ಒಳಮೊಗ್ರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಪುತ್ತೂರಿನಲ್ಲಿ ಭ್ರಷ್ಟಚಾರದ ಬಾಗಿಲನ್ನು ಬಂದ್ ಮಾಡಿಯೇ ಸಿದ್ದ: ಶಾಸಕ ಅಶೋಕ್ ರೈ


ಪುತ್ತೂರು: ಬಹುತೇಕ ಅಧಿಕಾರಿಗಳು, ಸರಕಾರಿ ಕಚೇರಿ ಸಿಬ್ಬಂದಿಗಳು ಒಳ್ಳೆಯವರೇ ಆಗಿದ್ದಾರೆ, ಆದರೆ ಕೆಲವು ಭ್ರಷ್ಟ ಅಧಿಕಾರಿಗಳಿಂದ ಎಲ್ಲರಿಗೂ ಕೆಟ್ಟ ಹೆಸರು ಬರುವಂತಾಗುತ್ತದೆ, ತನ್ನ ಕ್ಷೇತ್ರದಲ್ಲಿ ಈಗಾಗಲೇ ಭ್ರಷ್ಟಚಾರಕ್ಕೆ ಕಡಿವಾಣ ಹಾಕುವ ಕೆಲಸವನ್ನು ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಭ್ರಷ್ಟಾಚಾರದ ಬಾಗಿಲು ಬಂದ್ ಆಗಲಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.


ಅವರು ಕುಂಬ್ರ ಅಕ್ಷಯ ಸಭಾಂಗಣದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ಸರಕಾರಿ ಕಚೇರಿಗೆ ಸಾರ್ವಜನಿಕರು ಧೈರ್ಯದಿಂದ ಹೋಗುವಂತ ವಾತಾವರಣ ನಿರ್ಮಾಣ ಮಾಡುತ್ತೇನೆ. ಗ್ರಾಮ ಮಟ್ಟದಿಂದಲೇ ಭ್ರಷ್ಟಚಾರ ನಿರ್ಮೂಲನೆ ಕಾರ್ಯ ಪ್ರಾರಂಭವಾಗಲಿದ್ದು ಇದಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರಕಾರ ಕಮಿಷನ್ ದಂಧೆ ಮಾಡುವ ಮೂಲಕ ಸರಕಾರದ ಹಣವನ್ನು ದೋಚುತ್ತಿತ್ತು. ಅಧಿಕಾರಿಗಳ ವರ್ಗಾವಣೆಯಲ್ಲೂ ಲಂಚ ಪಡೆಯುತ್ತಿತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ ಅಧಿಕಾರಿಗಳ ವರ್ಗಾವಣೆಗಾಗಿ ಯಾರಿದಂಲೂ ನಯಾ ಪೈಸೆ ಪಡೆದುಕೊಂಡಿಲ್ಲ ಅ ಮೂಲಕ ಸ್ವಚ್ಚ ಸರಕಾರಕ್ಕೆ ರಾಜ್ಯದಲ್ಲಿ ಚಾಲನೆ ದೊರಕಿದೆ ಎಂದು ಹೇಳಿದರು.

ಐದು ಗ್ಯಾರಂಟಿಗಳನ್ನು ಪಕ್ಷದ ಕಾರ್ಯಕರ್ತರೆ ಚಾಲ್ತಿಗೆ ತರಲಿದ್ದಾರೆ
ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನೀಡಿತ್ತು. ಅವುಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರಲಿದೆ. ಈ ಯೋಜನೆಯನ್ನು ಕಾರ್ಯಕರ್ತರ ಮೂಲಕವೇ ಚಾಲ್ತಿಗೆ ತರಲಿದ್ದೇವೆ. ಪಕ್ಷದ ಮೂಲಕವೇ ಅದನ್ನು ಕಾರ್ಯರೂಪಕ್ಕೆ ತಂದರೆ ಅದು ಕಾಂಗ್ರೆಸ್ ಮಾಡಿದ ಸಾಧನೆ ಎಂದು ಜನರಿಗೆ ಗೊತ್ತಾಗಲಿ ಎಂದರು. ಉಚಿತ ಅಕ್ಕಿ ಯೋಜನೆಗೆ ಕೇಂದ್ರದ ಬಿಜೆಪಿ ಸರಕಾರ ಅಡ್ಡಿ ಮಾಡಿದೆ. ಬಡವರಿಗೆ ಅಕ್ಕಿ ಕೊಡಬಾರದು ಎಂಬ ಉದ್ದೇಶದಿಂದ ದುಡ್ಡು ಕೊಟ್ಟರೂ ಅಕ್ಕಿ ಕೊಡುವುದಿಲ್ಲ ಎಂದು ಹೇಳಿದೆ. ತಿನ್ನುವ ಅನ್ನದಲ್ಲೂ ಮೋದಿ ಸರಕಾರ ರಾಜಕೀಯ ಮಾಡಿದ್ದು ಸರಿಯಲ್ಲ ಇದನ್ನು ಜನ ಅರ್ಥ ಮಾಡಿಕೊಳ್ಳಬೇಕಿದೆ ಎಂದರು. ಅಕ್ಕಿ ಬೇಡ ಎಂದವರಿಗೆ ಅದರ ಹಣವನ್ನು ಕೂಡಾ ಕಾಂಗ್ರೆಸ್ ಸರಕಾರ ಪಾವತಿ ಮಾಡುತ್ತದೆ ಎಂದು ಶಾಸಕರು ತಿಳಿಸಿದರು.

ಉಚಿತ ಬಸ್‌ನಿಂದ ಲಾಭವಾಗಿದೆ
ಮಹಿಳೆಯರಿಗೆ ಉಚಿತ ಬಸ್(ಶಕ್ತಿಯೋಜನೆ)ಯಿಂದ ಕೆಎಸ್‌ಆರ್‌ಟಿಸಿಗೂ ಲಾಭವಾಗಿದೆ, ವ್ಯಾಪಾರಿಗಳಿಗೂ ಲಾಭವಾಗಿದೆ . ಯೋಜನೆಯಿಂದ ಕೆಎಸ್‌ಆರ್‍ಟಿಸಿ ದಿವಾಳಿಯಾಗುತ್ತದೆ ಎಂದು ಆರೋಪ ಮಾಡಿದವರು ಇದನ್ನು ತಿಳಿದುಕೊಳ್ಳಬೇಕು. ಬಸ್ ಫ್ರೀ ಇದ್ದ ಕಾರಣ ಪೇಟೆಯಲ್ಲಿ ಜನಸಂಖ್ಯೆ ಜಾಸ್ತಿಯಾಗಿದೆ. ಹಳ್ಳಿ ಜನ ಪೇಟೆಗೆ ಹೆಚ್ಚಾಗಿ ಬರುತ್ತಿದ್ದಾರೆ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಇದರಿಂದ ಅಂಗಡಿ ಮಳಿಗೆಗಳ ವ್ಯಾಪಾರಿಗಳಿಗೆ ವ್ಯಾಪಾರವೂ ಜಾಸ್ತಿಯಾಗಿದೆ ಎಂದು ಹೇಳಿದ ಅವರು ಕಾಂಗ್ರೆಸ್ ಎನೇ ಮಾಡಿದರೂ ಅದು ಜನರಿಗೆ ಪ್ರಯೋಜನವಾಗುತ್ತದೆ ಎಂಬುದನ್ನು ನಾವು ಪ್ರತೀಯೊಬ್ಬರಿಗೂ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಜನರ ಪ್ರೀತಿಗಳಿಸಿ
ಕಾರ್ಯಕರ್ತರು ಜನರ ಪ್ರೀತಿ ಗಳಿಸಬೇಕು. ಕಾಂಗ್ರೆಸ್ ಸರಕಾರದ ಯೋಜನೆ ಮತ್ತು ಕಾಂಗ್ರೆಸ್‌ನ ಅನಿವಾರ್ಯತೆ ಬಗ್ಗೆ ಜನರಿಗೆ ತಿಳಿಹೇಳುವ ಮೂಲಕ ಅವರನ್ನು ಪಕ್ಷದತ್ತ ಆಕರ್ಷಿಸಬೇಕು. ಬೇರೆ ಪಕ್ಷದವರೆಂದು ಅವರನ್ನು ದೂರ ಮಾಡಬೇಡಿ ಅವರನ್ನೂ ನಿಮ್ಮ ಜೊತೆ ಸೇರಿಸಿಕೊಳ್ಳಿ, ಕಾಂಗ್ರೆಸ್ ಏನು ಮಾಡಿದೆ ಎಂಬುದನ್ನು ಅವರಿಗೆ ತಿಳಿಸಿ ಕರೆಸಿಕೊಳ್ಳಿ ಎಲ್ಲರೂ ಒಟ್ಟಾಗಿ ಪಕ್ಷವನ್ನು ಗಟ್ಟಿಗೊಳಿಸಿ ಎಂದು ಶಾಸಕರು ಕಾರ್ಯಕರ್ತರಿಗೆ ಮನವಿ ಮಾಡಿದರು.

ಗಾರ್ಬಲ್ ಕೆಲಸದ ಮಹಿಳೆಗೆ 1.40 ಲಕ್ಷ ಆದಾಯ..!
ರೇಶನ್ ಕಾರ್ಡು ಅರ್ಜಿ ಹಾಕಲು ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಹಾಕಿದ ಮಹಿಳೆಗೆ 1.40 ಲಕ್ಷ ರೂ ಆದಾಯ ಪ್ರಮಾಣಪತ್ರ ನೀಡಿದ್ದಾರೆ. ಅರ್ಜಿ ಹಾಕಿದ ಬಡ ಮಹಿಳೆ ಅಡಿಕೆ ಗಾರ್ಬಲ್ ಕೆಲಸಕ್ಕೆ ಹೋಗುತ್ತಿದ್ದು, ಕೂಲಿ ಕಾರ್ಮಿಕರಿಗೆ 1.40ಲಕ್ಷ ಆದಾಯ ಕೊಟ್ಟಿದ್ದಾರೆ. 24 ಗಂಟೆಯೊಳಗೆ ಅರ್ಜಿ ಹಾಕಿದ ಮಹಿಳೆಗೆ ಎಷ್ಟು ಪ್ರಮಾಣದ ಆದಾಯ ಪ್ರಮಾಣ ಪತ್ರ ಬೇಕೋ ಅದನ್ನು ಕೊಡಿಸುವಂತೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ಸರಕಾರದ ಸೌಲಭ್ಯವನ್ನು ಪಡೆಯುವಲ್ಲಿ ಯಾವ ಅಧಿಕಾರಿಯೂ ಬಡವರಿಗೆ ತೊಂದರೆ ಕೊಡಬೇಡಿ ಅದನ್ನು ನಾನು ಸಹಿಸುವುದಿಲ್ಲ ಎಂದು ಶಾಸಕರು ಹೇಳಿದರು.

ಪುತ್ತೂರಿನಿಂದ ಯಾವ ಅಧಿಕಾರಿಯನ್ನೂ ಕಳಿಸುವುದಿಲ್ಲ
ಪುತ್ತೂರಿಗೆ ಬರುವ ಅಧಿಕಾರಿಗಳಿಗೆ ನಾನು ಪತ್ರ ಕೊಡುತ್ತೇನೆ ವಿನಾ ಪುತ್ತೂರಿನಿಂದ ನಾನು ಹೋಗುತ್ತೇನೆ ಎಂದು ನನ್ನ ಬಳಿ ಯಾರೇ ಬಂದರೂ ಅವರಿಗೆ ಪತ್ರ ಕೊಡುವುದೇ ಇಲ್ಲ ಎಂದು ಶಾಸಕರು ಖಡಕ್ ಆಗಿ ತಿಳಿಸಿದ್ದಾರೆ. ಇಲ್ಲಿ ಅಧಿಕಾರಿಗಳ ಕೊರತೆ ಇದೆ ಅದನ್ನು ನೀಗಿಸುವ ಕೆಲಸವನ್ನು ಮಾಡಲಿದ್ದೇನೆ. ಅಧಿಕಾರಿಗಳಿದ್ದರೆ ಮಾತ್ರ ಜನರ ಕೆಲಸ ಆಗಲು ಸಾಧ್ಯ ಎಂದು ಹೇಳಿದರು.

ಒಗ್ಗಟ್ಟಿನಿಂದ ಕೆಲಸ ಮಾಡೋಣ: ಎಂ.ಬಿ
ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ ಕಾರಣ ಪುತ್ತೂರಿನಲ್ಲಿ ಕಾಂಗ್ರೆಸ್ ಗೆದ್ದಿದೆ, ಈ ಒಗ್ಗಟ್ಟನ್ನು ಮುಂದುವರೆಸಬೆಕು. ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಯಾಗಿಯೇ ಸಾಗೋಣ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹೇಳಿದರು. ಬಿಜೆಪಿ ಶಾಸಕರು ಕಮಿಷನ್ ದಂಧೆಯನ್ನು ಮಾಡಿದ್ದಾರೆ ವಿನಾ ಜನರ ಕೆಲಸಗಳನ್ನು ಮಾಡಿಲ್ಲ. ಶಾಸಕ ಅಶೋಕ್ ರೈಯವರು ಎಂದಿಗೂ ಕಾರ್ಯಕರ್ತರ ಪರವಾಗಿಯೇ ಇರುತ್ತಾರೆ ಇದರಲ್ಲಿ ಯಾವುದೇ ಅನುಮಾನ ಬೇಡ. ಚುನಾವಣೆಯ ಸಂದರ್ಭದಲ್ಲಿ ನಾವು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಬೇಕಿದೆ, ಭ್ರಷ್ಟಾಚಾರ ರಹಿತ ಪುತ್ತೂರಾಗಿ ಪರಿವರ್ತನೆಯಾಗಲಿದೆ. ಶಾಸಕರ ಭ್ರಷ್ಟಾಚಾರ ವಿರೋಧಿ ಧೋರಣೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿದರು.

25 ವರ್ಷದ ಟಾರ್ಗೆಟ್ ಇಟ್ಟುಕೊಳ್ಳಿ: ಶಕುಂತಳಾ
ಮುಂದಿನ 25 ವರ್ಷ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿರಬೇಕಾದರೆ ಈಗಲೇ ಕಾರ್ಯಪೃವೃತ್ತರಾಗಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಪಕ್ಷದ ನಾಯಕರನ್ನು ಹಿಯಾಳಿಸುವ ಕೆಲಸವನ್ನು ಯಾರೂ ಮಾಡಬೇಡಿ ಇದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಸಾಮಾಜಿಕ ಜಾಲತಾಣವನ್ನು ಪಕ್ಷದ ಅಭಿವೃದ್ದಿಗೆ ಬಳಕೆ ಮಾಡಿಕೊಳ್ಳಿ. ನನ್ನ ವಿರುದ್ದವೂ ಕಳೆದ ಬಾರಿ ಪಿತೂರಿ ನಡೆದಿತ್ತು, ನಾನು ಮುಸ್ಲಿಂ ವಿರೋಧಿ ಎಂಬ ಪಟ್ಟ ಕಟ್ಟಲಾಗಿತ್ತು, ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಹೇಳಿದರು. ಪುತ್ತೂರು ಶಾಸಕರು ಉತ್ತಮ ಅಭಿವೃದ್ದಿ ಕೆಲಸಗಳ ಆಲೋಚನೆಯೊಂದಿಗೆ ಕಾರ್ಯಪೃವೃತ್ತರಾಗಿದ್ದು, ಅವರು ಅದರಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಹೇಳಿದರು.

ಅರ್ಹತೆ ಮೇಲೆ ಅವಕಾಶ ಸಿಕ್ಕಿದೆ: ಅಮಲ
ಅಶೋಕ್ ರೈಯವರಿಗೆ ಅದೃಷ್ಟದ ಮೇಲೆ ಚುನಾವಣೆಯಲ್ಲಿ ಸ್ಪರ್ದೆ ಮಾಡಲು ಅವಕಾಶ ಸಿಕ್ಕಿದ್ದಲ್ಲ ಅರ್ಹತೆ ಮೇಲೆ ಸಿಕ್ಕಿದೆ ಎಂದು ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಹೇಳಿದರು. ಓರ್ವ ವಿದ್ಯಾವಂತ ಮತ್ತು ಎಲ್ಲಿ ಹೋದರೂ ಮಾತನಾಡುವ, ಜನರ ಪರವಾಗಿ ವಾದ ಮಾಡುವ ಶಾಸಕರನ್ನು ಪಡೆದ ನಾವು ಪುಣ್ಯವಂತರಾಗಿದ್ದೇವೆ. ಪುತ್ತೂರಿನಲ್ಲಿ ಇವರೇ 25 ವರ್ಷಗಳ ಕಾಲ ಶಾಸಕರಾದರೆ ಪುತ್ತೂರು ಎಂದೆಂದೂ ಕಾಣದಂತ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕಾರ್ಯಕರ್ತರು ಒಟ್ಟಾಗಿ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುವವರಾಗಬೇಕು ಎಂದು ಹೇಳಿದರು.

ನಮ್ಮ ಆಸೆ ಈಡೇರಿದೆ: ದುರ್ಗಾಪ್ರಸಾದ್
ಕಾಂಗ್ರೆಸ್ ಮುಖಂಡ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಬರಬೇಕು ಎಂಬುದು ನಮ್ಮ ಆಸೆಯಾಗಿತ್ತು ಅದು ಈಡೇರಿದೆ, ರಾಜ್ಯದಲ್ಲೂ ಕಾಂಗ್ರೆಸ್ ಭರ್ಜರಿಯಾಗಿ ಸೀಟು ಪಡೆದುಕೊಂಡಿದೆ. ನಾವು ಗ್ರಹಿಸಿದ್ದೆಲ್ಲವೂ ಮುಂದೆ ಆಗಲಿದೆ. ರಾಜ್ಯದಲ್ಲಿ ಎಲ್ಲರಿಗೂ ನ್ಯಾಯ ನೀಡುವ ಸರಕಾರ ಬಂದಿರುವುದು ಕನ್ನಡಿಗರ ಪುಣ್ಯವಾಗಿದೆ. ಪುತ್ತೂರು ಶಾಸಕರು ಮುಂದೆ ಪುತ್ತೂರನ್ನು ಬದಲಾಯಿಸಲಿದ್ದಾರೆ ಎಂದು ಹೇಳಿದರು.

ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.
ವೇದಿಕೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷೆ ಸುಂದರಿ, ಸದಸ್ಯರುಗಳಾದ ಚಿತ್ರಾ ಬಿ ಸಿ, ಶಾರದಾ, ಶೀನಪ್ಪ ನಾಯ್ಕ, ಅಶ್ರಫ್ ಉಜಿರೋಡಿ, ವಿನೋಧ್ ಶೆಟ್ಟಿ ಮುಡಾಲ, ವಲಯ ಕಾಂಗ್ರೆಸ್ ಉಪಾಧ್ಯಕ್ಷ ಮಹಮ್ಮದ್ ಬೊಳ್ಳಾಡಿ, ನಿವೃತ್ತ ಉಗ್ರಾಣಿ ಮಹಮ್ಮದ್ ಕಡ್ತಿಮಾರ್, ಒಳಮೊಗ್ರು ಗ್ರಾಪಂ ಮಾಜಿ ಉಪಾಧ್ಯಕ್ಷ ಯೂಸುಫ್ ಮೈದಾನಿಮೂಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿಯವರನ್ನು ಶಾಸಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಬ್ಲಾಕ್ ಉಪಾಧ್ಯಕ್ಷ ಶಶಿಕಿರಣ್ ರೈ ನೂಜಿಬೈಲು ಸ್ವಾಗತಿಸಿದರು. ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇರು ವಂದಿಸಿದರು. ಸಂತೋಷ್ ಭಂಡಾರಿ ಚಿಲ್ಮೆತ್ತಾರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here