*ಆರ್ಥಿಕ ವ್ಯವಹಾರ ನಡೆಸಲು ಯುನಿಯನ್ ಬ್ಯಾಂಕ್ ಪೂರ್ಣ ಸಹಕಾರ – ಮಹೇಜ್ ಜೆ
*ತಾಂತ್ರಿಕವಾಗಿ ಅವಕಾಶಗಳನ್ನು ಬಳಸಿಕೊಳ್ಳಿ – ನವೀನ್ ಭಂಡಾರಿ
ಪುತ್ತೂರು:
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವ ಸಹಾಯ ಗುಂಪುಗಳಿಗೆ ಶೇ.7 ಬಡ್ಡಿ ದರದಲ್ಲಿ ರೂ.3ಲಕ್ಷದ ತನಕ ಸಾಲ ನೀಡಲಾಗುವುದು ಮತ್ತು ಇತರ ಆರ್ಥಿಕ ವ್ಯವಹಾರ ನಡೆಸಲು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ವ್ಯವಸ್ಥೆ ಮಾಡುತ್ತದೆ ಎಂದು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾದೇಶಿಕ ಮುಖ್ಯಸ್ಥರು ಡೆಪ್ಯುಟಿ ಜನರಲ್ ಮ್ಯಾನೇಜರ್ ಮಹೇಶ್ ಜೆ ತಿಳಿಸಿದ್ದಾರೆ.
ದಿನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಡೇ-ಎನ್ ಆರ್ ಎಲ್ ಎಮ್) ಯೋಜನೆಯಡಿಯಲ್ಲಿ ನೋಂದಾಯಿತ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ್ ಲಿಂಕ್ ಮಾಡುವ ಬಗ್ಗೆ ಯುನಿಯನ್ ಬ್ಯಾಂಕ್ ಆಪ್ ಇಂಡಿಯಾ ಪ್ರಾದೇಶಿಕ ಕಛೇರಿ ಮಂಗಳೂರು ಇವರ ಸಹಯೋಗದೊಂದಿಗೆ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿ, ಬಿ.ಸಿ ಸಖಿಗಳು ಮತ್ತು ಹಣಕಾಸು ಸಾಕ್ಷರತೆ-ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಜು.26ರಂದು ತಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂಜೀವಿನಿ .ಕೆ.ಎಸ್.ಆರ್.ಎಲ್.ಪಿ.ಎಸ್ ಬೆಂಗಳೂರು ಇವರ ಜೊತೆ ಒಡಂಬಡಿಕೆ ಮಾಡಿಕೊಂಡು ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವ ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ಕೃಷಿ ಚಟುವಟಿಕೆ ಕೃಷಿಯೇತರ ಚಟುವಟಿಕೆ ಮಾಡಲು 7% ಬಡ್ಡಿದರದಲ್ಲಿ 3 ಲಕ್ಷದ ವರೆಗೆ ನೀಡಲಾಗುವುದು ಅದೇ ರೀತಿ ಬ್ಯಾಂಕ್ ಖಾತೆ ತೆರೆಯುವುದು, ಗ್ರಾಮೀಣ ಭಾಗದಲ್ಲಿ ಬಿ.ಸಿ ಸಖಿಗಳ ಮೂಲಕ ವ್ಯವಹಾರ ಕಲ್ಪಿಸಲಾಗುವುದು ಹಾಗೂ ಇತರೆ ಆರ್ಥಿಕ ವ್ಯವಹಾರ ನಡೆಸಲು ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಂಪೂರ್ಣ ವ್ಯವಸ್ಥೆ ಮಾಡುವುದೆಂದು ಅವರು ತಿಳಿಸಿದರಲ್ಲದೆ ಬ್ಯಾಂಕ್ ಸಮಸ್ಯೆಯ ಬಗ್ಗೆ ಸಂಬಂಧಿಸಿದ ಬ್ಯಾಂಕ್ ಮ್ಯಾನೇಜರ್‌ಗಳಿಗೆ ಕೆಲಸದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಸಂಯೋಜಕ ದಿನೇಶ್ ಅವರು ಸ್ವ ಸಹಾಯ ಗುಂಪಿನ ಸಾಲದ ಬೇಡಿಕೆಯ ಅರ್ಜಿಯನ್ನು ಭರ್ತಿ ಮಾಡುವ ಬಗ್ಗೆ ಕೈಪಿಡಿಯನ್ನು ನೀಡಿ ತರಬೇತಿಯನ್ನು ನೀಡಿದರು.
ತಾಂತ್ರಿಕವಾಗಿ ಅವಕಾಶಗಳನ್ನು ಬಳಸಿಕೊಳ್ಳಿ:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬನೆಯಾಗಬೇಕಿದೆ ಸರಕಾರದ ಯೋಜನೆಯನ್ನು ಪಡೆದು ತಮ್ಮ ಹಂತದಲ್ಲಿ ವಿವಿಧ ಚಟುವಟಿಕೆಗಳ ಘಟಕಗಳನ್ನು ತೆರೆಯುವುದರ ಮೂಲಕ ತಾಂತ್ರಿಕವಾಗಿ ಅವಕಾಶಗಳನ್ನು ಬಳಸಿಕೊಂಡು ಬ್ಯಾಂಕ್‌ನ ಬಂಡವಾಳ ಹಾಗೂ ಸಹಾಯಧನ ಉಪಯೋಗದಿಂದ ವಿವಿಧ ರೀತಿಯಲ್ಲಿ ಸ್ಥಳೀಯ ಮಾರುಕಟ್ಟೆ, ಆನ್ ಲೈನ್ ಮಾರುಕಟ್ಟೆ ಮಾಡಬೇಕು ಇದರಿಂದ ಉತ್ತಮ ಜೀವನ ನಿರೂಪಿಸಲು ಸಾಧ್ಯವೆಂದು ತಿಳಿಸಿದರು. ಗ್ರಾಮೀಣ ಉದ್ಯೋಗ ಸಹಾಯಕ ನಿದೇರ್ಶಕಿ ಶೈಲಜಾ ಭಟ್, ಎನ್‌ಆರ್‌ಎಲ್‌ಎಮ್‌ನ ಜಿಲ್ಲಾ ವ್ಯವಸ್ಥಾಪಕಿ ಶಕುಂತಲಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಜಗತ್ ಕೆ ಹಾಗೂ ತಾಲೂಕಿನ ಎಲ್ಲಾ ಎನ್ ಆರ್ ಎಲ್ ಎಮ್ ವಲಯ ಮೇಲ್ವಿಚಾರಕರು ಬ್ಯಾಂಕ್ ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.