ಮಂಗಳೂರು: ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ಜೀವಹಾನಿ ತಡೆಗೆ ಸೂಕ್ತ ಕ್ರಿಯಾಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ವಿಕೇಂದ್ರೀಕರಣ ಗೊಳಿಸಲಾಗಿದ್ದು ಜಿಲ್ಲಾ ಕೇಂದ್ರಿತವಾಗಿದ್ದ ಈ ವ್ಯವಸ್ಥೆಯನ್ನು ಅದೇ ಮಾದರಿಯಲ್ಲಿ ಗ್ರಾಮ ಮಟ್ಟದಲ್ಲಿ ರೂಪಿಸಲಾಗಿದ್ದು ಜೀವ ಹಾನಿ ತಡೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮುಲ್ಲೈ ಮುಗಿಲನ್ ಹೇಳಿದ್ದಾರೆ.
ಇಂತಹ ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸಿದ ರಾಜ್ಯದ ಮೊದಲ ಜಿಲ್ಲೆ ದ.ಕ.ಆಗಿದೆ.ಇನ್ನು ಮುಂದೆ ಯಾವುದೇ ಪ್ರಾಕೃತಿಕ ವಿಕೋಪ ಸಂಭವಿಸಿದರೂ ಕ್ಷಣ ಮಾತ್ರದಲ್ಲಿ ವಿಪತ್ತು ನಿರ್ವಹಣಾ ವ್ಯವಸ್ಥೆ ಧಾವಿಸಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಯಾ ತಹಶೀಲ್ದಾರ್‌ಗೆ 50 ಲಕ್ಷ ರು.ಪ್ರಾಕೃತಿಕ ವಿಕೋಪ ನಿಧಿಯನ್ನು ಕಾದಿರಿಸಿದ್ದು, ಪ್ರತಿ ಗ್ರಾಮ, ಸ್ಥಳೀಯಾಡಳಿತ ಹಾಗೂ ಮಹಾನಗರ ಪಾಲಿಕೆಗಳ ವಾರ್ಡ್ಗಳಲ್ಲೂ ವಿಪತ್ತು ನಿರ್ವಹಣಾ ವ್ಯವಸ್ಥೆಯನ್ನು ರಚಿಸಲಾಗಿದೆ.ಈ ಮೂಲಕ ಪ್ರಾಕೃತಿಕ ವಿಪತ್ತು ಸಂಭವಿಸಿದಾಗ ಅತ್ಯಂತ ಕ್ಷಿಪ್ರವಾಗಿ ಕಂದಾಯ,ಪೊಲೀಸ್ ಹಾಗೂ ಸ್ಥಳೀಯಾಡಳಿತ ವ್ಯವಸ್ಥೆಗಳು ಸ್ಪಂದಿಸುವಂತೆ ವ್ಯವಸ್ಥೆ ರೂಪಿಸಲಾಗಿದೆ ಎಂದರು.
ದ.ಕ.ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್, 13 ಸ್ಥಳೀಯಾಡಳಿತ ಹಾಗೂ ಮಹಾನಗರ ಪಾಲಿಕೆಯ 60 ವಾರ್ಡ್ ಸೇರಿ ಒಟ್ಟು 296 ಕಡೆಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ. ಇದಕ್ಕೆ ನೋಡೆಲ್ ಅಽಕಾರಿಗಳನ್ನು ನೇಮಕ ಮಾಡಲಾಗಿದೆ.ಹವಾಮಾನ ಇಲಾಖೆ ಸೇರಿದಂತೆ ಪ್ರಾಕೃತಿಕ ವಿಕೋಪ ಕುರಿತ ಯಾವುದೇ ಮಾಹಿತಿ ಬಂದರೂ ಅದನ್ನು ನೇರವಾಗಿ ಗ್ರಾಮ ಮಟ್ಟದ ತಂಡಕ್ಕೆ ರವಾನಿಸಲಾಗುತ್ತದೆ.ಪ್ರಾಕೃತಿಕ ವಿಕೋಪ ನಿರ್ವಹಣೆಯ ಎಲ್ಲ ಜವಾಬ್ದಾರಿ ಹಾಗೂ ಅಧಿಕಾರವನ್ನು ಈ ತಂಡಕ್ಕೆ ನೀಡಲಾಗಿದೆ.25 ಮಂದಿ ಎನ್‌ಡಿಆರ್‌ಎಫ್, 38 ಮಂದಿ ಎಸ್‌ಡಿಆರ್‌ಎಫ್, 19 ಅಗ್ನಿಶಾಮಕ ಸಿಬ್ಬಂದಿ ಹಾಗೂ 74 ಹೋಂ ಗಾರ್ಡ್ಸ್ ಇದ್ದು, ಇವರೆಲ್ಲರನ್ನು ಪ್ರಾಕೃತಿಕ ವಿಕೋಪ ನಡೆಯಬಹುದಾದ ಸ್ಥಳಗಳಿಗೆ ಹಂಚಿಕೆ ಮಾಡಲಾಗಿದೆ.ಸಣ್ಣಪುಟ್ಟ ಪ್ರಾಕೃತಿಕ ಅವಘಡಗಳಿಂದ ತೊಡಗಿ ದೊಡ್ಡ ಮಟ್ಟದ ದುರಂತ ಸಂಭವಿಸಿದರೂ ಅದನ್ನು ನಿಭಾಯಿಸಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ.ಯಾವುದೇ ಸಾವು, ನೋವು ಇಲ್ಲದೆ ಇದನ್ನು ಎದುರಿಸುವ ಬಗ್ಗೆಯೂ ತಿಳಿವಳಿಕೆ ನೀಡಲಾಗಿದೆ ಎಂದು ಜಿಲ್ಲಾಽಕಾರಿ ಹೇಳಿದರು.
3 ಹಂತಗಳಲ್ಲಿ ಅಪಾಯ ಮುನ್ನೆಚ್ಚರಿಕೆ ಕ್ರಮ: ಭೂಕುಸಿತ, ಕೃತಕ ನೆರೆ ಹಾಗೂ ಪ್ರವಾಸಿ ತಾಣಗಳಲ್ಲಿ ಸೆಲಿ ಈ ಮೂರು ಹಂತಗಳಲ್ಲಿ ಪ್ರಾಕೃತಿಕ ಅಪಾಯ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.ಭೂಕುಸಿತದಂತಹ ಸಾಧ್ಯತೆಗಳು ಕಂಡುಬಂದರೆ ಅಂತಹ ಪ್ರದೇಶಗಳಿಂದ ವಾಸವನ್ನು ತಾತ್ಕಾಲಿಕ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.ಇದಕ್ಕೆ ಮನೆ ಮಂದಿ ಸ್ಪಂದಿಸದೇ ಇದ್ದರೆ ಬಲವಂತವಾಗಿ ಪೊಲೀಸ್ ಇಲಾಖೆ ಮೂಲಕ ತೆರವುಗೊಳಿಸಲಾಗುವುದು ಎಂದ ಅವರು,ಬಂಟ್ವಾಳದ ಸಜಿಪದಲ್ಲಿ ಗುಡ್ಡ ಕುಸಿತ ಬಗ್ಗೆ ಮುಂಚಿತವಾಗಿ ನೋಟೀಸ್ ನೀಡಿದ್ದರೂ ಆ ಕುಟುಂಬ ತೆರವಾಗಿರಲಿಲ್ಲ,ದುರದೃಷ್ಟವಶಾತ್ ಅವಘಡ ಸಂಭವಿಸಿ ಮಹಿಳೆಯೊಬ್ಬರು ಸಾವಿಗೀಡಾಗಬೇಕಾಯಿತು.ಸಂಭಾವ್ಯ ವಿಪತ್ತು ಸಂಭವಿಸಬಹುದಾದ ಸುಬ್ರಹ್ಮಣ್ಯದಲ್ಲಿ 7 ಮನೆಗಳ 35 ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಈಗಾಗಲೇ ಭೂಗರ್ಭ ತಜ್ಞರ ನೆರವಿನಲ್ಲಿ ಜಿಲ್ಲೆಯಲ್ಲಿ 87 ಸಂಭಾವ್ಯ ಕುಸಿತ ಸ್ಥಳಗಳನ್ನು ಗುರುತಿಸಿ ನಿಗಾ ಇರಿಸಲಾಗಿದೆ.ಶೇ.80ರಷ್ಟು ಕುಸಿತ ಸಾಧ್ಯತೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಲ್ಲೈ ಮುಗಿಲನ್ ಹೇಳಿದರು.ಸಂಭಾವ್ಯ ಕೃತಕ ನೆರೆ ತಪ್ಪಿಸಲು ಅಂತಹ ಪ್ರದೇಶಗಳಿಂದ ಜನರನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ.ಹಠಾತ್ತನೆ ನೆರೆ ಆವರಿಸಿದರೆ, ಬೋಟ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುವುದು. ಜನತೆ ಇದಕ್ಕೆ ಸಹಕರಿಸಬೇಕು ಎಂದರು.
ಧಾರ್ಮಿಕ ಕ್ಷೇತ್ರಗಳಲ್ಲಿ ಮಳೆಗಾಲದಲ್ಲಿ ನದಿ ಸ್ನಾನ ನಿಷೇಧ: ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಕ್ರೇಜ್‌ನಲ್ಲಿ ಜಲಪಾತ ಮತ್ತಿತರ ಅಪಾಯಕಾರಿ ಸ್ಥಳಗಳಲ್ಲಿ ಸೆಲಿ ಗೀಳು ಹೆಚ್ಚಾಗಿ ಕಂಡುಬರುತ್ತಿದೆ.ಸುಬ್ರಹ್ಮಣ್ಯ, ಕಟೀಲು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಮಳೆಗಾಲದಲ್ಲಿ ನದಿ ಸ್ನಾನ ನಿರ್ಬಂಧಿಸಲಾಗಿದೆ.ಜಿಲ್ಲೆಯ 8 ಬೀಚ್‌ಗಳಲ್ಲಿ 24 ಹೋಂ ಗಾರ್ಡ್ ಇರಿಸಲಾಗಿದ್ದು, ಪೊಲೀಸರನ್ನು ಕೂಡ ನಿಯೋಜಿಸಲಾಗುತ್ತಿದೆ.ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಈ ಬಗ್ಗೆ ಕಡ್ಡಾಯ ಸೂಚನೆ ನೀಡುವಂತೆ ತಿಳಿಸಲಾಗಿದೆ ಎಂದರು.
ವರದಿಗೆ ಸೂಚನೆ: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವ್ಯಾಪಕ ಹೊಂಡ, ಗುಂಡಿ ಬಗ್ಗೆ ದೂರುಗಳು ಕೇಳಿಬಂದಿವೆ.ಇದನ್ನು ತಾತ್ಕಾಲಿಕ ಸರಿಪಡಿಸುವಂತೆ ಸಂಬಂಧಿತರಿಗೆ ಸೂಚಿಸಲಾಗಿದೆ.ಇದರ ಹೊರತೂ ಕಾಲು ಸಂಕ, ರಸ್ತೆ, ಚರಂಡಿ ಹಾನಿ, ಬಿರುಕುಗಳ ಸಮೀಕ್ಷೆ ನಡೆಸಿ ದುರಸ್ತಿ ಜತೆಗೆ ಸಮಗ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದರೆ ಸಂಬಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಸೂಕ್ತ ವಿವರಣೆ ಕೋರಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಗೂಗಲ್‌ನಲ್ಲೂ ಟ್ರ‍್ಯಾಕ್: ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಮಾತನಾಡಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ವಿವಿಧ ಕಾರಣಕ್ಕೆ ರಸ್ತೆ ಬಂದ್ ಸಂದರ್ಭ ಅದನ್ನು ಗೂಗಲ್‌ಗೂ ಅಪ್‌ಲೋಡ್ ಮಾಡಲಾಗುವುದು.ಇದರಿಂದ ಎಷ್ಟು ಸಮಯ ರಸ್ತೆ ಬಂದ್ ಆಗಿರುತ್ತದೆ ಎಂಬ ಮಾಹಿತಿ ಗೂಗಲ್ ಮ್ಯಾಪ್ ಮೂಲಕ ವಾಹನ ಸವಾರರು, ಚಾಲಕರಿಗೆ ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.
ಬೀಚ್‌ಗಳಿಗೆ ಭೇಟಿ ನೀಡಲು ಅವಕಾಶ ಇಲ್ಲ, ಮೀನುಗಾರಿಕೆಗೂ ನಿರ್ಬಂಧ ವಿಧಿಸಲಾಗಿದ್ದು, ಸಮುದ್ರ ತೀರದಲ್ಲೂ ಸಾಹಸಕ್ಕೆ ಅವಕಾಶ ಇಲ್ಲ ಎಂದವರು ಹೇಳಿದರು.
ಭಾರೀ ಮಳೆ ವೇಳೆ ಕ್ಷೇತ್ರ ಭೇಟಿ ಬೇಡ
ಭಾರೀ ಮಳೆ ವೇಳೆ ಕ್ಷೇತ್ರಗಳ ಸಂದರ್ಶನ ಹಾಕಿಕೊಳ್ಳುವುದು ಬೇಡ, ಅಲ್ಲದೆ ಅನಿವಾರ್ಯವಾಗಿ ಆಗಮಿಸಿದರೂ ನದಿಗೆ ಇಳಿಯುವುದು, ಸೆಲಿ ಕ್ರೇಜ್ ಮಾಡಬೇಡಿ, ಈ ಬಗ್ಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಫಲಕ ಅಳವಡಿಸಿದ್ದು, ಇದನ್ನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು. ಪ್ರವಾಸಿ ತಾಣಗಳಲ್ಲಿ ನೀರಿಗೆ ಇಳಿಯಲು ಅವಕಾಶ ಇಲ್ಲ. ರಸ್ತೆ ಬಂದ್ ಆಗುವ ಸನ್ನಿವೇಶ ಕಂಡುಬಂದರೆ ಕೂಡಲೇ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಸೂಚನೆ ನಿರ್ಲಕ್ಷಿಸಿದರೆ ಕಠಿಣ ಕ್ರಮ
ಟ್ರೆಕ್ಕಿಂಗ್ ತಾಣ ಭೇಟಿ, ಹೆದ್ದಾರಿ ನಡುವೆ ಪ್ರಕೃತಿ ಆಸ್ವಾದಕ್ಕೆ ವಾಹನ ನಿಲ್ಲಿಸಿದರೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.ಅಪಾಯಕಾರಿ ಸ್ಥಳಗಳಲ್ಲಿ, ಸೇತುವೆ ಮೇಲೆ, ರಸ್ತೆ ಮೇಲೆ ನೀರು ಬಂದರೆ, ಕುಸಿತ ಜಾಗಗಳಲ್ಲಿ, ಇನ್ನಿತರೆ ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಫಲಕ ಅಳವಡಿಸಲಾಗುವುದು.ಇದನ್ನು ಮೀರಿ ವರ್ತಿಸಿದರೆ ಪ್ಯಾಟ್ರೋಲಿಂಗ್ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ.ಸಾರ್ವಜನಿಕರು ಕೂಡ ಅಪಾಯಕಾರಿ ಸ್ಥಳಗಳು ಕಂಡುಬಂದರೆ ಕೂಡಲೇ ಜಿಲ್ಲಾಡಳಿತದ ಕಂಟ್ರೋಲ್ ರೂಂ(1077) ಅಥವಾ ಪೊಲೀಸ್ ಕಂಟ್ರೋಲ್ ರೂಂ(112)ಗೆ ಮಾಹಿತಿ ನೀಡಬಹುದು.ಜಿಲ್ಲಾಡಳಿತ 34 ಫೋನ್ ಲೈನ್‌ಗಳನ್ನು ಹೊಂದಿದೆ.ಇದರಿಂದ ಕೂಡಲೇ ಸ್ಪಂದನಕ್ಕೆ ಅನುಕೂಲವಾಗುತ್ತದೆ ಎಂದು ಜಿಲ್ಲಾಽಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.