`ಲಂಚ ಪಡೆದವರೊಂದಿಗೆ ಲಂಚ ನೀಡುವವರನ್ನೂ ಕ್ರಮಕ್ಕೆ ಗುರಿಪಡಿಸುವ ಮೂಲಕ ಭ್ರಷ್ಟಾಚಾರದ ಪಿಡುಗನ್ನು ಮೊಳಕೆಯಲ್ಲಿಯೇ ಕಿತ್ತೊಗೆಯುವಂತಾಗಬೇಕು’-ಮಾಡಾಳ್ ಪ್ರಕರಣದಲ್ಲಿ ಲಂಚ ಕೊಟ್ಟವರ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ

0

ಬೆಂಗಳೂರು:ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಲಂಚ ನೀಡಿದವರ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ನಿರಾಕರಿಸಿರುವ ಹೈಕೋರ್ಟ್, ಲಂಚ ಪಡೆದವರೊಂದಿಗೆ ಲಂಚ ನೀಡುವವರನ್ನೂ ಕ್ರಮಕ್ಕೆ ಗುರಿಪಡಿಸುವ ಮೂಲಕ ಭ್ರಷ್ಟಾಚಾರದ ಪಿಡುಗನ್ನು ಮೊಳಕೆಯಲ್ಲಿಯೇ ಕಿತ್ತೊಗೆಯುವಂತಾಗಬೇಕು’ ಎಂದು ಅಭಿಪ್ರಾಯ ಪಟ್ಟಿದೆ. ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ವಿರುದ್ಧದ ಟೆಂಡರ್ ಹಗರಣದಲ್ಲಿ ಲಂಚ ನೀಡಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದು ಕೋರಿ ಕರ್ನಾಟಕ ಆರೋಮಾಸ್ ಸಂಸ್ಥೆ ಮಾಲೀಕರು ಮತ್ತು ಇಬ್ಬರು ನೌಕರರು ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿದ್ದರು.ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಅಭಿಪ್ರಾಯ ಪಟ್ಟು ಅರ್ಜಿ ವಜಾಗೊಳಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆ-2018ರಲ್ಲಿನ ತಿದ್ದುಪಡಿ ಪ್ರಕಾರ ಲಂಚ ಪಡೆದವರು ಮತ್ತು ಲಂಚ ನೀಡಿದವರು ಒಂದೇ ರೀತಿಯ ತನಿಖೆಗೆ ಒಳಪಡಬೇಕು ಎಂದು ಹೇಳಿದೆ.ಅಲ್ಲದೇ, ಈ ಪ್ರಕರಣದಲ್ಲಿ ಇಬ್ಬರು ಅರ್ಜಿದಾರರು 45 ಲಕ್ಷ ರೂ.ಗಳ ಹಣದ ಬ್ಯಾಗ್‌ಗಳನ್ನು ಸಾಗಿಸುತ್ತಿದ್ದರು.ಜೊತೆಗೆ, ಮೊದಲನೇ ಆರೋಪಿ ಕಚೇರಿಯಲ್ಲಿ ಕುಳಿತಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.ಅವರು ಏಕೆ ಅಲ್ಲಿದ್ದರು ಮತ್ತು ಅಷ್ಟು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂದಿದೆ ಎಂಬುದು ಪತ್ತೆ ಹಚ್ಚಬೇಕಾದರೆ ವಿಚಾರಣೆ ನಡೆಯಬೇಕಿದೆ ಎಂದು ಪೀಠ ತಿಳಿಸಿದೆ. ಹಾಗೇ ಅಮೆರಿಕದ ತತ್ವಜ್ಞಾನಿ ಐನ್ ರಾಂಡ ಅವರ ಪದಗಳಾದಕಾನೂನು ಭ್ರಷ್ಟರನ್ನು ರಕ್ಷಿಸುವುದಿಲ್ಲ. ಕಾನೂನು ಭ್ರಷ್ಟರನ್ನು ರಕ್ಷಿಸಿದಲ್ಲಿ ದೇಶ ಅವನತಿಯತ್ತ ಸಾಗಲಿದೆ’ ಎಂಬ ಸಾಲುಗಳನ್ನು ಉಲ್ಲೇಖಿಸಿ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.


ಏನಿದು ಪ್ರಕರಣ? :
ಕರ್ನಾಟಕ ಆರೋಮಾಸ್ ಸಂಸ್ಥೆಯ ಮಾಲೀಕರಾದ ಕೈಲಾಶ್ ಎಸ್ ರಾಜ್, ವಿನಯ್ ಎಸ್ ರಾಜ್ ಮತ್ತು ಚೇತನ್ ಮಾರ್ಲೇಚಾ ಹಾಗೂ ಸಿಬ್ಬಂದಿಯಾದ ಆಲ್ಬರ್ಟ್ ನಿಕಲೋಸ್ ಮತ್ತು ಗಂಗಾಧರ್ ಅವರು, ಕೆಎಸ್‌ಡಿಎಲ್‌ಗೆ ರಾಸಾಯನಿಕ ಪೂರೈಕೆ ಮಾಡುವ ಕುರಿತಂತೆ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಾಡಾಳ್ ವಿರುಪಾಕ್ಷಪ್ಪ ಅವರ ಮಗ ಜಲ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ಮಾಡಾಳ್ ಪ್ರಶಾಂತ್ ಅವರಿಗೆ ಲಂಚ ನೀಡಲು ಮುಂದಾಗಿದ್ದರು.ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದರು.ಈ ವೇಳೆ ಅರ್ಜಿದಾರರಾದ ಆಲ್ಬರ್ಟ್ ನಿಕಲೋಸ್ ಮತ್ತು ಗಂಗಾಧರ್ ಹಣ ಸಾಗಿಸುತ್ತಿದ್ದರು ಎಂದು ಲೊಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.

LEAVE A REPLY

Please enter your comment!
Please enter your name here