ಕಡಬ: ಸನಾತನ ಹಿಂದೂ ಆಚರಣೆಯ ಭಾಗವಾಗಿರುವ ಭಜನೆಗೆ ಒಗ್ಗಟ್ಟು ಮೂಡಿಸುವ ಶಕ್ತಿಯಿದೆ. ಪ್ರತಿ ಮನೆಯಲ್ಲೂ ಭಜನೆ ನಡೆಯುವಂತೆ ಹಿರಿಯರು ಪ್ರೇರಿಪಿಸಬೇಕು. ಯುವ ಸಮೂಹ ಧಾರ್ಮಿಕ ವೈಚಾರಿಕತೆ, ದೇಶದ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನೆ ಹಾಗೂ ಆರಾಧನಾ ಕೇಂದ್ರಗಳು ಯುವಜನತೆಯ ಒಗ್ಗಟ್ಟಿಗೆ ಕಾರಣವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಕಡಬ ನಗರ ಅಧ್ಯಕ್ಷ ಸತ್ಯನಾರಾಯಣ ಹೆಗ್ಡೆ ಹೇಳಿದರು.
ಅವರು ಜು.16ರಂದು ಕೊಯಿಲ ಗ್ರಾಮದ ಕೊನೆಮಜಲು ಶ್ರೀ ಅನ್ನಪೂರ್ಣೇಶ್ವರೀ ಭಜನಾ ಮಂದಿರದಲ್ಲಿ ಕಡಬ ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ , ಬಿಳಿನೆಲೆ ಗೋಪಾಲಕೃಷ್ಣ ಭಜನಾ ಮಂಡಳಿ ಸಹಯೋಗದಲ್ಲಿ ನಡೆಯುತ್ತಿದ್ದ ಮಕ್ಕಳ ಕುಣಿತ ಭಜನಾ ತರಬೇತಿಯ ಸಮರೋಪವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಆಕರ್ಷಣೆಗೆ ಬಲಿಯಾಗದೆ, ಜಗತ್ತಿನೊಡೆಯ ಭಾರತ ದೇಶದ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಬೇಕು. ಕೌಟುಂಬಿಕ ಹಾಗೂ ಸಾಮಾಜಿಕ ಒಗ್ಗಟ್ಟಿಗೆ ಪೂರಕವಾದ ಭಜನೆಯನ್ನು ನಮ್ಮ ಮನೆಯ ಶುಭ ಸಮಾರಂಭದಲ್ಲಿ ಹಮ್ಮಿಕೊಳ್ಳಬೇಕು. ಆ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದರು. ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯುಧುಶ್ರೀ ಆನೆಗುಂಡಿ ಮಾತನಾಡಿ, ಕೂಡು ಕುಟುಂಬದ ನಮ್ಮ ಹಿರಿಯರ ಜೀವನ ಪದ್ದತಿಯಲ್ಲಿ ದಿನ ನಿತ್ಯದ ಸಂಧ್ಯಾ ಕಾಲದಲ್ಲಿ ಮನೆ ಮಂದಿ ಒಗ್ಗೂಡಿ ಭಜನೆ ಮಾಡುತ್ತಿದ್ದರು. ಕಾಲ ಬದಲಾದಂತೆ ಇಂತಹ ಆಚರಣೆಗಳು ಪಾಶ್ಚಿಮಾತ್ಯ ಅನುಕರಣೆಯಿಂದ ದೂರ ಸರಿಯುತ್ತ ಬಂತು. ಆದರೆ ಇತ್ತಿಚಿನ ವರ್ಷಗಳಲ್ಲಿ ಭಜನೆಗೆ ಮತ್ತೆ ಮಹತ್ವ ಬಂದಿರುವುದು ಒಳ್ಳೆಯ ಬೆಳವಣಿಗೆ. ಭಜನೆಗೆ ವೈಜ್ಞಾನಿಕತೆಯ ಹಿನ್ನೆಲೆಯಿದೆ. ಭಜನೆಯೊಂದಿಗೆ ಬಳಸುವ ಉಪಕರಣಗಳಿಂದ ನಮ್ಮ ದೇಹದ ಆರೋಗ್ಯವು ವೃದ್ದಿಯಾಗುತ್ತೆ ಎಂದರು.
ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಬಿಳಿನೆಲೆ ಶುಭಹಾರೈಸಿದರು. ಭಜನಾ ಮಂದಿರದ ಸ್ಥಾಪಕಾಧ್ಯಕ್ಷ ವೀರಪ್ಪ ದಾಸಯ್ಯ ಶುಭ ಉಪಸ್ಥಿತರಿದ್ದರು. ಭಜನಾ ಮಂದಿರದ ಅಧ್ಯಕ್ಷ ಆನಂದ ಗೌಡ ಅಧ್ಯಕ್ಷತೆ ವಹಿಸಿದ್ದರು. ಭಜನಾ ತರಬೇತಿ ನೀಡಿದ ಸುಂದರ ಗೌಡ ಬಿಳಿನೆಲೆ, ಜನಾರ್ದನ ಗೌಡ ಸೂಡ್ಲು, ತಿರುಮಲೇಶ್ ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ತರಬೇತಿ ಪಡೆದ ಭಜನಾ ಪಟುಗಳಿಂದ ಕುಣಿತ ಭಜನೆ ನಡೆಯಿತು. ಉಪನ್ಯಾಸಕ ಚೇತನ್ ಆನೆಗುಂಡಿ ಪ್ರಸ್ತಾವಿಸಿ ಸ್ವಾಗತಿಸಿದರು. ಭಜನಾ ಮಂಡಳಿ ಕಾರ್ಯದರ್ಶಿ ಯತೀಶ್ ಪುತ್ಯೆ ನಿರೂಪಿಸಿ, ವಂದಿಸಿದರು.