ಪುತ್ತೂರು: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬರುವುದಿಲ್ಲ. ತೋಟಗಾರಿಕ ಬೆಳೆಗಳ ಹವಾಮಾನ ಆಧಾರಿತ ವಿಮಾ ಯೋಜನೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬರುವಂತಹದ್ದು, ಈ ಯೋಜನೆಯಲ್ಲಿ ಅದನ್ನು ತೆಗೆಯಲಿಲ್ಲ. ಅದು ಈಗಲೂ ಇದೆ. ಅದನ್ನು ಮತ್ತೆ ಸೇರಿಸುವ ಪ್ರಶ್ನೆಯೇ ಇಲ್ಲ. ಹಾಗಾಗಿ ಶಾಸಕರು ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆದಾರಿತ ಬೆಳೆ ವಿಮಾ ಯೋಜನೆ ಯಾವುದೆಂದು ತಿಳಿಯದೆ ಗೊಂದಲಕಾರಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಇವತ್ತು ವಿಮಾ ಕಂಪೆನಿಗಳು ಟೆಂಡರ್ ಹಾಕದೇ ಸಮಸ್ಯೆ ಆಗಿದೆ ಹೊರತು ಬೇರೆಯಾವುದಲ್ಲ. ಆದರೆ ಗೊಂದಲಕಾರಿ ಹೇಳಿಕೆಗಳನ್ನು ಯಾವುದೇ ಜನಪ್ರತಿನಿಧಿಗಳು ಪತ್ರಿಕೆಯಲ್ಲಿ ಹೇಳಿ ರೈತರನ್ನು ಗೊಂದಲಕ್ಕೀಡು ಮಾಡಬಾರದು ಎಂದು ನಮ್ಮ ಮನವಿ. ಸರಕಾರಕ್ಕೆ ತಕ್ಷಣ ಜಿಲ್ಲಾಧಿಕಾರಿ ಕಳುಹಿಸಿದ ಟರ್ಮ್ ಶೀಟ್ ಅನ್ನು ಮಂಜೂರು ಮಾಡಿ ಮತ್ತೆ ಟೆಂಡರ್ ಕರೆಯಬೇಕು. ರೈತರಿಂದ ಪ್ರೀಮಿಯಂ ಕಟ್ಟಿಸಿಕೊಂಡು ಮತ್ತೆ ತೋಟಗಾರಿಕೆ ಬೆಳೆಗಳಿಗೆ ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವಂತೆ ಸಹಕಾರಿ ಪ್ರಕೋಷ್ಠ ಮತ್ತು ಬಿಜೆಪಿ ಒತ್ತಾಯ ಮಾಡುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಯುವರಾಜ್, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷರಾಗಿರುವ ಜಿಲ್ಲಾ ಸಹಕಾರಿ ಪ್ರಕೋಷ್ಠದ ಕೆ.ವಿ.ಪ್ರಸಾದ್, ಪಾಣಾಜೆ ಸಿಎ ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್ ಉಪಸ್ಥಿತರಿದ್ದರು.