ಉಪ್ಪಳಿಗೆ ಪ್ರೌಢಶಾಲಾ ನಿವೃತ್ತ ಮುಖ್ಯಗುರು ನಾರಾಯಣರಿಗೆ ಅಭಿನಂದನೆ

0

ಕೊಠಡಿ, ಸೆಲ್ಕೋ ಸೋಲಾರ್ ಕ್ಲಾಸ್ ಉದ್ಘಾಟನೆ, ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಸನ್ಮಾನ

ಶಾಲೆಗಳಲ್ಲಿ ಭಾಷಾವಾರು ಶಿಕ್ಷಕರು ಅವಶ್ಯಕ-ಅಶೋಕ್ ಕುಮಾರ್ ರೈ
ಉಪ್ಪಳಿಗೆ ಪ್ರೌಢಶಾಲೆಗೆ ಅತೀ ಹೆಚ್ಚು ಅನುದಾನ-ಮಠಂದೂರು
ಶಿಕ್ಷಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ
ಪರಿಹಾರಕ್ಕೆ ಪ್ರಯತ್ನ-ಎಸ್.ಎಲ್ ಬೋಜೇ ಗೌಡ
ನಾರಾಯಣರವರು ವ್ಯಕ್ತಿಯಲ್ಲ ಶಕ್ತಿ-ಶಶಿಕುಮಾರ್ ರೈ
ಶಿಕ್ಷಣ ಇಲಾಖೆಯ ಬಹುದೊಡ್ಡ ಆಸ್ತಿಯಾಗಿದ್ದರು-ಲೋಕೇಶ್
ಎಲ್ಲರ ನೆನಪಲ್ಲಿ ಉಳಿಯುವ ವ್ಯಕ್ತಿತ್ವದವರು-ಶಕುಂತಳಾ ಟಿ.ಶೆಟ್ಟಿ
ನಿವೃತ್ತಿಯಲ್ಲಿಯೂ ಇಲಾಖೆಗೆ ಸೇವೆ ದೊರೆಯಲಿ-ಶಶಿಧರ್ ಜಿ.ಎಸ್
ಪ್ರತ್ಯಕ್ಷ ನಾರಾಯಣರಂತಿದ್ದರು-ಚಿದಾನಂದ ಬೈಲಾಡಿ
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖಪಾತ್ರ- ಪವಿತ್ರ
ಜನಪ್ರತಿನಿಧಿ, ದಾನಿಗಳು, ಊರವರ ಸಹಕಾರದಲ್ಲಿ ಅಭಿವೃದ್ಧಿ-ನಾರಾಯಣ ಕೆ

ಪುತ್ತೂರು: ಇರ್ದೆ ಉಪ್ಪಳಿಗೆ ಪ್ರೌಢಶಾಲಾ ಮುಖ್ಯಗುರುಗಳಾಗಿದ್ದು ನಿವೃತ್ತಿ ಹೊಂದುತ್ತಿರುವ ನಾರಾಯಣ ಕೆ.ರವರಿಗೆ ಅಭಿನಂದನೆ, ವಿವೇಕ ಶಾಲಾ ಯೋಜನೆಯ ನೂತನ ಕೊಠಡಿ ಲೋಕಾರ್ಪಣೆ, ಸೆಲ್ಕೋ ಸೋಲಾರ್ ಕ್ಲಾಸ್ ಉದ್ಘಾಟನೆ ಹಾಗೂ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಗಳು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು, ಶ್ರೀನಾರಾಯಣ ಸರ್ ಅಭಿನಂದನಾ ಸಮಿತಿ’, ಹಳೆ ವಿದ್ಯಾರ್ಥಿ ಸಂಘ, ಶ್ರೀ ವಿಷ್ಣು ಯುವಕ ಮಂಡಲ ಹಾಗೂ ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಜೂ.೩೦ರಂದು ಶಾಲಾಉತ್ತುಂಗ’ ಸಭಾಂಗಣದಲ್ಲಿ ನಡೆಯಿತು.


ಶಾಲೆಗಳಲ್ಲಿ ಭಾಷಾವಾರು ಶಿಕ್ಷಕರು ಅವಶ್ಯಕ-ಅಶೋಕ್ ಕುಮಾರ್ ರೈ:
ನಿವೃತ್ತರನ್ನು ಅಭಿನಂದಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರು ಮಾತ್ರವಲ್ಲ. ಪೋಷಕರ ಪ್ರೋತ್ಸಾಹ ಬಹುಮುಖ್ಯ. ಇಂದು ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಕಡಿಮೆಯಿಲ್ಲ.ಸರಕಾರಿ ಶಾಲೆಗಳಲ್ಲಿಯೂ ಪ್ರತಿ ವಿಷಯವಾರು ಶಿಕ್ಷಕರಿದ್ದಾರೆ.ಮೂಲಭೂತ ಸೌಲಭ್ಯಗಳೂ ಇದೆ.ಶಾಲೆಗಳಲ್ಲಿ ವಿಷಯವಾರು ಶಿಕ್ಷಕರೇ ಪಾಠ ಮಾಡುವಂತಾಗಬೇಕು.ಈ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರ ಗಮನಕ್ಕೆ ತರಲಾಗಿದ್ದು ಶಿಕ್ಷಕರಿಗೆ ತರಬೇತಿ ನೀಡುವುದಾಗಿ ಸಚಿವರು ತಿಳಿಸಿದ್ದಾರೆ ಎಂದರು.ಮಕ್ಕಳು ಓದಬೇಕು.ಉದ್ಯೋಗ ಕೊಡುವ ಅಧಿಕಾರ ನಮಗಿಲ್ಲ.ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು.ಅಂಕ ಗಳಿಸಿದವರಿಗೆ ನೀಟ್, ಸಿಇಟಿ ಪರೀಕ್ಷೆಗಳ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದ ಶಾಸಕರು, ಒಬ್ಬ ಅಧ್ಯಾಪಕ ಉತ್ತಮವಾಗಿದ್ದರೆ ಸಮಾಜ ಯಾವ ರೀತಿ ಗೌರವ ಕೊಡುತ್ತದೆ ಎಂಬುದಕ್ಕೆ ನಾರಾಯಣರವರ ಬೀಳ್ಕೊಡುಗೆಯೇ ಸಾಕ್ಷಿ.ಇಂತಹ ಶಿಕ್ಷಕರಿದ್ದ ಶಾಲೆಗಳ ಅಭಿವೃದ್ಧಿಯೂ ಸಾಧ್ಯ ಎಂದರಲ್ಲದೆ, ನಿವೃತ್ತಿಯ ಬಳಿಕ ಕನಿಷ್ಟ ನಾಲ್ಕು ಮಕ್ಕಳಿಗಾದರೂ ಶಿಕ್ಷಣ ನೀಡವಂತಾಗಬೇಕು.ನಿಮ್ಮ ಪ್ರೇರಣೆಯಲ್ಲಿ ಇನ್ನಷ್ಟು ಶಿಕ್ಷಕರು ಮೂಡಿಬರಲಿ ಎಂದು ಆಶಿಸಿದರು.ಇರ್ದೆ, ಬೆಟ್ಟಂಪಾಡಿ, ನಿಡ್ಪಳ್ಳಿಯನ್ನು ನಾನು ನನ್ನ ಊರಿಗಿಂತ ಹೆಚ್ಚು ಪ್ರೀತಿಸುತ್ತಿದ್ದು ಆದ್ಯತೆಯಲ್ಲಿ ಶಾಲೆಯ ಅಭಿವೃದ್ಧಿಗೆ ಅನುದಾನ ಒದಗಿಸುವುದಾಗಿ ಶಾಸಕರು ಭರವಸೆ ನೀಡಿದರು.


ಉಪ್ಪಳಿಗೆ ಪ್ರೌಢಶಾಲೆಗೆ ಅತೀ ಹೆಚ್ಚು ಅನುದಾನ-ಸಂಜೀವ ಮಠಂದೂರು:
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಉಪ್ಪಳಿಗೆ ಪ್ರೌಢಶಾಲೆಯು ನನ್ನ ಅಚ್ಚು ಮೆಚ್ಚಿನ ಶಾಲೆ.ನಾರಾಯಣರ ಮೇಲೆ ಅಪಾರ ಗೌರವವಿದೆ.ಇಲ್ಲಿ ರೋಲ್ ಮೋಡೆಲ್ ಶಿಕ್ಷಕರಿರುವಾಗ ವಿದ್ಯಾರ್ಥಿಗಳೂ ರೋಲ್ ಮಾಡೆಲ್ ಆಗಬೇಕು ಎಂದು ಅತೀ ಹೆಚ್ಚು ಅನುದಾನ ಒದಗಿಸಲಾಗಿದೆ.ಅಲ್ಲದೆ ಶಾಲೆಗೆ ಊರವರ ಸಹಕಾರವೂ ದೊರೆಯುತ್ತಿರುವುದರಿಂದ ಹೆಚ್ಚಿನ ಅನುದಾನ ನೀಡಲಾಗಿದೆ.ಪ್ರತಿ ವರ್ಷ ಅನುದಾನ ನೀಡಿದ್ದು ವಿವೇಕಾ ಶಾಲಾ ಯೋಜನೆಯಲ್ಲಿ ನೂತನ ಕಟ್ಟಡ ಹಾಗೂ ಎಲ್ಲಾ ತರಗತಿಗಳಿಗೂ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದು ಹೇಳಿದರು.ನಿವೃತ್ತಿ ಹೊಂದುತ್ತಿರುವ ನಾರಾಯಣರವರು ಗುರು ಮಾತ್ರವಲ್ಲ. ಅಭಿವೃದ್ಧಿಯ ಹರಿಕಾರ.ಶಿಕ್ಷಣ ಕ್ಷೇತ್ರದಲ್ಲಿ ಅದ್ಬುತ ಸಾಧಕನಾಗಿರುವ ನಾರಾಯಣರವರ ನಿವೃತ್ತಿಯಿಂದ ಶಿಕ್ಷಣ ಇಲಾಖೆಯ ಉತ್ತಮ ಕೊಂಡಿಯೊಂದು ಕಳಚಿದೆ.ಅವರು ಆದರ್ಶ ಶಿಕ್ಷಕರಾಗಿ ಜನರ ಪ್ರೀತಿ,ವಿಸ್ವಾಸ ಗಳಿಸಿ ಮಾದರಿಯಾಗಿದ್ದಾರೆ.ಹೀಗಾಗಿ ಊರಿನ ಜನರೆಲ್ಲರೂ ಒಟ್ಟು ಸೇರಿ ಗೌರವ ಸಲ್ಲಿಸುವ ಕಾರ್ಯವಾಗುತ್ತಿದೆ.ಅವರ ನಿವೃತ್ತಿಯಿಂದ ಶೂನ್ಯಗೊಳ್ಳುವ ಸ್ಥಾನವನ್ನು ಉಳಿದ ಶಿಕ್ಷಕರಿಂದ ಭರ್ತಿ ಮಾಡುವ ಕೆಲಸವಾಗಬೇಕಿದೆ ಎಂದರು.


ಶಿಕ್ಷಕರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಪರಿಹಾರಕ್ಕೆ ಪ್ರಯತ್ನ-ಎಸ್.ಎಲ್ ಬೋಜೇ ಗೌಡ:
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇ ಗೌಡ ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಉಳ್ಳವರ ಪಾಲಾಗುತ್ತಿರುವುದು ಸರಿಯಲ್ಲ.ಅದು ಸಂವಿಧಾನ ಬದ್ದವಾಗಿ ಎಲ್ಲರೂ ಪಡೆಯುವಂತಾಗಬೇಕು.ಪಠ್ಯ ಪುಸ್ತಕದ ರಚನೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಸಲ್ಲದು.ನಾರಾಯಣರಂತಹ ಹಿರಿಯ ಶಿಕ್ಷಕರು, ನಿವೃತ್ತ ಶಿಕ್ಷಕರು, ವಿದ್ವಾಂಸರಿಂದ ಪಠ್ಯ ಪುಸ್ತಕಗಳು ರಚನೆಯಾದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯ. ಇದರಿಂದಾಗಿ ಮಕ್ಕಳ ಭವಿಷ್ಯ ಉಜ್ವಲವಾಗಿ ಹೊಸ ನಾಡು ಕಟ್ಟಲು ಸಾಧ್ಯವಿದ್ದು ಇದರ ಕುರಿತು ವಿಧಾನ ಸೌಧದಲ್ಲಿ ಪ್ರಸ್ತಾಪಿಸಲಾಗುವುದು.ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ಅವಶ್ಯಕತೆಯಿದೆ.ಶಿಕ್ಷಕರು ಎಲ್ಲ ಸಂಕಷ್ಟಗಳನ್ನು ನುಂಗಿ ಶಿಕ್ಷಣ ನೀಡುತ್ತಿದ್ದಾರೆ.ಶಿಕ್ಷಕರ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕೆ ಪ್ರಯತ್ನಿ ಸಲಾಗುವುದು.ಶಿಕ್ಷಕರ ಸಮಸ್ಯೆ ಬಗ್ಗೆ ವಿಧಾನ ಸೌಧದ ಒಳಗೂ, ಹೊರಗೂ ಮಾತನಾಡುವುದಾಗಿ ತಿಳಿಸಿದರು.ಶಾಲೆಗೆ ನಾರಾಯಣರವರ ಕೊಡುಗೆ, ಅನನ್ಯ ಸೇವೆ, ಅವರಲ್ಲಿರುವ ಮಾನವೀಯತೆಯಿಂದಾಗಿ ಇಷ್ಟೊಂದು ಜನ ಇಲ್ಲಿ ಸೇರಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ನಾರಾಯಣರವರು ವ್ಯಕ್ತಿಯಲ್ಲ ಶಕ್ತಿ-ಶಶಿಕುಮಾರ್ ರೈ:
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸರಕಾರಿ ವೃತ್ತಿಯಲ್ಲಿ ನಿವೃತ್ತಿ ಅನಿವಾರ್ಯ.ಮುಖ್ಯಗುರು ನಾರಾಯಣರವರು ಕೇವಲ ವ್ಯಕ್ತಿಯಲ್ಲ ಒಂದು ಶಕ್ತಿಯಾಗಿದ್ದರು.ಮುಖ್ಯಗುರುಗಳಾಗಿ ಉಪ್ಪಳಿಗೆ ಪ್ರೌಢಶಾಲೆಯಲ್ಲಿ ಒಂಬತ್ತು ವರ್ಷ ಕಾಲ ಅಭಿವೃದ್ಧಿ ಪಥದಲ್ಲಿ ಸಾಗುವಲ್ಲಿ ಪ್ರಮುಖವಾಗಿದ್ದರು.ದಾನಿಗಳು, ಊರವರ ಸಹಕಾರದೊಂದಿಗೆ ಶಾಲೆ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದರು..


ಶಿಕ್ಷಣ ಇಲಾಖೆಯ ಬಹುದೊಡ್ಡ ಆಸ್ತಿಯಾಗಿದ್ದರು-ಲೋಕೇಶ್:
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ, ನಾರಾಯಣರವರು ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದವರು.ಅವರ ನಿವೃತ್ತಿಯ ಸಂದರ್ಭದಲ್ಲಿ ಶೇ.೧೦೦ ಫಲಿತಾಂಶ ಲಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಶಿಕ್ಷಣ ಇಲಾಖೆಗೆ ಅವರು ಮಾಡಿರುವ ಅದ್ಭುತ ಸಾಧನೆಯನ್ನು ಇಲಾಖೆ ಗೌರವಿಸುತ್ತಿದೆ.ಅವರು ಶಿಕ್ಷಣ ಇಲಾಖೆಗೆ ಬಹುದೊಡ್ಡ ಆಸ್ತಿಯಾಗಿದ್ದರು.ಶೈಕ್ಷಣಿಕವಾಗಿ ಮುಂದುವರಿಯಲು ಶಿಕ್ಷಕರು ಮುಖ್ಯ.ಅಂಥವರಲ್ಲಿ ನಾರಾಯಣರವರು ಒಬ್ಬರಾಗಿದ್ದರು ಎಂದರು.


ಎಲ್ಲರ ನೆನಪಲ್ಲಿ ಉಳಿಯುವ ವ್ಯಕ್ತಿತ್ವದವರು-ಶಕುಂತಳಾ ಟಿ.ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಶಾಲೆಯ ಅಭಿವೃದ್ಧಿಯ ಜೊತೆಗೆ ಸತತವಾಗಿ ಎಂಟು ವರ್ಷಗಳಿಂದ ಶೇ.೧೦೦ ಫಲಿತಾಂಶ ದಾಖಲಿಸುತ್ತಿರುವ ಸಾಧನೆ ಅಭಿನಂದನೀಯ. ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ನಾರಾಯಣರವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಅವರನ್ನು ಪಳಗಿಸುವಲ್ಲಿ ಶ್ರಮವಹಿಸಿದವರು.ಅವರು ಎಲ್ಲರ ವ್ಯಕ್ತಿತ್ವದಲ್ಲಿ ಉಳಿದುಕೊಳ್ಳುವ ವ್ಯಕ್ತಿಯಾಗಿದ್ದಾರೆ.ಶಿಕ್ಷಕರಿಗೆ ಸಾರ್ವಜನಿಕವಾಗಿ ಅಭಿನಂದನೆ ನಡೆಯುತ್ತಿರುವುದು ಪ್ರಥಮವಾಗಿದೆ ಎಂದರು.


ನಿವೃತ್ತಿಯಲ್ಲಿಯೂ ಇಲಾಖೆಗೆ ಸೇವೆ ದೊರೆಯಲಿ-ಶಶಿಧರ್ ಜಿ.ಎಸ್:
ಈ ಹಿಂದೆ ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದು ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿರುವ ಶಶಿಧರ ಜಿ.ಎಸ್ ಮಾತನಾಡಿ, ತನ್ನ ಸಾಧನೆಯ ಮೂಲಕ ಅಧಿಕಾರಿಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂದು ನಾರಾಯಣರು ತೋರಿಸಿಕೊಟ್ಟಿದ್ದು ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದ್ದಾರೆ.ಅವರು ತಂಡವಾಗಿ ಕೆಲಸ ಮಾಡಿದ್ದಾರೆ.ನಿವೃತ್ತಿ ಬಳಿಕದ ಜೀವನದಲ್ಲಿಯೂ ಶಿಕ್ಷಣ ಇಲಾಖೆಗೆ ಅವರ ಸೇವೆ ದೊರೆಯಲಿ.ಮುಂದಿನ ಶಿಕ್ಷಕರು ಇಲ್ಲಿನ ಪರಂಪರೆ ಮುಂದುವರಿಸಲಿ.ಮಿಷನ್ 95+ ಈಡೇರಲಿ ಎಂದು ಹಾರೈಸಿದರು.


ಪ್ರತ್ಯಕ್ಷ ನಾರಾಯಣರಂತಿದ್ದರು-ಚಿದಾನಂದ ಬೈಲಾಡಿ:
ಅಭಿನಂದನಾ ಸಮಿತಿಯ ಸಂಚಾಲಕ ಚಿದಾನಂದ ಬೈಲಾಡಿ ಮಾತನಾಡಿ, ನಾರಾಯಣರು ಸುಳ್ಯದವರಾಗಿ ವಿವಿಧ ಕಡೆ ಕರ್ತವ್ಯ ನಿರ್ವಹಿಸಿ ಉಪ್ಪಳಿಗೆಯಲ್ಲಿ ನಿವೃತ್ತರಾಗುತ್ತಿರುವುದು ನಮ್ಮ ಸುಯೋಗ.ಅವರು ಪ್ರತ್ಯಕ್ಷ ನಾರಾಯಣರಂತೆ ಕೆಲಸ ಮಾಡಿದವರು. ವಿಷನ್ 95+ ಯೋಜನೆಯಲ್ಲಿಯೂ ಮುಂಚೂಣಿಯಲ್ಲಿದ್ದವರು.ವಿದ್ಯಾರ್ಥಿಗಳನ್ನು ಪಳಗಿಸಿ ನೂರು ಶೇಕಡಾ ಫಲಿತಾಂಶ ಗಳಿಸಿದವರು.ಪ್ರಾಮಾಣಿಕತೆ, ಸಮಾಜದೊಂದಿಗೆ ಉತ್ತಮ ಸಂಪರ್ಕದೊಂದಿಗೆ ಶಾಲಾ ಅಭಿವೃದ್ಧಿಗೆ ಶ್ರಮಿಸಿದವರು.ಪ್ರಶಸ್ತಿಯ ಜೊತೆಗೆ ತನಗೆ ದೊರೆತ ರೂ.೧ ಲಕ್ಷ ನಗದನ್ನು ಶಾಲಾ ಸಭಾಂಗಣಕ್ಕೆ ದೇಣಿಗೆ ನೀಡುವ ಮೂಲಕ ಮಾದರಿ ಶಿಕ್ಷಕರೆನಿಸಿಕೊಂಡಿದ್ದಾರೆ ಎಂದರು.


ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖಪಾತ್ರ- ಪವಿತ್ರ:
ಅಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಗ್ರಾ.ಪಂ ಅಧ್ಯಕ್ಷೆ ಪವಿತ್ರ ಡಿಯವರು ಮಾತನಾಡಿ, ಶಾಲೆಯ ಅಭಿವೃದ್ಧಿಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡಿ ಮಾದರಿ ಶಿಕ್ಷಕರಾಗಿದ್ದಾರೆ.ಶಾಲೆ ಹಾಗೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಪ್ರಮುಖರಾಗಿದ್ದ ಮುಖ್ಯಗುರು ನಾರಾಯಣರವರ ನಿವೃತ್ತಿ ಜೀವನವು ಉಜ್ವಲವಾಗಿರಲಿ ಎಂದು ಹಾರೈಸಿದರು.


ಜನಪ್ರತಿನಿಧಿ, ದಾನಿಗಳು, ಊರವರ ಸಹಕಾರದಲ್ಲಿ ಅಭಿವೃದ್ಧಿ-ನಾರಾಯಣ ಕೆ.:
ಅಭಿನಂದನೆ ಸ್ವೀಕರಿಸಿದ ನಿವೃತ್ತ ಮುಖ್ಯಗುರು ನಾರಾಯಣ ಕೆ.ರವರು ಮಾತನಾಡಿ, ನಿವೃತ್ತಿಗೊಳ್ಳುತ್ತಿರುವ ತನ್ನನ್ನು ಅಭಿನಂದಿಸಲು ಪ್ರತ್ಯೇಕ ಸಮಿತಿ ರಚಿಸಿಕೊಂಡು ಅಭಿನಂದಿಸಿದ ಉಪ್ಪಳಿಗೆ ಮಹಾಜನತೆಗೆ ನಾನು ಆಭಾರಿಯಾಗಿದ್ದೇನೆ.ಶಿಕ್ಷಣ ಇಲಾಖೆಯಲ್ಲಿ 37 ವರ್ಷಗಳ ಕರ್ತವ್ಯದಲ್ಲಿ ಸರಕಾರದ ನೀತಿ, ನಿಯಮಗಳಿಗೆ ಬದ್ದವಾಗಿ ಕರ್ತವ್ಯ ನಿರ್ವಹಿಸಿದ್ದೇನೆ.ಗುಣಾತ್ಮಕ ಶಿಕ್ಷಣದೊಂದಿಗೆ ಎ ಗ್ರೇಡ್ ಪಡೆದುಕೊಳ್ಳುವ ಮೂಲಕ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಿ ಮಕ್ಕಳ ದಾಖಲಾತಿ ಏರಿಕೆಗೆ ಪ್ರಯತ್ನಿಸಿzನೆ.ಪೋಷಕರ ಮಾನಸಿಕ ಸ್ಥೈರ್ಯದಿಂದ ಶೇ.100 ಫಲಿತಾಂಶ ಪಡೆಯವಲ್ಲಿ ಸಹಕಾರಿಯಾಗಿದೆ.ಉಪ್ಪಳಿಗೆ ಪ್ರೌಢ ಶಾಲೆಯು ಸತತ ಎಂಟು ವರ್ಷಗಳಲ್ಲಿ ಶೇ.100 ಫಲಿತಾಂಶ ಪಡೆಯುತ್ತಿದ್ದು ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿದೆ.ಜನಪ್ರತಿನಿಧಿಗಳು, ದಾನಿಗಳು, ಊರವರ ಸಹಕಾರದೊಂದಿಗೆ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳನ್ನು ಪೂರೈಸಲು ಸಹಕಾರಿಯಾಗಿದೆ ಎಂದು ಹೇಳಿ ತನ್ನ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.


ಸೆಲ್ಕೋ ಸೋಲಾರ್ ಸಂಸ್ಥೆಯ ಏರಿಯಾ ಮ್ಯಾನೇಜರ್ ಪ್ರಸಾದ್ ಮಾತನಾಡಿ, ಸೋಲಾರ್ ಸ್ಮಾರ್ಟ್ ತರಗತಿಯ ಬಗ್ಗೆ ಮಾಹಿತಿ ನೀಡಿದರು.ಬೆಟ್ಟಂಪಾಡಿ ಗ್ರಾ.ಪಂ ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಉಮಾವತಿ ಎಸ್ ಮಣಿಯಾಣಿ, ವಿದ್ಯಾ ಸುರೇಶ್, ಗೋಪಾಲ ಬೈಲಾಡಿ, ಎಂ.ಆರ್.ಪಿ.ಎಲ್‌ನ ಸೀತಾರಾಮ ರೈ ಕೈಕಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ಯಾಮಲ, ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್, ಅಮೃತಕಲಾ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ ಎಸ್.ಎ., ಕಡಬ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಶಾಂತಾರಾಮ ಓಡ್ಲ, ಕಾರ್ಯದರ್ಶಿ ದೇವಿಪ್ರಸಾದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ನವೀನ್ ಸ್ಟೀಫನ್ ವೇಗಸ್, ಅಭಿನಂದನಾ ಸಮಿತಿ ಉಪಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಭಿನಂದನೆಯ ಮಹಾಪೂರ: ಕಾರ್ಯಕ್ರಮದಲ್ಲಿ ನಾರಾಯಣ ಸರ್ ಅಭಿನಂದನಾ ಸಮಿತಿಯಿಂದ ನಾರಾಯಣರವರನ್ನು ಅದ್ದೂರಿಯಾಗಿ ಸನ್ಮಾನಿಸಿ, ಅವರಷ್ಟೇ ಎತ್ತರದ ಸನ್ಮಾನ ಪತ್ರ ನೀಡಿ ಗೌರವಿಸಿ, ಅಭಿನಂದಿಸಲಾಯಿತು. ನಂತರ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಉಪ್ಪಳಿಗೆ ಶ್ರೀ ವಿಷ್ಣು ಯುವಕ ಮಂಡಲ, ತಾಲೂಕು ಮುಖ್ಯ ಶಿಕ್ಷಕರ ಸಂಘ, ತಾಲೂಕು ಅಕ್ಷರ ದಾಸೋಹ, ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಎಸ್‌ಎಲ್ ಬೋಜೇ ಗೌಡ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.,ಗುತ್ತಿಗೆದಾರ ನವೀನ್ ತಲೆಪ್ಪಾಡಿ, ಪ್ರೌಢಶಾಲಾ ಸಹ ಶಿಕ್ಷಕರ ಜಿಲ್ಲಾ ಸಂಘ, ಹಿರಿಯ ವಿದ್ಯಾರ್ಥಿಗಳು ಸೇರಿದಂತೆ ಹಲವು ಮಂದಿ ನಾರಾಯಣರವರ ಹಿತೈಷಿ, ಅಭಿಮಾನಿಗಳು ಸನ್ಮಾನಿಸಿ, ಗೌರವಿಸಿದರು.


ಶೇ.100 ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ:
2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಬರಲು ಕಾರಣಕರ್ತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಪ್ರಥಮ ಸ್ಥಾನ ಪಡೆದ ಭವಿಷ್ಯ ಪಿ., ನಮಿತಾ ಎಂ., ಅಮೃತಾ ಎ.ಪಿ.ಯವರನ್ನು ಸನ್ಮಾನಿಸಲಾಯಿತು.ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ಕೃಷ್ಣಪ್ರಸಾದ್ ಆಳ್ವರಿಂದ ಚಿನ್ನದ ನಾಣ್ಯ:
ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗಳಿಗೆ ಶಾಲಾ ಮಾಜಿ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಆಳ್ವರು ಚಿನ್ನದ ನಾಣ್ಯ ನೀಡಿ ಗೌರವಿಸುತ್ತಿದ್ದು ಈ ವರ್ಷ ಪ್ರಥಮ ಸ್ಥಾನ ಪಡೆದ ಭವಿಷ್ಯರವರಿಗೆ ನೀಡಿ ಗೌರವಿಸಿದರು.


ಸನ್ಮಾನ:
ಶಾಲೆಯ ಅಭಿವೃದ್ಧಿಗೆ ಅನುದಾನ ಒದಗಿಸಿದ ಮಾಜಿ ಶಾಸಕ ಸಂಜೀವ ಮಠಂದೂರು, ವಿಧಾನ ಪರಿಷತ್ ಸದಸ್ಯ ಎಸ್‌ಎಲ್ ಬೋಜೆ ಗೌಡ, ನೂತನ ಶಾಸಕ ಅಶೋಕ್ ಕುಮಾರ್ ರೈಯವರನ್ನು ಸನ್ಮಾನಿಸಲಾಯಿತು. ಶಾಲೆಯೊಂದಿಗೆ ಉತ್ತಮ ಬಾಂಧವ್ಯ ಹಾಗೂ ಶಾಲೆಯ ಎಲ್ಲಾ ಕಾರ್ಯಗಳಲ್ಲಿ ಸಹಕರಿಸುತ್ತಿರುವ ಪುತ್ತು ಚೆಲ್ಯಡ್ಕರವರನ್ನು ನಿವೃತ್ತ ಮುಖ್ಯಗುರು ನಾರಾಯಣರವರು ಸನ್ಮಾನಿಸಿ ಗೌರವಿಸಿದರು.


ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಅಭಿನಂದನಾ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಸ್ವಾಗತಿಸಿದರು.ಶಿಕ್ಷಕರಾದ ವಿದ್ಯಾ ಎಸ್‌ಎಸ್‌ಎಲ್‌ಸಿ ಸಾಧಕರ ಪಟ್ಟಿ ಓದಿದರು.ಸವಿತಾ ಸನ್ಮಾನ ಪತ್ರ ವಾಚಿಸಿದರು. ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿ, ಪ್ರಭಾರ ಮುಖ್ಯಗುರು ರಾಮಚಂದ್ರ ವಂದಿಸಿದರು.ಅಭಿನಂದನಾ ಸಮಿತಿ ಉಪಾಧ್ಯಕ್ಷರಾದ ಮಂಜುನಾಥ ಎನ್.ಎಸ್., ಸುಶಾಂತ್ ಅಜ್ಜಿಕಲ್ಲು, ಜತೆಕಾರ್ಯದರ್ಶಿ ದಿನೇಶ್ ರೈ ಬಾಳೆಹಿತ್ಲು, ಕೋಶಾಧಿಕಾರಿ ತ್ಯಾಂಪಣ್ಣ ಶೆಟ್ಟಿ, ಸಮಿತಿ ಸದಸ್ಯರು ಹಾಗೂ ಶಿಕ್ಷಕರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಬೆಳಿಗ್ಗೆ ಉಪಹಾರ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.


ಸುದ್ದಿಯಲ್ಲಿ ನೇರಪ್ರಸಾರ
ಕಾರ್ಯಕ್ರಮ ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿತ್ತು.

ರೂ.5ಲಕ್ಷ ಅನುದಾನ ಘೋಷಣೆ
ಶಾಲೆಯಲ್ಲಿ ಶೌಚಾಲಯದ ಅವಶ್ಯಕತೆಯಿದ್ದು ಅನುದಾನ ನೀಡುವಂತೆ ಶಾಲೆಯ ವತಿಯಿಂದ ನೀಡಲಾದ ಮನವಿ ಸ್ವೀಕರಿಸಿದ ಎಂಎಲ್‌ಸಿ ಬೋಜೇ ಗೌಡ ಮಾತನಾಡಿ, ಶಾಲೆಗಳ ಶೌಚಾಲಯ, ಕಂಪೌಂಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಉಪ್ಪಳಿಗೆ ಪ್ರೌಢಶಾಲೆಗೆ ರೂ.5 ಲಕ್ಷ ಅನುದಾನ ನೀಡುವುದಾಗಿ ಘೋಷಣೆ ಮಾಡಿದರು.

ಮುಖ್ಯಗುರು ನಾರಾಯಣರಿಗೆ ಅಭಿನಂದನೆ ತೆರೆದ ವಾಹನದಲ್ಲಿ ಮೆರವಣಿಗೆ
ಕಾರ್ಯಕ್ರಮದ ಪ್ರಾರಂಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ನಾರಾಯಣರವರನ್ನು ಉಪ್ಪಳಿಗೆ ಜಂಕ್ಷನ್‌ನಲ್ಲಿ ಸ್ವಾಗತಿಸಿ, ಅಭಿನಂದನಾ ಸಮಿತಿ ಅಧ್ಯಕ್ಷ ಮನಮೋಹನ ರೈ ಚೆಲ್ಯಡ್ಕ ಹಾಗೂ ಪದಾಧಿಕಾರಿಗಳು ಹಾರಾರ್ಪಣೆ ಮಾಡಿ ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಶಾಲಾ ಆವರಣಕ್ಕೆ ಕರೆತರಲಾಯಿತು.ತೆರೆದ ವಾಹನದಿಂದ ಇಳಿದ ನಾರಾಯಣರವರಿಗೆ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. ಶಿಕ್ಷಕರು ಆರತಿ ಬೆಳಗಿ ಸ್ವಾಗತಿಸಿದರು

LEAVE A REPLY

Please enter your comment!
Please enter your name here