ಪುತ್ತೂರು: ಪಿರಿಯಾಪಟ್ಟಣದಲ್ಲಿ ಅಪಘಾತಗೊಂಡಿರುವ ಎರಡು ಕಾರುಗಳಲ್ಲಿರುವ ಗಾಯಾಳುಗಳನ್ನು ಪುತ್ತೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಪುತ್ತೂರು ಬಪ್ಪಳಿಗೆಯ ಯುವಕರು ರಕ್ಷಣೆ ಮಾಡಿದ ಘಟನೆ ಜು.18ರ ನಸುಕಿನ ಜಾವ ನಡೆದಿದೆ.
ಕಾರು ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ಐವರು ಗಂಭೀರ ಗಾಯ ಗೊಂಡಿದ್ದರು. ಈ ವೇಳೆ ಮೈಸೂರಿನಲ್ಲಿ ಮದುವೆ ಕಾರ್ಯಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಪುತ್ತೂರು ಬಪ್ಪಳಿಗೆ ನಿವಾಸಿಗಳಾದ ಮೊಹಮ್ಮದ್ ಹುರೈಸ್ ಜನತಾ ಸ್ಕೇಲ್, ಆಶಿಕ್ ಬಪ್ಪಳಿಗೆ, ಅಮ್ಮಿ ಗಡಪಿಲ, ಶಾಫಿ ಗಡಪಿಲ, ಶಮೀರ್ ಸಂಟ್ಯಾರ್ ಅವರು ಅಪಘಾತಗೊಂಡ ಕಾರಿನೊಳಗಿನಿಂದ ʼರಕ್ಷಿಸಿ ರಕ್ಷಿಸಿʼ ಎಂಬ ಕೂಗನ್ನು ಆಲಿಸಿದ ಅವರು ಕೂಡಲೇ ಕಾರಿನ ಗಾಜು ಡೋರನ್ನು ಸರಳಿನಿಂದ ತೆಗೆದು ಗಂಭೀರ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀತೆ ಮೆರೆದಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ಇಂದು ಬೆಳ್ಳಂಬೆಳಗ್ಗೆ ನಿಂತಿದ್ದ ಟ್ರ್ಯಾಕ್ಟರ್ ಗೆ ಕಾರೊಂದು ಡಿಕ್ಕಿಯಾಗಿ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಪಿರಿಯಾಪಟ್ಟಣದಿಂದ ಹುಣಸೂರಿಗೆ ತೆರಳುವ ದಾರಿಯಲ್ಲಿ ಕಮಲಾಪುರದ ಬಳಿ ಬೆಳಗ್ಗೆ 4:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಕಾರಿನಲ್ಲಿದ್ದ ಮುದಾಸಿರ್, ಮುಜಾಹಿದ್, ಅಹಮದ್ ಪಾಷಾ ಮೃತಪಟ್ಟಿದ್ದಾರೆ. ಇನ್ನುಳಿದ ಮೂವರಿಗೆ ಗಂಭೀರವಾಗಿ ಗಾಯವಾಗಿದೆ.
ಬಪ್ಪಳಿಗೆ ಯುವಕರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರಶಂಶೆಗಳು ಬರುತ್ತಿದೆ.