ಅಪಾಯದಂಚಿನಲ್ಲಿ ಬಾವಿ, ಅರ್ಚಕರ ಸ್ನಾನ ಗೃಹ, ದೈವದ ಕಟ್ಟೆ
ಪುತ್ತೂರು: ಎಡೆಬಿಡದೆ ಸುರಿದ ಮಳೆಗೆ ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಹೋರಾಂಗಣದ ಉತ್ತರ ದಿಕ್ಕಿನ ತೋಡಿನ ಬಳಿ ಜು. 5ರಂದು ಬರೆ ಕುಸಿತಗೊಂಡಿದ್ದು, ಆ ಭಾಗದಲ್ಲಿರುವ ಬಾವಿ, ಅರ್ಚಕರ ಸ್ನಾನಗೃಹ, ದೈವದ ಕಟ್ಟೆ ಮತ್ತು ಸಾರ್ವಜನಿಕರು ಕೈ ತೊಳೆಯುವ ಸ್ಥಳಗಳು ಅಪಾಯದ ಅಂಚಿನಲ್ಲಿದೆ.
ದೇವಳದ ಉತ್ತರ ದಿಕ್ಕಿನಲ್ಲಿ ಆಳವಾದ ಬರೆಯಿದ್ದು ಕೆಳಗಡೆ ಮಳೆ ನೀರು ಹರಿಯುವ ತೋಡು ಇದೆ. ಪ್ರತಿ ವರ್ಷ ಮಳೆಗೆ ಮಣ್ಣು ಸಡಿಲಗೊಂಡು ಬರೆ ಕುಸಿಯುತ್ತಿದ್ದು, ಈ ಭಾರಿ ತೋಡಿನ ಕೆಳಗಡೆ ಗೋಲಾಕಾರವಾಗಿ ಮಣ್ಣು ಕುಸಿದಿದೆ. ಇದರಿಂದಾಗಿ ಬರೆಯ ಮೇಲಿರುವ ದೇವಳದ ಅರ್ಚಕರ ಸ್ನಾನಗೃಹ, ದೈವದ ಕಟ್ಟೆ, ಬಾವಿಗೆ ಹಾನಿಯಾಗುವ ಸಾಧ್ಯತೆ ಇದೆ. ಇಲ್ಲಿನ ಅಪಾಯದ ಕುರಿತು ಈ ಮೊದಲೇ ಚಿಂತಿಸಿ ಸಣ್ಣ ನೀರಾವಾರಿಯಿಂದ ತಡೆಗೋಡೆಗೆ ಅನುದಾನ ಬಂದಿತ್ತು. ಆದರೆ ಅದು ಸಾಕಾಗುವುದಿಲ್ಲ ಎಂದು ಈ ಹಿಂದಿನ ಶಾಸಕರ ಮೂಲಕ ಹೆಚ್ಚಿನ ಅನುದಾನಕ್ಕೆ ಪ್ರಸ್ತಾವನೆ ಹೋಗಿತ್ತು. ಆದರೆ ಚುನಾವಣೆಯ ಸಂದರ್ಭದಲ್ಲಿ ಯಾವುದೇ ಅನುದಾನ ಬಂದಿಲ್ಲ. ಇದೀಗ ಬರೆ ಮತ್ತಷ್ಟು ಕುಸಿಯುವ ಭೀತಿಯಿದ್ದು, ತಕ್ಷಣ ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸುವಂತೆ ಭಕ್ತರು ಆಗ್ರಹಿಸಿದ್ದಾರೆ.