ಪುತ್ತೂರು: ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಮರು ನೇಮಕಗೊಳಿಸಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ.
ಹಿರಿಯ ವಕೀಲ ತುಷಾರ್ ಮೆಹ್ತಾ ಅವರನ್ನು ಮತ್ತೆ ಮೂರು ವರ್ಷಗಳ ಅವಧಿಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ಮರು ನೇಮಕ ಮಾಡಲಾಗಿದೆ. ಜೊತೆಗೆ ಕೆ.ಎಂ.ನಟರಾಜ್ ಸಹಿತ ಆರು ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಳನ್ನೂ ಮೂರು ವರ್ಷಗಳ ಅವಧಿಗೆ ಮರು ನೇಮಕ ಮಾಡಲಾಗಿದೆ. ವಿಕ್ರಮಜಿತ್ ಬ್ಯಾನರ್ಜಿ, ಬಲ್ಬೀರ್ ಸಿಂಗ್, ಎಸ್.ವಿ.ರಾಜು, ಎನ್.ವೆಂಕಟರಾಮನ್ ಮತ್ತು ಐಶ್ವರ್ಯ ಭಾಟಿ ಅವರು ಸುಪ್ರೀಂ ಕೋರ್ಟ್‌ಗೆ ಮರು ನೇಮಕಗೊಂಡಿರುವ ಇತರ ಐದು ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಳಾಗಿದ್ದಾರೆ.
ಈಶ್ವರಮಂಗಲ ಕೊನೆತೋಟ ನಿವಾಸಿ ಜಿ.ಕೆ.ಮಹಾಬಲೇಶ್ವರ ಭಟ್ ಅವರ ಮಗನಾಗಿರುವ ಕೆ.ಎಂ.ನಟರಾಜ್ ಅವರು ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲರಾಗಿ, ಕರ್ನಾಟಕ ಸರಕಾರದ ಎಡಿಷನಲ್ ಅಡ್ವೊಕೇಟ್ ಜನರಲ್ ಆಗಿ, ಅಡ್ವೊಕೇಟ್ ಜನರಲ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಸುಪ್ರೀಂ ಕೋರ್ಟ್‌ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಹಲವಾರು ಪ್ರಮುಖ ಪ್ರಕರಣಗಳಲ್ಲಿ ಕೇಂದ್ರ ಸರಕಾರದ ಪರವಾಗಿ ಸಮರ್ಥವಾದ ಮಂಡಿಸಿ ಗಮನ ಸೆಳೆದಿದ್ದರು. ಇದೀಗ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಮತ್ತೆ ಮೂರು ವರ್ಷಗಳ ಅವಧಿಗೆ ಮರು ನೇಮಕಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.