ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಸಾಂತ್ಯಡ್ಕದ ಶ್ರೀಧರ ಎಂಬವರ ಎಂಟು ತಿಂಗಳ ಹಸುಳೆ ಮೃತಪಟ್ಟಿದ್ದು, ಮಗುವಿನ ತಾಯಿ ಪತಿಯ ವಿರುದ್ಧ ಹೇಳಿಕೆ ನೀಡಿದ್ದರಿಂದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಲು ಮಗುವಿನ ಮರಣೋತ್ತರ ಪರೀಕ್ಷೆಗಾಗಿ ಕಾಯುತ್ತಿರುವ ಘಟನೆ ನಡೆದಿದೆ.
ಶ್ರೀಧರರವರ ಮಗುವನ್ನು ಜ್ವರದ ಕಾರಣಕ್ಕಾಗಿ ಚಿಕಿತ್ಸೆಗಾಗಿ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಬಳಿಕ ಹೆಚ್ಷಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಜು.1ರಂದು ಮೃತಪಟ್ಟಿತ್ತು. ಬಳಿಕದ ಬೆಳವಣಿಗೆಯಲ್ಲಿ ಮಗುವಿನ ತಾಯಿ ಚಿತ್ರಾ ರವರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ತನ್ನ ಪತಿ ನನಗೆಂದು ಹೊಡೆದ ಏಟು ತಪ್ಪಿ ಮಗುವಿಗೆ ಬಿದ್ದಿದ್ದು, ಅದರಿಂದ ಮಗು ಮೃತಪಟ್ಟಿದೆ ಎಂದಿದ್ದಾರೆ. ಆ ಬಳಿಕ ಸಂಶಯಾಸ್ಪದ ಸಾವಿನ ಹಿನ್ನೆಲೆಯಲ್ಲಿ ಶ್ರೀಧರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಮಗುವಿನ ಮೃತದೇಹದ ಮರಣೋತ್ತರ ಪರೀಕ್ಷೆ ಜು.2ರಂದು ನಡೆದಿದ್ದು, ರಾತ್ರಿ ಮಗುವಿನ ಮೃತದೇಹವನ್ನು ಬಿಟ್ಟು ಕೊಡಲಾಗಿದೆ. ಅದರೆ ಮೃತದೇಹದ ಮರಣೋತ್ತರ ವರದಿ ಪೊಲೀಸರಿಗೆ ಇನ್ನಷ್ಟೇ ಸಿಗಬೇಕಿದ್ದು, ಅದರ ಬಳಿಕವೇ ಈ ಘಟನೆಯಲ್ಲಿ ನಿರ್ದಿಷ್ಟ ಪ್ರಕರಣ ದಾಖಲಾಗಲಿದೆ.