ಯುವವಾಹಿನಿ ಘಟಕದಿಂದ ವಧು-ವರಾನ್ವೇಷಣೆ:180ಕ್ಕೂ ಅಧಿಕ ವಧು-ವರರ ನೋಂದಾವಣೆ

0

ಪುತ್ತೂರು:ಯುವವಾಹಿನಿ ಪುತ್ತೂರು ಘಟಕದ ವತಿಯಿಂದ ಬಿಲ್ಲವ ವಧು-ವರಾನ್ವೇಷನೆಯು ಜು.9ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾ ಭವನದಲ್ಲಿ ನಡೆಯಿತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ನಾನಾ ಕಾರಣಗಳಿಂದ ಯುವಕ-ಯುವತಿಯರು ವಿವಾಹವಾಗಲು ವಿಳಂಬ ಆದವರಿಗೆ ಹಾಗೂ ವಿವಾಹವಾಗಲು ಸಿದ್ದತೆಯಲ್ಲಿರುವವರಿಗೆ ವಧು-ವರಾನ್ವೇಷಣೆ ಯುವವಾಹಿನಿ ಘಟಕವು ಸೂಕ್ತ ವೇದಿಕೆ ಕಲ್ಪಿಸಿದೆ. ಇದಕ್ಕಾಗಿ ಯುವವಾಹಿನಿಯ ಕಳೆದ ಒಂದು ತಿಂಗಳಿನಿಂದ ಸಮಾಜ ಬಾಂಧವರನ್ನು ಸಂಪರ್ಕ ಮಾಡಿ ವಧು-ವರಾನ್ವೇಷನೆಯನ್ನು ರಾಜ್ಯ ಮಟ್ಟದಲ್ಲಿ ಆಯೋಜನೆ ಮಾಡಿದೆ. ಆವಶ್ಯಕತೆಯಿರುವವರಿಗೆ ಕಾರ್ಯಕ್ರಮದ ಪ್ರಯೋಜನ ದೊರೆಯಲಿ ಎಂದು ಹಾರೈಸಿದರು.


ಮುಖ್ಯ ಅತಿಥಿಯಾಗಿದ್ದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಪೂಜಾರಿ ನೆಕ್ಕರೆ ಮಾತನಾಡಿ, ವಿವಾಹ ಹಾಗೂ ಮದುರಂಗಿ ಬಹಳಷ್ಟು ಮಹತ್ವವಿದೆ. ಶಾಸ್ತ್ರ, ಸಂಪ್ರದಾಯ, ಆಚರಣೆಗಳು ಸಮಯಗಳಿಗೆ ಪ್ರಧಾನ್ಯತೆ ನೀಡಬೇಕು. ಆಧುನಿಕತೆ ತಕ್ಕಂತೆ ಇದರಲ್ಲಿ ಬದಲಾಯಿಸಿಕೊಂಡು ಅಶುದ್ದಗೊಳಿಸುವುದು ಸರಿಯಲ್ಲ ಎಂದರು.


ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿಯ ಅಧ್ಯಕ್ಷ ಉಮೇಶ್ ಬಾಯಾರ್ ಮಾತನಾಡಿ, ಸಮಾಜ ಬಾಂಧವರಿಗೆ ಅನುಕೂಲವಾಗು ನಿಟ್ಟಿನಲ್ಲಿ ವಧುವರಾನ್ವೇಷಣೆ ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಶೀಘ್ರವಾಗಿ ಕಂಕನ ಭಾಗ್ಯ ಕೂಡಬರಲಿ ಎಂದು ಹೇಳಿದರು. ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಸನಿಲ್, ವಧುವರಾನ್ವೇಷಣೆಯ ಸಂಚಾಲಕ ಜಯರಾಮ ಬಿ.ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪೂರ್ಣಿಮಾ ಬಾಬು ಪೂಜಾರಿ ಹಾಗೂ ಪ್ರಿಯ ಪ್ರಾರ್ಥಿಸಿದರು. ಯುವವಾಹಿನಿ ಸಮಾಜ ಸೇವಾ ನಿರ್ದೇಶಕ ಮೋಹನ ಶಿಬರ ಸ್ವಾಗತಿಸಿದರು. ಶರತ್, ಗಣೇಶ್ ಸುವರ್ಣ ಬೊಲ್ಲಗುಡ್ಡೆ, ಅವಿನಾಶ್ ಹಾರಾಡಿ, ಲೋಹಿತ್, ದೀಕ್ಷಿತ್, ಬಾಬು ಇದ್ಪಾಡಿ, ಅನೂಪ್ ಅತಿಥಿಗಳಿಗೆ ಶಾಲು ಹಾಕಿ, ತಾಂಬೂಲ ನೀಡಿ ಸ್ವಾಗತಿಸಿದರು. ಯುವವಾಹಿನಿ ಕಾರ್ಯದರ್ಶಿ ಅಣ್ಣಿ ಪೂಜಾರಿ ವಂದಿಸಿದರು. ಸುಪ್ರೀತಾ ಚರಣ್ ಹಾಗೂ ಶಶಿಧರ ಕಿಣ್ಣಿಮಜಲು ಕಾರ್ಯಕ್ರಮ ನಿರೂಪಿಸಿದರು.


18 ವರ್ಷ ಮೇಲ್ಪಟ್ಟು ಯುವತಿ ಹಾಗೂ 21 ವರ್ಷ ಮೇಲ್ಪಟ್ಟ ಯುವಕರಿಗೆ ವಧು-ವರಾನ್ವೇಷಣೆಯಲ್ಲಿ ನೋಂದಾಯಿಸಲು ಅವಕಾಶವಿತ್ತು. ನೋಂದಾಯಿಸಿದ ವಧು ಹಾಗೂ ವರರ ಮಾಹಿತಿ ಹಾಗೂ ವಿವರಗಳನ್ನು ಎಲ್‌ಇಡಿ ಪರದೆಯ ಮೂಲಕ ಪ್ರದರ್ಶನ ಮಾಡಲಾಗಿತ್ತು. ವಿವರಗಳಿಗೆ ಸಂಬಂಧಪಟ್ಟ ವಧು-ವರರ ದೂರವಾಣಿ ಸಂಪರ್ಕಗಳನ್ನು ಕಚೇರಿಯಲ್ಲಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ಸುಮಾರು 180ಕ್ಕೂ ಅಧಿಕ ಮಂದಿ ಯುವಕ-ಯುವತಿಯರು ನೋಂದಾಯಿಸಿದ್ದರು.

LEAVE A REPLY

Please enter your comment!
Please enter your name here