ಪುತ್ತೂರು: ನಾವೆಲ್ಲರೂ ಜಗತ್ತಿನಲ್ಲಾಗುತ್ತಿರುವ ತಂತ್ರಜ್ಞಾನದ ವ್ಯಾಪಕ ಬೆಳವಣಿಗೆಗೆ ಒಗ್ಗಿಕೊಳ್ಳುತ್ತಾ, ಸ್ವೀಕರಿಸುತ್ತಾ ಅದನ್ನು ಬಳಸಿಕೊಳ್ಳುತ್ತಾ ಮುನ್ನಡೆಯಬೇಕು ಎಂದು ಮುಳಿಯ ಜುವೆಲ್ಸ್ ಪ್ರೈವೆಟ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಅಲ್ಲಿನ ಸ್ನಾತಕೋತ್ತರ ಎಂಬಿಎ ಮತ್ತು ಎಂಸಿಎ ವಿಭಾಗಗಳ ವಿದ್ಯಾರ್ಥಿಗಳನ್ನು ಬೀಳ್ಕೊಡುವ ಕಾರ್ಯಕ್ರಮದಲ್ಲಿ ಮಾತಾಡಿದರು.
ನಮ್ಮ ಜೀವನದಲ್ಲಿ ತಂತ್ರಜ್ಞಾನದ ಬಳಕೆ ಅದರಲ್ಲೂ ಮುಖ್ಯವಾಗಿ ಕೃತಕ ಬುದ್ದಿಮತ್ತೆಯ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿದ ಅವರು ಇವೆಲ್ಲವನ್ನೂ ಮನುಕುಲದ ಒಳಿತಿಗಾಗಿ ಬಳಸಬೇಕು ಎಂದರು. ಕೇವಲ ಉದ್ಯೋಗ ಗಳಿಸುವುದೇ ಜೀವನದ ಧ್ಯೇಯವಾಗದಂತೆ ವಿದ್ಯಾರ್ಥಿಗಳು ಉದ್ಯಮಶೀಲತೆಯ ಮನೋಭಾವದಿಂದ ಸ್ವ ಉದ್ಯೋಗದತ್ತ ಗಮನಹರಿಸಬೇಕು ಎಂದರು.
ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ ಕೆ ಮಾತನಾಡಿ ನೀವು ಈ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದೀರಿ, ಸಂಸ್ಥೆಯ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತೀರಿ, ಹೀಗಾಗಿ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಪಡೆದು ಸಂಸ್ಥೆಯ ರಾಯಭಾರಿಗಳಾಗಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ಡಾ.ಯಶೋದಾ ರಾಮಚಂದ್ರ ಮಾತನಾಡಿ ಪ್ರತಿ ಕಾರ್ಯದ ಅಂತ್ಯವು ಹೊಸ ಕೆಲಸದ ಆರಂಭವನ್ನು ಸೂಚಿಸುತ್ತದೆ ಎಂದರು. ಜೀವನದಲ್ಲಿ ಸ್ಪಷ್ಟ ಗುರಿಗಳನ್ನು ನಿರ್ಧರಿಸಲು ಮತ್ತು ಅದನ್ನು ಸಾಧಿಸಲು ಸಾಧ್ಯವಾದರೆ ಅವನ ಜೀವನ ಸಾರ್ಥಕವಾದಂತೆ ಎಂದು ನುಡಿದರು ತಾವೇನು ಯೋಚಿಸುತ್ತೇವೆಯೋ ಅದೇ ಆಗುತ್ತೇವೆ ಹಾಗಾಗಿ ನಮ್ಮ ಯೋಚನೆಗಳಲ್ಲಿ ಸ್ಪಷ್ಟತೆ ಮತ್ತು ಪರಿಶುದ್ಧತೆಯಿರಬೇಕು ಎಂದು ನುಡಿದರು.
ಕಾಲೇಜಿನ ತರಬೇತಿ ಮತ್ತು ನೇಮಕಾತಿ ವಿಭಾಗ ಮುಖ್ಯಸ್ಥೆ ಪ್ರೊ.ವಂದನಾ ಶಂಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಬಿಎ ವಿಭಾಗದ ನಿರ್ದೇಶಕ ಡಾ.ಶೇಖರ್.ಎಸ್.ಅಯ್ಯರ್ ಸ್ವಾಗತಿಸಿ, ಎಂಸಿಎ ವಿಭಾಗದ ನಿರ್ದೇಶಕಿ ಡಾ.ವಂದನಾ.ಬಿ.ಎಸ್ ವಂದಿಸಿದರು.