ್ಲಿಲ್ಲ. ಅಲ್ಲದೆ ರಶೀದಿಯಲ್ಲಿ ಪ್ರಿಂಟ್ ದೀರ್ಘಕಾಲ ಉಳಿಯವುದಿಲ್ಲ. ಹೀಗಾಗಿ ಅದು ಅಪೂರ್ಣವಾಗಿದ್ದು ಅದನ್ನು ಸರಿಪಡಿಸುವಂತೆ ಸದಸ್ಯ ನೇಮಾಕ್ಷ ಸುವರ್ಣರವರು ತಿಳಿಸಿದರು. ಪ್ರತಿಕ್ರಿಯಿಸಿದ ಪಿಡಿಓ ನಾಗೇಶ್, ಈ ಸಮಸ್ಯೆಯ ಬಗ್ಗೆ ಈಗಾಗಲೇ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದರಿ ರಶೀದಿಯು ಪಿಓಎಸ್ ಯಂತ್ರದ ಮೂಲಕ ಆಗುತ್ತಿದ್ದು ಅದರಲ್ಲಿ ಪಾವತಿದಾರರ ಹೆಸರು, ಹಿಂದಿನ ಬಾಕಿ, ಮನೆ ನಂಬರ್ ಸೇರಿದಂತೆ ಯಾವುದೇ ಮಾಹಿತಿಗಳಿಲ್ಲದೇ ಇದ್ದು ಅದು ಪೂರ್ಣ ರೂಪದಲ್ಲಿಲ್ಲ. ಸರಕಾರ ಎಲ್ಲಾ ದಾಖಲೆಗಳಿಗೆ ತೆರಿಗೆ ರಶೀದಿಯು ಪ್ರಮುಖವಾಗಿದ್ದು ಅದರ ಪ್ರಿಂಟ್ ದೀರ್ಘಕಾಲ ಉಳಿಯಬೇಕಾಗಿದ್ದು ಹಿಂದಿನ ಮಾದರಿಯಲ್ಲಿ ನೀಡುವಂತೆ ತಿಳಿಸಲಾಗಿದೆ ಎಂದರು.
ಹಂಟ್ಯಾರು ಶಾಲೆಗೆ ಮುಖ್ಯಶಿಕ್ಷಕರ ನೇಮಿಸಿ:
ಸದಸ್ಯ ಯತೀಶ್ ದೇವ ಮಾತನಾಡಿ, ಹಂಟ್ಯಾರು ಶಾಲೆಯಲ್ಲಿ 4 ಮಂದಿ ಶಿಕ್ಷಕರ ಪೈಕಿ ಓರ್ವರಿಗೆ ವರ್ಗಾವಣೆಯಾಗಿದೆ.ಈಗ 80 ವಿದ್ಯಾರ್ಥಿಗಳಿದ್ದರೂ ಶಾಲೆಯಲ್ಲಿ ಕೇವಲ ಮೂರು ಮಂದಿ ಶಿಕ್ಷಕರಿರುವುದು, ಮುಖ್ಯ ಶಿಕ್ಷಕರೂ ಇಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ತೀರಾ ಸಂಕಷ್ಟ ಅನುಭವಿಸುತ್ತಿದ್ದು ಶಾಲೆಗೆ ಖಾಯಂ ಮುಖ್ಯ ಶಿಕ್ಷಕರನ್ನು ಕೂಡಲೇ ನೇಮಕಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ವಾರ್ಡ್ಗಳಿಗೆ ಅನುದಾನ ಸಾಕಾಗುವುದಿಲ್ಲ:
ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಮಾತನಾಡಿ, ನಾವು ಪಂಚಾಯತ್ ಸದಸ್ಯರಾಗಿ ಎರಡೂವರೆ ವರ್ಷ ಕಳೆದರೂ ಕನಿಷ್ಠ 10 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿಲ್ಲ.ಬರುವ 1-2 ಲಕ್ಷ ರೂಪಾಯಿ ಅನುದಾನದ ಏನು ಮಾಡುವುದು. ಕನಿಷ್ಠ ಅನುದಾನ ನೀಡಿ ನಮ್ಮ ಹಕ್ಕನ್ನು ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿದರು.
ಖಾಸಗಿ ರಸ್ತೆ ಹಸ್ತಾಂತರ ವಿಚಾರ-ಪಿಡಿಓ, ಸದಸ್ಯ ಪವಿತ್ರ ರೈ ಮಧ್ಯೆ ಮಾತಿನ ಚಕಮಕಿ:
ಬೂಡಿಯಾರ್ ಬಳಿ ರಸ್ತೆ ನಿರ್ಮಾಣಕ್ಕೆ ಖಾಸಗಿಯವರು ಜಾಗವನ್ನು ಪಂಚಾಯತ್ಗೆ ಹಸ್ತಾಂತರಿಸುವ ಬಗ್ಗೆ ಸಲ್ಲಿಸಿರುವ ಅರ್ಜಿಯನ್ನು ಪಿಡಿಓರವರು ಸಭೆಯಲ್ಲಿ ಮಂಡಿಸಿ, ಹಸ್ತಾಂತರಕ್ಕೆ ನಿರ್ಧಿಷ್ಟ ನಿಯಮಗಳಿವೆ. ಆದರೆ ಅರ್ಜಿಯಲ್ಲಿ ಅದಕ್ಕೆ ಪೂರಕವಾದ ದಾಖಲೆಗಳಿಲ್ಲ. ಅಲ್ಲದೆ ಹಸ್ತಾಂತರಿಸಲು ನಿಯಮಗಳಿದ್ದು ಅದೇ ರೀತಿ ನಡೆಯಬೇಕು ಎಂದು ತಿಳಿಸಿದರು. ಇದೇ ವಿಚಾರದಲ್ಲಿ ಪಿಡಿಓ ನಾಗೇಶ್ ಹಾಗೂ ಸದಸ್ಯ ಪವಿತ್ರ ರೈಯವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಿಯಮಗಳಂತೆ ಮಾಡಿದ ರಸ್ತೆಗಳನ್ನು ನೀಡುವಂತೆ ಪವಿತ್ರ ರೈಯವರು ಪಿಡಿಓರವರಿಗೆ ತಿಳಿಸಿದರು. ಇದಕ್ಕೆ ಪೂರಕವಾಗಿ, ಈ ಹಿಂದೆ ಮಾಡಿದ ರಸ್ತೆಯ ನಿಯಮಗಳು ಹಾಗೂ ನೀಡಿದ ದಾಖಲೆಗಳನ್ನು ಪವಿತ್ರ ರೈಯವರಿಗೆ ಸಲ್ಲಿಸಿದರು. ನಿಯಗಳು ಇರಲಿ.ಈಗಾಗಲೇ ಸಲ್ಲಿಸಿರುವ ಅರ್ಜಿಯಲ್ಲಿ ಜಾಗದವರ ಸಹಿಯಿದೆ.ಅದನ್ನು ಮಾಡುವಂತೆ ಪವಿತ್ರ ರೈ ಹೇಳಿದ ಎಲ್ಲಿಯೂ ಇಲ್ಲದ ಕಾನೂನು, ನಿಯಮಗಳು ಆರ್ಯಾಪು ಪಂಚಾಯತ್ನಲ್ಲಿದೆ.ಇಷ್ಟೊಂದು ನಿಯಮಗಳು ಬೇರೆ ಯಾವ ಪಂಚಾಯತ್ನಲ್ಲಿಲ್ಲ ಎಂದು ಇತರ ಪಂಚಾಯತ್ಗಳ ಪಿಡಿಓಗಳು ತಿಳಿಸಿದ್ದಾರೆ.ಅರ್ಜಿ ಸಲ್ಲಿಸಿದವರು ನಮಗೆ ಮತ ನೀಡಿದವರು.ಇಲ್ಲಿ ಪಿಡಿಓರವರು ಬಡವರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ನಾಗೇಶ್ರವರು, ನಾನು ಬಡವರನ್ನು ಸತಾಯಿಸಿರುವುದು, ತೊಂದರೆ ಕೊಟ್ಟಿದ್ದರೆ ಸಾಕ್ಷಿಕೊಡಿ ಎಂದು ತಿಳಿಸಿದರು. ಸದಸ್ಯ ಪವಿತ್ರ ರೈಯವರ ಆರೋಪವನ್ನು ಇತರ ಸದಸ್ಯರು ಆಕ್ಷೇಪಿಸಿದರು. ಸದಸ್ಯ ಯಾಕೂಬ್ ಸುಲೈಮಾನ್ ಮಾತನಾಡಿ, ಪಿಡಿಓರವರು ಯಾವ ಗ್ರಾಮಸ್ಥರನ್ನೂ ಸತಾಯಿಸಿಲ್ಲ ಎಂದು ತಿಳಿಸಿದರು. ನಾಗೇಶ್ರವರು ಬಂದ ಬಳಿಕ ಪಂಚಾಯತ್ನಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಸದಸ್ಯ ವಸಂತ ತಿಳಿಸಿದರು. ಸದಸ್ಯ ನೇಮಾಕ್ಷ ಸುವರ್ಣ ಮಾತನಾಡಿ, ಈ ಹಿಂದ ನಡೆದ ಘಟನೆಯಿಂದಾಗಿ ಮಾಜಿ ಅಧ್ಯಕ್ಷರು ಹಾಗೂ ಹಿಂದಿನ ಪಿಡಿಓರವರು ಕೋರ್ಟ್ಗೆ ಅಲೆದಾಡುತ್ತಿದ್ದಾರೆ.ಇಂತಹ ಘಟನೆ ಮತ್ತೆ ಮರುಕಳಿಸಬಾರದು. ಹೀಗಾಗಿ ಹಸ್ತಾಂತರ ಪ್ರಕ್ರಿಯೆಗಳು ನಿಯಮಗಳಂತೆ ನಡೆಯಲಿ ಎಂದು ಹೇಳಿದರು. ಪುರುಷೋತ್ತಮ ರೈ ಧ್ವನಿಗೂಡಿಸಿದರು.
ಎಲ್ಲಾ ಶಾಲೆಗಳಿಗೆ ಕ್ರೀಡಾ ಉಪಕರಣ:
ಕಳೆದ ಬಾರಿ ಪಂಚಾಯತ್ ವ್ಯಾಪ್ತಿಯ ಯುವಕ ಮಂಡಲಗಳಿಗೆ ಕ್ರೀಡಾ ಪರಿಕರಗಳನ್ನು ಪಂಚಾಯತ್ನಿಂದ ವಿತರಿಸಲಾಗಿದೆ. ಶಾಲಾ ಮಕ್ಕಳಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಶಾಲೆಗಳಿಗೆ ಕ್ರೀಡಾಪರಿಕರಗಳನ್ನು ವಿತರಿಸಲಾಗುವುದು. ತಾಲೂಕು ಮಟ್ಟ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಜರ್ಕಿನ್ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ಪಿಡಿಓ ತಿಳಿಸಿದರು.
ಎಸ್ಸಿ, ಎಸ್ಟಿ ಮನೆಗಳಿಗೆ ಸೋಲಾರ್ ಲೈಟ್:
ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿರುವ ಪ.ಜಾತಿ ಹಾಗೂ ಪ.ಪಂಗಡ, ಅಂತ್ಯೋದಯ ಹಾಗೂ ವಿಕಲಚೇತನರ ಮನೆಗಳಿಗೆ ಸೋಲಾರ್ ಗೃಹ ವಿದ್ಯುದೀಕರಣ ಯೋಜನೆಯಲ್ಲಿ ಸೋಲಾರ್ ವಿದ್ಯುತ್ ಒದಗಿಸಲಾಗುವುದು.ಆರ್ಯಾಪು ಗ್ರಾಮದಲ್ಲಿ ೨೦ ಮನೆಗಳು, ಕುರಿಯ ಗ್ರಾಮದ 12 ಮನೆ, ಅಂತ್ಯೋದಯದ 7 ಹಾಗೂ ವಿಕಲಚೇತನರ 10 ಮನೆಗಳಿಗೆ ಸೋಲಾರ್ ದೀಪ ನೀಡಲಾಗವುದು ಎಂದು ಪಿಡಿಓ ನಾಗೇಶ್ ತಿಳಿಸಿದರು.
ಆ.17ರಂದು ಗ್ರಾಮ ಸಭೆ:
ಪಂಚಾಯತ್ನ ಪ್ರಥಮ ಸುತ್ತಿನ ಗ್ರಾಮ ಸಭೆಯನ್ನು ಆ.17ರಂದು ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶ್ರದ್ಧಾಂಜಲಿ ಅರ್ಪಣೆ:
ಇತ್ತೀಚೆಗೆ ನಿಧನರಾದ ಗ್ರಾ.ಪಂ ಸದಸ್ಯ ರುಕ್ಮಯ್ಯ ಮೂಲ್ಯರವರಿಗೆ ಸಭೆಯ ಪ್ರಾರಂಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಉಪಾಧ್ಯಕ್ಷೆ ಪೂರ್ಣಿಮಾ ರೈ, ಸದಸ್ಯರಾದ ನಾಗೇಶ್, ಶ್ರೀನಿವಾಸ ರೈ, ಪವಿತ್ರ ರೈ, ನಳಿನಿ, ಗೀತಾ, ಕಲಾವತಿ, ರಶೀದಾ, ರತ್ನಾವತಿ, ಕಸ್ತೂರಿ ಹಾಗೂ ರೇವತಿ ಉಪಸ್ಥಿತರಿದ್ದರು.ಪಿಡಿಓ ನಾಗೇಶ್ ಸ್ವಾಗತಿಸಿ, ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.