ಕಡಬ: ಪಶ್ಚಿಮ ಘಟ್ಟ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ವತಿಯಿಂದ ಆನೆ ಮತ್ತು ಮಾನವ ಸಂಘರ್ಷವನ್ನು ತಡೆಗಟ್ಟುವ ಮಹತ್ವದ ಅಭಿಯಾನವಾದ ವನ್ಯಜೀವಿ ಆಹಾರ ಗಿಡಗಳ ನೆಡುವಿಕೆ ಅಭಿಯಾನಕ್ಕೆ ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಪಶ್ಚಿಮ ಘಟ್ಟಗಳ ಕಾಡಂಚಿನಲ್ಲಿ ವನ್ಯಪ್ರಾಣಿಗಳಿಗೆ ಹಣ್ಣಿನ ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಳೆದ ಫೆಬ್ರವರಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾದ ರೆಂಜಿಲಾಡಿ ಗ್ರಾಮದ ಘಟನಾ ಸ್ಥಳದ ಸಮೀಪದ ಅರಣ್ಯ ಪ್ರದೇಶದಲ್ಲಿ ಗಿಡ ನಾಟಿಗೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಿತು. ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅವರು ಹಣ್ಣಿನ ಗಿಡ ನೆಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಆರಂಭಿಕವಾಗಿ ಮೊದಲನೇ ಹಂತದಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ವನ್ಯಜೀವಿ ಸಂರಕ್ಷಣಾ ಟ್ರಸ್ಟ್ ಆಡಳಿತ ನಿರ್ದೇಶಕರಾದ ದೀಪಕ್, ಪ್ರಸಾದ್ ಗೌಡ ಅಲಡ್ಕ ಕೊಕ್ಕಡ, ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಯೋಗೀಶ್ ಜಿ.ಸಿ., ಅರಣ್ಯ ರಕ್ಷಕ ಪ್ರಕಾಶ್ ಕುಮಾರ್, ಅರಣ್ಯ ವೀಕ್ಷಕ ಅಚ್ಯುತ, ಪಶ್ಚಿಮ ಘಟ್ಟ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಲಕ್ಷ್ಮಣ್, ತೀರ್ಥೆಶ್ ಮತ್ತಿತರರು ಉಪಸ್ಥಿತರಿದ್ದರು.
25 ಸಾವಿರ ಗಿಡ ನಾಟಿಯ ಗುರಿ;
ಈ ವರ್ಷದ ಅಂತ್ಯಕ್ಕೆ ಅಭಿಯಾನದ ಅಂಗವಾಗಿ ೨೫ ಸಾವಿರ ಗಿಡಗಳನ್ನು ಪಶ್ಚಿಮ ಘಟ್ಟಗಳ ವ್ಯಾಪ್ತಿಯೊಳಗೆ ನೆಡುವ ಗುರಿಯನ್ನು ಸಂಸ್ಥೆ ಹೊಂದಿದ್ದು, ಸಾರ್ವಜನಿಕರು ಸಹಕಾರವನ್ನು ಸಂಸ್ಥೆಗೆ ನೀಡಿ ಆನೆ ಮತ್ತು ಮಾನವ ಸಂಘರ್ಷವನ್ನು ನಿಯಂತ್ರಿಸಲು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಸಂಸ್ಥೆಯವರು ತಿಳಿಸಿದರು.