ಪುತ್ತೂರು:ರೋಟರಿ ಸಿಟಿ ಪ್ರಾಯೋಜಕತ್ವದಲ್ಲಿ ಕಾರ್ಗಿಲ್ ವಿಜಯಿ ದಿವಸ್ -ದೇಶಕ್ಕಾಗಿ ಜಾತಿ, ಮತ, ಭೇದ ಮರೆತು ಹೋರಾಡುವಂತಾಗಬೇಕು-ಎಂ.ಕೆ.ಎನ್ ಭಟ್

0

ಪುತ್ತೂರು:ದೇಶದ ಸೈನಿಕನಾಗಿ ಕರ್ತವ್ಯ ನಿರ್ವಹಿಸುವ ಯಾವುದೇ ಸೈನಿಕನ ಎದುರು ‘ಮಾಡು ಇಲ್ಲವೇ ಮಡಿ’ ಎಂಬ ಎರಡೇ ಆಯ್ಕೆಗಳಿರುತ್ತಿದ್ದು ಮಾನಸಿಕವಾಗಿ ರಫ್, ದೈಹಿಕವಾಗಿ ಫಿಟ್ ಎಂದೆನಿಸಿಕೊಳ್ಳಬೇಕಾಗುತ್ತದೆ. ಹುತಾತ್ಮರಾದ ಸೈನಿಕರಂತೆ ನಾವು ದೇಶಕ್ಕಾಗಿ ಜಾತಿ, ಮತ, ಭೇದ ಮರೆತು ಹೋರಾಡುವಂತಾಗಬೇಕು ಎಂದು ಮಾಜಿ ನೌಕಾ ಸೇನಾಧಿಕಾರಿ ಹಾಗೂ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಎಂ.ಕೆ ನಾರಾಯಣ ಭಟ್‌ರವರು ಹೇಳಿದರು.
ಜು.26ರಂದು ರೋಟರಿ ಕ್ಲಬ್ ಪುತ್ತೂರು ಸಿಟಿ ಮುಂದಾಳತ್ವದಲ್ಲಿ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಈಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ಇನ್ನರ್‌ವೀಲ್ ಕ್ಲಬ್ ಆಫ್ ಪುತ್ತೂರು, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ, ಪುತ್ತೂರು ಮಾಜಿ ಸೈನಿಕರ ಸಂಘ ಇದರ ಸಹಭಾಗಿತ್ವದಲ್ಲಿ ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಸಂಜೆ ಜರಗಿದ 24ನೇ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಯುದ್ಧದಲ್ಲಿ ಸೈನಿಕರು ಸತ್ತಿಲ್ಲ ಅವರು ಹುತಾತ್ಮರಾಗಿದ್ದಾರೆ. ಇತರರ ನೆಮ್ಮದಿಗೆ, ದೇಶಕ್ಕೋಸ್ಕರ ಮಾಡಿದ ಸೈನಿಕರ ತ್ಯಾಗ ಬಲಿದಾನಕ್ಕೆ ದೇಶದ ಪ್ರತಿಯೊಬ್ಬ ಪ್ರಜೆಯೂ ಆತ್ಮಸಾಕ್ಷಿಯಿಂದ ಹೃತ್ಪೂರ್ವಕವಾಗಿ ಗೌರವ ಸಲ್ಲಿಸುವ ಮುಖಾಂತರ ಶ್ರದ್ಧಾಂಜಲಿಯನ್ನು ಅರ್ಪಿಸಬೇಕಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಟ್ಯಾಂಕ್ ಪಡೆಯ ಮಾಜಿ ಹವಾಲ್ದಾರ್ ಮೇಜರ್ ಸುಂದರ ಗೌಡ ನಡುಬೈಲುರವರು ಮಾತನಾಡಿ, ಸೈನ್ಯದಲ್ಲಿ ಭರ್ತಿಯಾದವರಿಗೆ ಸೈನ್ಯವು ಶಿಸ್ತು, ಜವಾಬ್ದಾರಿ ಏನೆಂಬುದರ ಬಗ್ಗೆ ತರಬೇತಿಯನ್ನು ನೀಡುವ ಮೂಲಕ ಕಲಿಸಿಕೊಡುತ್ತದೆ. ಸೈನ್ಯದಲ್ಲಿನ ಶಿಸ್ತು ಮತ್ತು ಜವಾಬ್ದಾರಿ ನಮ್ಮ ನಿಜ ಬದುಕಿಗೆ ಅನೇಕ ವ್ಯತ್ಯಾಸವಿದೆ. ಇಲ್ಲಿ ನಾವು ವಿವಿಧ ಧರ್ಮಗಳ, ಸಂಸ್ಕೃತಿ, ಆಚಾರ-ವಿಚಾರಗಳ ನಡುವೆ ಬದುಕಬೇಕಾಗಿದೆ. ಭಾರತೀಯ ಸೇನೆ ಬಗ್ಗೆ ಪ್ರತಿಯೋರ್ವರು ಗೌರವವಿಡಿ, ಸೈನ್ಯಕ್ಕೆ ಹೆಚ್ಚೆಚ್ಚು ಮಂದಿ ಸೇರ್ಪಡೆಗೊಳ್ಳಲು ಪ್ರೇರೇಪಿಸಿ ಎಂದು ಅವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಮಾತನಾಡಿ, ದೇಶ ರಕ್ಷಣೆಯಲ್ಲಿ ಯೋಧರ ಪಾತ್ರ ಮಹತ್ವವಾದುದು. ಸ್ವಾತಂತ್ರ್ಯ ನಂತರ ನಮ್ಮ ಭಾರತ ದೇಶ ಅನೇಕ ಯುದ್ಧಗಳನ್ನು ಕಂಡಿದೆ, ಅದರಲ್ಲಿ ಕಾರ್ಗಿಲ್ ಕದನವೂ ಒಂದು. ಭಾರತ ದೇಶವು ವಿರೋಧಿ ರಾಷ್ಟ್ರಗಳೊಂದಿಗೆ ಎಂದಿಗೂ ಯುದ್ಧ ಮಾಡಿಲ್ಲ. ಆದರೆ ವಿರೋಧಿ ನೆರೆಹೊರೆಯ ರಾಷ್ಟ್ರಗಳ ಉಗ್ರರು ಮತ್ತು ಸೈನಿಕರು ನಮ್ಮ ದೇಶದ ಬಂಕರ್‌ಗಳಲ್ಲಿ ಅಡಗಿ ನಿಂತಾಗ ಅವರನ್ನು ಹಿಮ್ಮೆಟ್ಟಿಸಲು ಭಾರತ ದೇಶ ಯುದ್ಧ ಮಾಡಿರುವುದಾಗಿದೆ ಎಂದರು.
ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಮಾತನಾಡಿ, ನಾವು ಇಂದು ಸಂತೋಷವಾಗಿ ನಾಗರಿಕ ಬದುಕನ್ನು ಸಂತೋಷದಿಂದ ಸಾಗಿಸಬೇಕಾದರೆ ಅದಕ್ಕೆ ಕಾರಣ ನಿದ್ದೆಗೆಟ್ಟು ದೇಶದ ಗಡಿಯನ್ನು ಕಾಯುವ ನಮ್ಮ ಹೆಮ್ಮೆಯ ಸೈನಿಕರು. ನಮ್ಮನ್ನು ರಕ್ಷಣೆ ಮಾಡುತ್ತಿರುವ ವೀರ ಸೈನಿಕರ ಸ್ಮರಣೆ ಮಾಡುವುದು, ಗೌರವ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಡಿಸಿ ಜಯಕರ್ ಶೆಟ್ಟಿರವರು ಮಾತನಾಡಿ, ಸೈನಿಕರಲ್ಲಿ ಶ್ರೀಮಂತ ಮತ್ತು ಬಡವ ಎಂಬ ಬೇಧಭಾವವಿರುವುದಿಲ್ಲ. ಸೈನಿಕರ ಮುಂದೆ ಇರುವುದು ಒಂದೇ ಗುರಿ, ಅದು ದೇಶದ ರಕ್ಷಣೆ ಮಾತ್ರ. ಆದ್ದರಿಂದ ಸೈನಿಕರು ಒಗ್ಗಟ್ಟಾಗಿ ದೇಶದ ರಕ್ಷಣೆಯತ್ತ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ವಲಯ ಐದರ ಅಸಿಸ್ಟೆಂಟ್ ಗವರ್ನರ್‌ಗಳಾದ ಪುರಂದರ ರೈ ಮಿತ್ರಂಪಾಡಿ, ನರಸಿಂಹ ಪೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ‍್ಸ್, ಇನ್ನರ್‌ವೀಲ್ ಕ್ಲಬ್ ಆಫ್ ಪುತ್ತೂರು ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಡಿ ಸಿ ಜಯಕರ್ ಶೆಟ್ಟಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜೀವಿಕಾ ಕಜೆ ಪ್ರಾರ್ಥಿಸಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ ವಂದಿಸಿದರು. ಆನೆಟ್ಸ್‌ಗಳಾದ ಈಶಿತಾ ನಾಯರ್, ಮಂದಿರಾ ಕಜೆ, ಮನೀಷ ಕಜೆ, ಆರುಂಧತಿ ಆಚಾರ‍್ಯ ದೇಶಭಕ್ತಿ ಗೀತೆಯನ್ನಾಡಿದರು. ರೋಟರಿ ಸಿಟಿಯ ಸದಸ್ಯ ರಾಮಚಂದ್ರ ಹಾಗೂ ರೋಟರಿ ಸ್ವರ್ಣದ ಸದಸ್ಯೆ ಆಶಾ ರೆಬೆಲ್ಲೋ ಕಾರ್ಯಕ್ರಮ ನಿರ್ವಹಿಸಿದರು.

ಹುತಾತ್ಮ ಸೈನಿಕರಿಗೆ ಗೌರವ..
ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡು ಹುತಾತ್ಮರಾದ ಯೋಧರಿಗೆ ಯುದ್ಧ ಬಂದೂಕನ್ನು ಉಲ್ಟಾ ಇಡುವುದರೊಂದಿಗೆ ಬಂದೂಕಿನ ಕೆಳಗೆ ಹೂಗುಚ್ಚದ ರೀದ್ ಇಟ್ಟು, ಬಳಿಕ ಬಂದೂಕಿನ ಮೇಲೆ ಇಡಲಾದ ಸೈನಿಕರ ಕ್ಯಾಪ್‌ನ ಮೇಲೆ ಅತಿಥಿ ಗಣ್ಯರು ಪುಷ್ಪಾರ್ಚನೆಗೈಯುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಜೊತೆಗೆ ಸಭೆಯಲ್ಲಿ ಹಾಜರಿದ್ದ 40 ಮಂದಿ ಮಾಜಿ ಸೈನಿಕರಿಗೆ ಕಿರುಕಾಣಿಕೆ ನೀಡಿ ಗೌರವಿಸಲಾಯಿತು.

ಗಡಿಯಾರ ಕೊಡುಗೆ..
ರೋಟರಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್‌ರವರ ಕೊಡುಗೆಯಾಗಿ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣಕ್ಕೆ ದೊಡ್ಡದಾದ ಗಡಿಯಾರವನ್ನು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಡಿ ಸಿ ಜಯಕರ್ ಶೆಟ್ಟಿಯವರಿಗೆ ರೋಟರಿ ಕ್ಲಬ್ ಪುತ್ತೂರು ಸಿಟಿ ವತಿಯಿಂದ ಹಸ್ತಾಂತರಿಸಲಾಯಿತು.

LEAVE A REPLY

Please enter your comment!
Please enter your name here