ಮಂಗಳೂರು: ಈ ಬಾರಿ ಶಾಲೆಗಳ ಆರಂಭದಲ್ಲೇ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಪಡೆದಿದ್ದ ಸರ್ಕಾರಿ ಶಾಲೆ ಮಕ್ಕಳು ಇನ್ನು ಕೆಲವೇ ದಿನಗಳಲ್ಲಿ ಶೂ, ಸಾಕ್ಸ್ ಕೂಡಾ ಪಡೆಯಲಿದ್ದಾರೆ.
ಜಿಲ್ಲೆಯಲ್ಲಿ 901 ಸರ್ಕಾರಿ ಪ್ರಾಥಮಿಕ ಶಾಲೆಗಳು, 179 ಸರ್ಕಾರಿ ಪ್ರೌಢಶಾಲೆಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳ ಒಂದರಿಂದ 8ನೇ ತರಗತಿವರೆಗಿನ ಒಟ್ಟು 80,335 ವಿದ್ಯಾರ್ಥಿಗಳು ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಪಡೆಯಲಿದ್ದಾರೆ.ಈ ಸಂಬಂಧ ಜಿಲ್ಲೆಗೆ ರೂ.2.19 ಕೋಟಿ ಅನುದಾನ ಬಿಡುಗಡೆಯಾಗಿದೆ. ನೇರವಾಗಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಖಾತೆಗೆ ವಾರದ ಹಿಂದೆ ಹಣ ಸಂದಾಯವಾಗಿದೆ.
ಸ್ಥಳೀಯವಾಗಿ ಇವನ್ನು ಖರೀದಿ ಅಧಿಕಾರವನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ ನೀಡಿದೆ. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಖರೀದಿ ಸಮಿತಿ ಅಧ್ಯಕ್ಷರಾಗಿದ್ದು, ಸದಸ್ಯ ಕಾರ್ಯದರ್ಶಿಯಾಗಿರುವ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಮೂವರು ಸದಸ್ಯರನ್ನು ಒಳಗೊಂಡ ಸಮಿತಿಗೆ ಶೂ, ಸಾಕ್ಸ್‌ಗಳನ್ನು ಖರೀದಿಸುವ ಹೊಣೆ ವಹಿಸಲಾಗಿದೆ. ಅಲ್ಲದೆ, ಉತ್ತಮ ಬ್ರ್ಯಾಂಡ್‌ನ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಖರೀದಿಸುವಂತೆ ಸೂಚಿಸಲಾಗಿದೆ. ಹಿಂದೆ ಇದ್ದ ದರವನ್ನೇ ಮುಂದುವರಿಸಲಾಗಿದ್ದು,1ರಿಂದ 5ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ರೂ.265, 6ರಿಂದ 8ನೇ ತರಗತಿವರೆಗಿನ ಪ್ರತಿ ವಿದ್ಯಾರ್ಥಿಗೆ ರೂ.295, 9 ಮತ್ತು 10ನೇ ತರಗತಿಯ ಪ್ರತಿ ವಿದ್ಯಾರ್ಥಿಗೆ ರೂ.325 ನಿಗದಿ ಮಾಡಲಾಗಿದೆ.
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಶೂ ಖರೀದಿಸುವ ಸಂಬಂಧ ಅನುದಾನ ನಿಗದಿಯಾಗಿದ್ದು, ಇನ್ನಷ್ಟೇ ಬಿಡುಗಡೆ ಆಗಬೇಕಾಗಿದೆ.ಇವೆರಡು ತರಗತಿಗಳಿಂದ ಜಿಲ್ಲೆಯಲ್ಲಿ ಒಟ್ಟು 16,790 ಮಕ್ಕಳು ಇದ್ದಾರೆ. ಇವರ ಶೂ, ಸಾಕ್ಸ್ ಖರೀದಿಗೆ ರೂ.62.01 ಲಕ್ಷ ಅನುದಾನ ಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.