ಪುತ್ತೂರು:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಪುತ್ತೂರು ಇದರ ವಾರ್ಷಿಕ ಮಹಾಸಭೆ ಮತ್ತು ಪುನಶ್ಚೇತನ ಶಿಬಿರ ಜು.4 ರಂದು ಬೊಳುವಾರು ಸ್ಕೌಟಿಂಗ್ ಸೆಂಟರ್‌ನಲ್ಲಿ ನಡೆಯಿತು. ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಿಗೆ ಮತ್ತು ಜಾಂಬೂರಿಯಲ್ಲಿ ಬಹುಮಾನ ಗಳಿಸಿದವರನ್ನು, ನಿವೃತ್ತ ಶಿಕ್ಷಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ.ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಳೆದ ವರ್ಷ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಬುಲ್‌ಬುಲ್ ಶಿಕ್ಷಕಿಯಾಗಿದ್ದು ನಿವೃತ್ತಿಗೊಂಡಿರುವ ತೆರೇಸಾ ಎಂ.ಸಿಕ್ವೇರಾ, ಬೊಳುವಾರು ಶಾಲೆಯ ನಿವೃತ್ತ ಮುಖ್ಯಗುರು ನಿವೇದಿತಾ, ಮುಕ್ವೆ ಶಾಲೆಯ ನಿವೃತ್ತ ಸಹಶಿಕ್ಷಕಿ ವೇದಾವತಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.90 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಜಾಂಬೂರಿಯಲ್ಲಿ ಬಹುಮಾನ ಪಡೆದವರಿಗೆ ಗೌರವ:
ಮೂಡಬಿದ್ರೆಯಲ್ಲಿ ನಡೆದಿದ್ದ ಪ್ರಥಮ ಅಂತರ್ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ವಿಜ್ಞಾನ ಮೇಳದಲ್ಲಿ ವಿಜ್ಞಾನ ಮಾದರಿಯಲ್ಲಿ ತೃತೀಯ ಬಹುಮಾನ ಗಳಿಸಿದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಗೈಡ್ ಅಪೂರ್ವ, ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಧನುಷ್‌ರಾಮ್ ಇವರನ್ನು ಸನ್ಮಾನಿಸಲಾಯಿತು. ಭರತ್‌ರಾಜ್ ಕೆ.ಎ.ಎಸ್.ಓ.ಎ. ಜಿಲ್ಲಾ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಇ.ಓ. ಪ್ರತಿನಿಧಿಯಾಗಿ ಇದೇ ಮೊದಲ ಬಾರಿ ಆಯ್ಕೆಯಾಗಿರುವುದನ್ನು ಗುರುತಿಸಿ ಗೌರವಿಸಲಾಯಿತು.
ಶಾಲೆಯಲ್ಲಿ ಕೈತೋಟಕ್ಕೆ ಬೀಜ ವಿತರಣೆ:
ಇನ್ನರ್‌ವೀಲ್ ಕ್ಲಬ್ ವತಿಯಿಂದ ಎಲ್ಲಾ ಶಾಲೆಗಳಿಗೆ ಕೈತೋಟ ಮಾಡಲು ತರಕಾರಿ ಬೀಜ ವಿತರಣೆ ಮಾಡಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶ್ರೀಧರ ರೈ, ಭರತ್‌ರಾಜ್, ಎಂ.ಜಿ.ಕಜೆ, ಉಮಾ ಪ್ರಸನ್ನ, ಝೇವಿಯರ್ ಡಿ’ಸೋಜಾ, ವಿದ್ಯಾ ಆರ್ ಗೌರಿ, ಸುನೀತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುನೀತ ಎಂ.ಲೆಕ್ಕಪತ್ರ ಮಂಡಿಸಿ, ವಂದಿಸಿದರು. ವಿದ್ಯಾ ಆರ್.ಗೌರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಅನುರಾಧ ಮತ್ತು ಮಹೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.