ಪುತ್ತೂರು: ನಮಗೆ ಬದುಕಲು ಬೇಕಾಗಿದ್ದು ಶುಧ್ಧ ಗಾಳಿ ಮತ್ತು ನೀರು ನಾವು ನಮ್ಮ ಭೂಮಿಯನ್ನು ಪ್ರೀತಿಸದೇ ಹೋದರೆ ನಮಗೆ ಬದುಕಿಲ್ಲ. ನಾವು ನಮ್ಮ ಭೂಮಿ ಒಳ್ಳೆದಾಗಲಿ ಅಂತ ಏನಾದರೂ ಮಾಡಿದರೆ ಅದಕ್ಕಿಂತ ದೊಡ್ಡ ಫಿಕ್ಸೆಡ್ ಡೆಪಾಸಿಟ್ ಬೇಕಾಗಿಲ್ಲ’. ಎಂದು ಖ್ಯಾತ ಜಲತಜ್ಞ ಡಾ ಶ್ರೀಶ ಕುಮಾರ್ ಹೇಳಿದರು.
ಅವರು ಆತ್ಮಭಾವ್ ಆರ್ಗಾನಿಕ್ಸ್ ನೇತೃತ್ವ ಮತ್ತು ಕೊಯಿಲ ಗ್ರಾಮ ಪಂಚಾಯತ್ ನ ಉಪಸ್ಥಿತಿಯಲ್ಲಿ ಕೊಯಿಲ ಗ್ರಾಮದಲ್ಲಿ ಊರ ಗ್ರಾಮಸ್ಥರಿಗೆ ನಡೆಸಿದ ” ಮಳೆ ನೀರು ಇಂಗಿಸುವುದು ಯಾಕೆ ಮತ್ತು ಹೇಗೆ” ಎಂಬ ಮಾಹಿತಿ ಕಾರ್ಯಾಗಾರದಲ್ಲಿ ಹೇಳಿದರು.
ಓಡುವ ನೀರನ್ನು ನಡೆಯಲು ಬಿಡಿ; ನಡೆಯುವ ನೀರನ್ನು ತೆವಳಲು ಬಿಡಿ ; ತೆವಳುವ ನೀರನ್ನು ನಿಲ್ಲಿಸಿಬಿಡಿ ; ನಿಂತ ನೀರನ್ನು ಇಂಗಿಸಿಬಿಡಿ – ಈ ನಾಲ್ಕು ತತ್ವಗಳನ್ನು ನೆನಪಿನಲ್ಲಿಡಿ. ಇದರೊಂದಿಗೆ ನಮ್ಮಲ್ಲಿ ದೇಹಬಲ ಮತ್ತು ಮನಸ್ಸಿನ ಬಲ ಇದ್ದದ್ದೇ ಆದಲ್ಲಿ ನಾವು ನಿಜವಾದ ಜಲಯೋಧರಾಗುವುದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳಿದರು.
ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪಂಚಾಯತ್ ವತಿಯಿಂದ ಮಳೆ ನೀರು ಇಂಗಿಸುವುದಕ್ಕೆ ಸಂಬಂಧಿಸಿದ ವಿವಿಧ ಸೌಲಭ್ಯಗಳ ಬಗ್ಗೆ ತಿಳಿಸಿದರು. ರಾಮಕುಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಮತ್ತು ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಆಚಾರ್ಯ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.