ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆ ಸಮಾಜದ ದಾರಿ ತಪ್ಪಿಸುತ್ತಿದೆ, ಜನ ತಕ್ಕ ಉತ್ತರ ನೀಡುತ್ತಾರೆ
ಬೆಳ್ತಂಗಡಿ ತಾಲೂಕು ಪತ್ರಕರ್ತ ಸಂಘವು ಪ್ರಾಮಾಣಿಕ ಸೇವೆ ಮಾಡುತ್ತಿದೆ. ಈ ಪತ್ರಕರ್ತರ ಜೊತೆ ಯಾವತ್ತೂ ನಾನಿದ್ದೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ನಾನು ಜನಪ್ರತಿನಿಧಿಯಾಗಿ ಪತ್ರಕರ್ತರಿಗೆ ಯಾವತ್ತೂ ಗೌರವ ಕೊಟ್ಟಿದ್ದೇನೆ. ಪತ್ರಕರ್ತರ ಸಂಘದೊಂದಿಗೆ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದೇನೆ .ಯಾವತ್ತೂ ಯಾವ ಸಾರ್ವಜನಿಕ ಸಮಾರಂಭದಲ್ಲೂ ನಿಮ್ಮನ್ನು ದೂಷಣೆ ಮಾಡಿದ ವ್ಯಕ್ತಿ ನಾನಲ್ಲ. ವಿರೋಧ ವ್ಯಕ್ತ ಪಡಿಸಿದ ವ್ಯಕ್ತಿಯೂ ನಾನಲ್ಲ. ಯಾರಾದರೂ ದುರಹಂಕಾರದಿಂದ ಸಾರ್ವಜನಿಕವಾಗಿ ನಿಮ್ಮ ವಿರುದ್ದ ಮಾತನಾಡಿದರೆ ನಿಮ್ಮ ಪರವಾಗಿ ನಾನಿದ್ದೇನೆ. ಅಂತಹ ಅಹಂಕಾರದ ಮಾತುಗಳಿಗಾಗಿ ನೀವು ತಲೆಕಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ಪತ್ರಿಕೆಯನ್ನು ತನ್ನ ಭಾಷಣದಲ್ಲಿ ಟೀಕಿಸಿದ ಹರೀಶ್ ಪೂಂಜರವರು, ಅನೇಕ ಪತ್ರಿಕೆಗಳನ್ನು ನಾನು ಗಮನಿಸಿದ್ದೇನೆ. ಒಂದಷ್ಟು ವಿಮರ್ಶೆ ಅವಲೋಕನಗಳನ್ನು ನಾವು ಮಾಡಬೇಕಾಗಿದೆ. ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಯಾವುದೇ ವರದಿಗಳು ಸಮಾಜಕ್ಕೆ ಪೂರಕವಾಗಿ, ಸಮಾಜಕ್ಕೆ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿರಬೇಕು. ಸಮಾಜವನ್ನು ದಾರಿ ತಪ್ಪಿಸಬಾರದು. ಆ ರೀತಿ ಯಾವುದೇ ಪತ್ರಿಕೆಗಳು ವರದಿ ಮಾಡಬಾರದು.
ವಿಶೇಷವಾಗಿ ಸುದ್ದಿ ಬಿಡುಗಡೆ ಬೆಳ್ತಂಗಡಿ ತಾಲೂಕಿನದ್ದು. ಈ ಪತ್ರಿಕಾ ದಿನಾಚರಣೆ ಸಂದರ್ಭದಲ್ಲಿ ನಾನು ಹೇಳಲೇಬೇಕಾಗುತ್ತದೆ. ಸಮಾಜವನ್ನು ದಾರಿತಪ್ಪಿಸುವ ನಿಟ್ಟಿನಲ್ಲಿ ನೀವು ಮಾಡುವಂತಹ ಪ್ರಯತ್ನ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಜನ ಅದಕ್ಕೆ ತಕ್ಕ ಉತ್ತರ ಕೊಡುವಂತಹ ಕೆಲಸ ಮಾಡುತ್ತಾರೆ. ನಾನು ಸುದ್ದಿ ಬಿಡುಗಡೆಯ ಅನೇಕ ವರದಿಗಳನ್ನು ನೋಡಿದ್ದೇನೆ. ಭ್ರಷ್ಟಾಚಾರ ರಹಿತವಾಗಿರುವಂತಹ ಅಧಿಕಾರಿ ಅಂತ ಹೇಳಿ ಹೇಳುವಂತದ್ದನ್ನು ನೀವೇ ಬರಿಯೋದು. ಭ್ರಷ್ಟಾಚಾರಿಗಳಿಗೆ ಉತ್ತಮ ಅಧಿಕಾರಿ ಅಂತ ಪ್ರಶಸ್ತಿಯನ್ನು ಕೂಡಾ ನೀವೇ ಕೊಡೋದು. ಇದನ್ನು ಜನ ನೋಡಿದ್ದಾರೆ. ನಿಮ್ಮ ಪತ್ರಿಕೆಯ ವರದಿ ಏನು ಅಂತ ತಿಳಿದುಕೊಂಡಿದ್ದಾರೆ. ನಿಮ್ಮ ಈ ರೀತಿಯ ವರ್ತನೆಯನ್ನು ಸಹ ಸಮಾಜ ವಿರೋಧಿಸುತ್ತದೆ ಮತ್ತು ಸಮಾಜ ಅದಕ್ಕೆ ತಕ್ಕ ಉತ್ತರವನ್ನು ನೀಡುತ್ತದೆ. ಪತ್ರಿಕಾ ವ್ಯವಸ್ಥೆಯಲ್ಲಿ ಪತ್ರಿಕೋದ್ಯಮ ಇವತ್ತು ಜಗತ್ತಿನಲ್ಲಿ ಹೇಗೆ ನಡೆಯುತ್ತಿದೆಯೋ ಅದೇ ರೀತಿಯಲ್ಲಿ ನಡೆಸುವಂತಹ ಮನಸ್ಥಿತಿ ನಮ್ಮಲ್ಲೂ ಬೇಕು ಎಂದು ಹೇಳಿದರು.