ಪುತ್ತೂರು: ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳಿಗೆ ಕಿರುಕುಳ ನೀಡಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಎಫ್‌ಎಸ್‌ಎಲ್ ಮತ್ತು ಎನ್‌ಐಎ ಕಚೇರಿಯಲ್ಲಿನ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‌ಗೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಜಾಬಿರ್ ಅರಿಯಡ್ಕ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. ಎಫ್‌ಎಸ್‌ಎಲ್ ಮತ್ತು ಎನ್‌ಎಐ ಕಚೇರಿಗಳಲ್ಲಿ 2022ರ ನವೆಂಬರ್ ತಿಂಗಳ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‌ಗೆ ಸಲ್ಲಿಸಬೇಕು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಎನ್‌ಐಎ ಕಂಪ್ಯೂಟರ್ ಕೋಶ ಮತ್ತು ಸಿಬ್ಬಂದಿಗೆ ಆದೇಶಿಸಿದ್ದು, ಅರ್ಜಿ ವಿಲೇವಾರಿ ಮಾಡಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಹಲವು ಮಂದಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಅವರಲ್ಲಿ 18ನೆ ಆರೋಪಿ ಮೊಹಮ್ಮದ್ ಜಾಬೀರ್ ಅವರನ್ನು ಎನ್‌ಐಎ ಅಧಿಕಾರಿಗಳು ತಪ್ಪು ಒಪ್ಪಿಕೊಳ್ಳುವಂತೆ ಬಲವಂತ ಮಾಡಿ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿತ್ತು. ಹೀಗಾಗಿ ಅಂದಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮತ್ತು ಎನ್‌ಎಐ ಅಧಿಕಾರಿಗಳ ಕರೆ ದಾಖಲೆಗಳ ವಿವರಗಳನ್ನು ಒದಗಿಸುವಂತೆ ಸಮನ್ಸ್ ಜಾರಿಗೊಳಿಸಬೇಕು ಎಂದು ಕೋರಲಾಗಿತ್ತು. ಆದರೆ, ವಿಶೇಷ ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಇದೀಗ ಹೈಕೋರ್ಟ್ ಆದೇಶಿಸಿದೆ.