ನೆಲ್ಯಾಡಿ: ಕೋತಿ ದಾಳಿ ನಡೆಸಿದ ಪರಿಣಾಮ ಮಹಿಳೆಯೋರ್ವರು ಗಾಯಗೊಂಡಿರುವ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಜು.31ರಂದು ನಡೆದಿದೆ.
ಕೌಕ್ರಾಡಿ ಗ್ರಾಮದ ಲಾವತ್ತಡ್ಕ ನಿವಾಸಿ ಜಾನ್ ಕೆ.ವಿ.ಎಂಬವರ ಪತ್ನಿ ತ್ರೇಸಿಯಮ್ಮ ಕೆ.ವಿ.(40ವ.)ಗಾಯಗೊಂಡವರಾಗಿದ್ದಾರೆ. ತ್ರೇಸಿಯಮ್ಮ ಅವರು ತಮ್ಮ ಪುತ್ರ, ವಿಕಲಚೇತನ ಬಾಲಕ ಟೋನಿ ಕೆ.ಜೆ.ಅವರನ್ನು ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯಲು ಪೆರಿಯಶಾಂತಿಗೆ ಬಂದು ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಬಾಲಕನ ಬಳಿಗೆ ಕೋತಿಯೊಂದು ಬಂದಿದ್ದು ಅದನ್ನು ತಡೆಯಲು ಮುಂದಾದ ತ್ರೇಸಿಯಮ್ಮರವರ ಮೇಲೆ ದಾಳಿ ನಡೆಸಿದ ಕೋತಿ ಅವರ ಕೈಗೆ ಕಚ್ಚಿ ಗಾಯಗೊಳಿಸಿದೆ ಎಂದು ವರದಿಯಾಗಿದೆ. ಇದರಿಂದ ಗಾಯಗೊಂಡಿರುವ ತ್ರೇಸಿಯಮ್ಮ ಅವರು ಉಜಿರೆ ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪೆರಿಯಶಾಂತಿಯಲ್ಲಿ ಹೆದ್ದಾರಿ ಬದಿ ಬೀದಿ ವ್ಯಾಪರ ನಡೆಯುತ್ತಿದ್ದು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಸಾಕಷ್ಟು ಪ್ರವಾಸಿಗರು ಖರೀದಿಗಾಗಿ ಇಲ್ಲಿ ತಮ್ಮ ವಾಹನ ನಿಲ್ಲಿಸಿ ಮುಂದೆ ಸಾಗುತ್ತಾರೆ. ಪ್ರವಾಸಿಗರು ಹಣ್ಣು, ಹಂಪಲು ಕೋತಿಗಳಿಗೂ ನೀಡುತ್ತಿದ್ದು ಅವುಗಳೂ ಇಲ್ಲಿ ಓಡಾಡುತ್ತಿವೆ. ಕೋತಿ ದಾಳಿ ನಡೆಸಿ ಗಾಯಗೊಳಿಸಿರುವ ಬಗ್ಗೆ ತ್ರೇಸಿಯಮ್ಮ ಅವರ ಮನೆಯವರು ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಯವರ ಗಮನಕ್ಕೂ ತಂದಿದ್ದಾರೆ ಎಂದು ತಿಳಿದುಬಂದಿದೆ.