ಜೆಜೆಎಂ ಕುಡಿಯುವ ನೀರಿನ ಅವ್ಯವಸ್ಥೆಯ ವಿರುದ್ಧ ಗ್ರಾಮಸ್ಥರ ಆಕ್ರೋಶ- ಕೆಯ್ಯೂರು ಗ್ರಾಮಸಭೆ
ಪುತ್ತೂರು: ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸರಕಾರ ಜಾರಿ ಮಾಡಿದ್ದ ಮನೆಮನೆಗೆ ಗಂಗೆ ಯೋಜನೆ ವಿಫಲಗೊಂಡಿದೆ. ಕಳೆದ 3 ವರ್ಷಗಳ ಹಿಂದೆ ಆರಂಭವಾದ ಯೋಜನೆಯಡಿ ಪ್ರತಿ ಮನೆಗೆ ನಳ್ಳಿ ನೀರಿನ ಸಂಪರ್ಕ ಕೊಟ್ಟಿದ್ದರೂ ನೀರು ಮಾತ್ರ ಮರೀಚಿಕೆಯಾಗಿದೆ. ಜೆಜೆಎಂಗಾಗಿಯೇ ಬೋರ್‌ವೆಲ್ ಹಾಗೂ ಪ್ರತ್ಯೇಕ ಟ್ಯಾಂಕ್ ನಿರ್ಮಿಸಿದ್ದರೂ ಇದುವರೇಗೆ ಟ್ಯಾಂಕ್‌ಗೆ ನೀರು ಮಾತ್ರ ಹಾಕಿಲ್ಲ. ನೀರು ಹಾಕದೇ ಇರುವುದರಿಂದ ಟ್ಯಾಂಕ್ ಬಿರುಕು ಬಿಟ್ಟು ಹಾಳಾಗುವ ಸಾಧ್ಯತೆ ಹೆಚ್ಚಿದೆ. ಕೆಯ್ಯೂರು ಗ್ರಾಮಕ್ಕೆ ಸುಮಾರು 2.5 ಕೋಟಿ ರೂ.ಅನುದಾನ ಜೆಜೆಎಂಗೆ ಬಂದಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಫಲಾನುಭವಿಗಳಿಗೆ ಕುಡಿಯುವ ನೀರು ಮಾತ್ರ ಇನ್ನೂ ಪೂರೈಕೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಜೆಜೆಎಂ ಇಂಜಿನಿಯರ್ ಸಭೆಗೆ ಬಾರದೇ ಇರುವ ಬಗ್ಗೆ ಅಸಮಾಧಾನಗೊಂಡ ಗ್ರಾಮಸ್ಥರು ಜೆಜೆಎಂ ಬಗ್ಗೆ ಇಂಜಿನಿಯರ್ ಸರಿಯಾದ ಮಾಹಿತಿ ನೀಡುವಂತೆ ಆಗ್ರಹಿಸಿದರು.
ಸಭೆಯು ಗ್ರಾಪಂ ಅಧ್ಯಕ್ಷೆ ಜಯಂತಿ ಎಸ್.ಭಂಡಾರಿಯವರ ಅಧ್ಯಕ್ಷತೆಯಲ್ಲಿ ಆ.1 ರಂದು ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಂಜುಶ್ರೀಯವರ ಮಾರ್ಗದರ್ಶನಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಗ್ರಾಪಂ ಸದಸ್ಯ ಜಯಂತ ಪೂಜಾರಿ ಕೆಂಗುಡೇಲುರವರು, ಜಲ ಜೀವನ್ ಮಿಷನ್ ಯೋಜನೆಯಡಿ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಪ್ರತಿ ಮನೆಗೆ ನಳ್ಳಿ ಸಂಪರ್ಕ ಮಾಡಿದ್ದಾರೆ. ಇದು ಏನಾಗಿದೆ ಎಂದರೆ ಕೇವಲ ನಳ್ಳಿ ಸಂಪರ್ಕ ಮಾತ್ರ ಆಗಿದೆಯೇ ವಿನಹ ಇಂದಿನ ತನಕವೂ ನೀರಿನ ಸಂಪರ್ಕ ಮಾತ್ರ ಆಗಿಲ್ಲ. ಮನೆಯ ಅಂಗಳದಲ್ಲಿ ` ನಾಗನ ಕಟ್ಟೆ’ ಯ ರೀತಿಯಲ್ಲಿ ನಳ್ಳಿ ಸಂಪರ್ಕದ ಕಟ್ಟೆ ಮಾಡಿಕೊಂಡು ಹೋಗಿದ್ದಾರೆ. ಜೆಜೆಎಂ ಒಂದು ಕಾಟಾಚಾರಕ್ಕೆ ಮಾಡಿದ ವ್ಯವಸ್ಥೆಯಾಗಿದೆ ಎಂದು ಹೇಳಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಒಳ್ಳೆಯ ಯೋಜನೆ ವಿಫಲ!
ಜೆಜೆಎಂ ಸರಕಾರದ ಒಂದು ಒಳ್ಳೆಯ ಯೋಜನೆ ಆಗಿದೆ. ಆದರೆ ಅದರ ಅನುಷ್ಠಾನ ಮಾತ್ರ ವಿಫಲಗೊಂಡಿದೆ ಎಂದ ಜಯಂತ ಪೂಜಾರಿಯವರು, ಕಾಮಗಾರಿ ಕೂಡ ಅರ್ಧದಲ್ಲೇ ನಿಂತಿದೆ. ಬಹುತೇಕ ಮನೆಗಳಿಗೆ ನಳ್ಳಿ ಸಂಪರ್ಕ ಕೊಟ್ಟಿದ್ದರೂ ನೀರಿನ ಸಂಪರ್ಕ ಆಗಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಅಬ್ದುಲ್ ಖಾದರ್ ಮೇರ್ಲರವರು, ಕೆಯ್ಯೂರು ಗ್ರಾಮಕ್ಕೆ ಸುಮಾರು 2.5 ಕೋಟಿ ರೂ.ಅನುದಾನ ಬಂದಿದ್ದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ಕಡೆಗಳಲ್ಲಿ ನಳ್ಳಿ ಸಂಪರ್ಕವನ್ನು ಮನೆಯ ಕೌಂಪೌಂಡು ಹೊರಗೆ ಮಾಡಿದ್ದಾರೆ. ಬೇಕಾಬಿಟ್ಟಿಯಾಗಿ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು. ಗ್ರಾಮದ ಬಂಗಾರುಗುಡ್ಡೆ ಪರಿಸರದಲ್ಲಿ ಸುಮಾರು 10 ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದ್ದು ಈ ಮನೆಗಳಿಗೆ ಜೆಜೆಎಂ ನಳ್ಳಿ ಅಳವಡಿಸಿದ್ದಾರೆ. ಟ್ಯಾಂಕ್, ಬೋರ್‌ವೆಲ್ ಎಲ್ಲವೂ ಆಗಿದೆ ಆದರೆ ನೀರಿನ ಸಂಪರ್ಕ ಮಾತ್ರ ಆಗಿಲ್ಲ. ಈ ಮನೆಯವರಿಗೆ ಮಳೆಗಾಲದಲ್ಲಿ ಮಳೆಯ ನೀರೇ ಎಲ್ಲದ್ದಕ್ಕೂ ಆಗಿದೆ. ಮಳೆಯ ನೀರನ್ನು ಸಂಗ್ರಹಿಸಿ ಅದರಲ್ಲಿ ಸ್ನಾನ, ಬಟ್ಟೆ ಒಗೆಯುವುದು ಇತ್ಯಾದಿಗಳನ್ನು ಮಾಡುತ್ತಿದ್ದಾರೆ ಎಂದು ಮೋಹನ್ ಗೌಡ ಎರಕ್ಕಳ ಹೇಳಿದರು. ಶೀಘ್ರವಾಗಿ ಜೆಜೆಎಂ ಕುಡಿಯುವ ನೀರಿನ ಅನುಷ್ಠಾನ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಬರೆದುಕೊಳ್ಳುವಂತೆ ತಿಳಿಸಿದರು.
ಮನೆ ಇದ್ದರೂ ಮನೆ ನಂಬರ್ ಇಲ್ಲ, ರೇಷನ್ ಕಾರ್ಡೇ ಇಲ್ಲ!
ನಾನು ಕಳೆದ 20 ವರ್ಷಗಳಿಂದ ಗ್ರಾಮದ ಕೋಡಂಬು ಎಂಬಲ್ಲಿ ಎರಡು ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದೇನೆ. ಮನೆ ಇದ್ದರೂ ನನಗೆ ಇದುವರೆಗೆ ಮನೆ ನಂಬರ್ ಆಗಿಲ್ಲ, ಮನೆ ನಂಬರ್ ಇಲ್ಲದೆ ರೇಷನ್ ಕಾರ್ಡು ಕೂಡ ಇಲ್ಲ. ಈಗ 94 ಸಿಯಲ್ಲಿ ಅಡಿ ಸ್ಥಳ ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದು ಅದಕ್ಕೆ ಪಂಚಾಯತ್ ನಿರಾಕ್ಷೇಪಣಾ ಪತ್ರ ಕೇಳುತ್ತಿದ್ದಾರೆ. ನಾನೇನು ಮಾಡಲಿ ಎಂದು ಶಾಂಭವಿಯವರು ಪ್ರಶ್ನಿಸಿದರು. ಇದಕ್ಕೆ ಹರಿಶ್ಚಂದ್ರ ಆಚಾರ್ಯ, ಅಬ್ದುಲ್ ಖಾದರ್ ಮೇರ್ಲರವರು ಧ್ವನಿಗೂಡಿಸಿ, ಬಡ ಮಹಿಳೆಗೆ ನ್ಯಾಯ ಕೊಡಿಸಬೇಕಾದ ಅಗತ್ಯತೆ ಇದೆ. ಇದರಂತೆ ದೇವಕಿ, ಲತಾ ಎಮ್ ರೈ, ರತಿ ರೈ, ಪ್ರಮೀಳಾ, ಪ್ರಫುಲ್ಲಾ, ವಿಜಯ ಎ, ರಮೇಶ್ ಆಚಾರ್ಯ, ಶಾಂಭವಿ ರಐ, ಹೇಮಲತಾ, ಶೀಲಾವತಿ, ಸಪ್ನಾ ಸೇರಿದಂತೆ ಹಲವು ಮಂದಿ 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ನ್ಯಾಯ ಸಿಗಬೇಕಾಗಿದೆ ಎಂದು ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು.
ಅಪಾಯಕಾರಿ ಮರಗಳ ಬಗ್ಗೆ ಮಾಹಿತಿ ಕೊಡಿ
ಗ್ರಾಮದಲ್ಲಿ ಅಪಾಯಕಾರಿ ಮರಗಳಿದ್ದರೆ ಅವುಗಳ ಬಗ್ಗೆ ಇಲಾಖೆಗೆ ಮಾಹಿತಿ ಕೊಟ್ಟರೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ನರಿಮೊಗರು ವಲಯದ ಉಪ ವಲಯಾರಣ್ಯಧಿಕಾರಿ ಕುಮಾರಸ್ವಾಮಿ ಹೇಳಿದರು. ಕಣಿಯಾರುಮಲೆಯಲ್ಲಿ ಕಾಡುಕೋಣ ಹಾಗೂ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು ಕೃಷಿಕರಿಗೆ ತೊಂದರೆಯಾಗುತ್ತಿದೆ ಎಂದು ಜಯಂತ ಪೂಜಾರಿ ಕೆಂಗುಡೇಲು ಹೇಳಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿಯವರು, ಬೆಳೆಹಾನಿಗೆ ಸರಕಾರದಿಂದ ಪರಿಹಾರ ಪಡೆದುಕೊಳ್ಳಬಹುದು ಇನ್ನು ಕೃಷಿ ತೋಟಕ್ಕೆ ಹಂದಿ, ಕಾಡುಕೋಣ ಬರದಂತೆ ಸೋಲಾರ್ ವಿದ್ಯುತ್ ಬೇಲಿಗಳನ್ನು ಅಳವಡಿಸಿಕೊಳ್ಳಬಹುದು ಇದಕ್ಕೆ ಇಲಾಖೆಯಿಂದ ಸಬ್ಸಿಡಿ ಲಭ್ಯವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೇಳಿಬಂದ ಬೇಡಿಕೆಗಳು
ತೆಗ್ಗು ಅಂಗನವಾಡಿಯ ಶೌಚಾಲಯ ಬೀಳುವ ಹಂತದಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ಮೋಹನ್ ಗೌಡ ಎರಕ್ಕಳ ಸಭೆಯ ಗಮನ ಸೆಳೆದರು. ಪಂಚಾಯತ್‌ನಿಂದ ಉಚಿತ ಕುಡಿಯು ನೀರು ಕೊಡುವ ವ್ಯವಸ್ಥೆಯಾಗಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳುವ ಎಂದು ಹರಿಶ್ಚಂದ್ರ ಆಚಾರ್ಯ ತಿಳಿಸಿದರು. ಸರಕಾರದಿಂದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಿಗುವ ಸ್ಕಾಲರ್‌ಶಿಪ್‌ಗಳು ಕೆಲವು ವಿದ್ಯಾರ್ಥಿಗಳಿಗೆ ಇನ್ನೂ ಬಂದಿಲ್ಲ ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷೆ ಭವಾನಿ ಚಿದಾನಂದ್ ಹೇಳಿದರು. ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಅಕೌಂಟ್ ಹೊಂದಿದ್ದರೆ ಅಂತವರು ಆಧಾರ್ ಸೀಡಿಂಗ್ ಮಾಡಿಸಿಕೊಳ್ಳುವ ಮೂಲಕ ತಮಗೆ ಬೇಕಾದ ಬ್ಯಾಂಕ್ ಅಕೌಂಟ್‌ಗೆ ಸರಕಾರದ ಸಹಾಯಧನ ಬರುವಂತೆ ಮಾಡಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಲಾಯಿತು.ವಿದ್ಯುತ್ ಬಿಲ್‌ನಲ್ಲಿ ಹೆಸರು ಬದಲಾವಣೆ ಮಾಡಿಕೊಳ್ಳಲು ರೂ.200ರ .2 ಸ್ಟ್ಯಾಂಪ್ ಪೇಪರ್‌ನ ಬದಲು ರೂ. 200 ರ ಒಂದು ಸ್ಟ್ಯಾಂಪ್ ಪೇಪರ್‌ಗೆ ಸೀಮಿತ ಮಾಡಬೇಕು ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ಜಯಂತ ಪೂಜಾರಿ ಕೆಂಗುಡೇಲು ತಿಳಿಸಿದರು.
ಅಜ್ಜಿಗೆ ನ್ಯಾಯ ಸಿಗಬೇಕು..!?
ಇತ್ತೀಚೆಗೆ ಸುರಿದ ಭಾರೀ ಮಳೆಗಾಳಿಗೆ ಗ್ರಾಮದ ಕಟ್ಟೇಜಿರ್ ಎಂಬಲ್ಲಿ ಮನೆಯೊಂದು ಮುರಿದುಬಿದ್ದು ಅಜ್ಜಿಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದರು.ಇವರಿಗೆ ವಾಸ ಮಾಡಲು ಈಗ ಮನೆ ಇಲ್ಲದಾಗಿದೆ ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಅಬ್ದುಲ್ ಖಾದರ್ ಮೇರ್ಲ ತಿಳಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮ ಆಡಳಿತ ಅಧಿಕಾರಿ ಸ್ವಾತಿಯವರು, ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ ವರದಿ ಕಳುಹಿಸಿಕೊಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಬ್ದುಲ್ ಖಾದರ್ ಮೇರ್ಲರವರು, ಕೆಲವರು ಹೇಳುತ್ತಿದ್ದಾರೆ ಮನೆಯಲ್ಲಿ ಅಜ್ಜಿ ವಾಸ ಮಾಡುತ್ತಿರಲಿಲ್ಲ ಎಂಬುದಾಗಿ, ಒಂದು ವೇಳೆ ಮನೆ ಬೀಳುವಾಗ ಅಜ್ಜಿ ಇರುತ್ತಿದ್ದರೆ ಅವರು ಸತ್ತೇ ಹೋಗುತ್ತಿದ್ದರು. ಮಳೆಯ ಕಾರಣ ಅವರು ಪಕ್ಕದ ಮನೆಗೆ ವಾಸಕ್ಕೆ ಹೋಗಿದ್ದರು ಅಜ್ಜಿಗೆ ನ್ಯಾಯ ಸಿಗಬೇಕು, ಈ ಬಗ್ಗೆ ನಾನು ಶಾಸಕರ ಮುಖಾಂತರ ಮುಖ್ಯಮಂತ್ರಿ ತನಕವೂ ಹೋಗಲು ತಯಾರಿದ್ದೇನೆ ಎಂದು ಮೇರ್ಲ ಹೇಳಿದರು.
ವಿವಿಧ ಇಲಾಖಾ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾರವರು ಗ್ರಾಪಂ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಗಿರಿಜಾ ಕಣಿಯಾರು, ಸದಸ್ಯರುಗಳಾದ ಅಮಿತಾ ಎಚ್.ರೈ, ಅಬ್ದುಲ್ ಖಾದರ್ ಮೇರ್ಲ, ತಾರಾನಾಥ ಕಂಪ, ವಿಜಯ ಕುಮಾರ್, ಸುಭಾಷಿಣಿ ಕೆ, ಮೀನಾಕ್ಷಿ ವಿ.ರೈ, ಜಯಂತ ಪೂಜಾರಿ ಕೆಂಗುಡೇಲು, ಸುಮಿತ್ರ ಪಲ್ಲತ್ತಡ್ಕ, ಡಿ.ಶೇಷಪ್ಪ, ಮಮತಾ ರೈ, ಬಟ್ಯಪ್ಪ ರೈ ದೇರ್ಲ, ನೆಬಿಸಾ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ರಾಕೇಶ್, ಶಿವಪ್ರಸಾದ್, ಜ್ಯೋತಿ ಎಸ್, ಮಾಲತಿ ರೈ, ಧರ್ಮಣ್ಣ, ರಫೀಕ್ ತಿಂಗಳಾಡಿ ಸಹಕರಿಸಿದ್ದರು.
ಜಿಂಕೆಯನ್ನು ಅಟ್ಟಾಡಿಸಿ ಕೊಲ್ಲುವ ಬೀದಿ ನಾಯಿಗಳು!
ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗುತ್ತಿದೆ. ಇದರಿಂದ ಪಾದಚಾರಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಯದಿಂದಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸದಸ್ಯ ಬಟ್ಯಪ್ಪ ರೈ ದೇರ್ಲ ತಿಳಿಸಿದರು. ಇದಕ್ಕೆ ಧ್ವನಿಗೂಡಿಸಿದ ಕೃಷಿಕ ರಘುನಾಥ ರೈ ಕೆಯ್ಯೂರುರವರು, ಬೀದಿ ನಾಯಿಗಳಿಂದ ವನ್ಯ ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಕಣಿಯಾರು ಮಲೆ ರಕ್ಷಿತಾರಣ್ಯದಲ್ಲಿ ಜಿಂಕೆಗಳಿದ್ದು ಅದನ್ನು ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ಬಂದು ಕೊಂದು ತಿನ್ನುತ್ತವೆ. ನಾನು ಕಣ್ಣಾರೆ ನೋಡಿದ್ದೇನೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಪಶು ವೈದ್ಯಾಧಿಕಾರಿಯವರು, ನಾಯಿಗಳನ್ನು ಕೊಲ್ಲುವಂತಿಲ್ಲ ಹಾಗಂತ ವನ್ಯ ಪ್ರಾಣಿಗಳ ಸಂರಕ್ಷಣೆ ಕೂಡ ನಮ್ಮ ಹೊಣೆ. ನಾವು ಬೀದಿ ನಾಯಿ ಮತ್ತು ಸಾಕು ನಾಯಿಗಳು ಎಂಬ ವಿಭಾಗ ಮಾಡಿ ಸಾಕು ನಾಯಿಗಳ ಬಗ್ಗೆ ಮಾಲಕರು ಜಾಗೃತೆ ವಹಿಸಿ ಬೀದಿಗೆ ಬರದಂತೆ ನೋಡಿಕೊಳ್ಳುವುದು ಉತ್ತಮ ಇನ್ನೂ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುವ ಮೂಲಕ ನಾಯಿಗಳ ಹೆಚ್ಚಳವನ್ನು ಕಡಿಮೆ ಮಾಡಬಹುದಾಗಿದೆ ಎಂದರು.
94 ಸಿ ಪಂಚಾಯತ್ ನಿರಾಕ್ಷೇಪಣಾ ಪತ್ರ-ಗೊಂದಲ!
94ಸಿ ಯಲ್ಲಿ ಕಟ್ಟಡದ ಅಡಿ ಸ್ಥಳ ಮಂಜೂರಾತಿಗೆ ಕಂದಾಯ ಇಲಾಖೆಯವರು ಪಂಚಾಯತ್‌ನಿಂದ ಕಟ್ಟಡದ ಅಡಿಸ್ಥಳ ಮಂಜೂರು ಮಾಡುವ ಬಗ್ಗೆ ನಿರಾಕ್ಷೇಪಣಾ ಪತ್ರ ಕೇಳುತ್ತಿದ್ದು ಈ ಬಗ್ಗೆ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೆ ಪಂಚಾಯತ್‌ನವರು ಕಟ್ಟಡದ ವಾರೀಸುದಾರರು 2015 ಜನವರಿಯಿಂದ ವಾಸವಿರುವ ಬಗ್ಗೆ ದಾಖಲೆ ಕೇಳುತ್ತಿದ್ದಾರೆ.ಇದರಿಂದಾಗಿ ಬಹಳಷ್ಟು ಬಡವರಿಗೆ 94ಸಿಯಲ್ಲಿ ಅಡಿಸ್ಥಳ ಮಂಜೂರು ಮಾಡಿಕೊಳ್ಳಲು ಅಸಾಧ್ಯವಾಗಿದೆ ಎಂದು ಸದಸ್ಯ ಅಬ್ದುಲ್ ಖಾದರ್ ಮೇರ್ಲ ಹೇಳಿದರು. ಇದಕ್ಕೆ ಉತ್ತರಿಸಿದ ಗ್ರಾಮ ಆಡಳಿತ ಅಧಿಕಾರಿ ಸ್ವಾತಿಯವರು, ನಾವು ಕಾನೂನು ರೀತಿಯಲ್ಲಿ ದಾಖಲೆಗಳನ್ನು ಕೇಳುತ್ತಿದ್ದೇವೆ. ದಾಖಲುಗಳು ಸರಿಯಾಗಿದ್ದರೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ನಮಿತಾರವರು ಮಾತನಾಡಿ, ಕೆಯ್ಯೂರು ಗ್ರಾಪಂ ನೂತನ ಗ್ರಾಪಂ ಆಗಿದೆ. ಇಲ್ಲಿ ಫಲಾನುಭವಿಗಳಲ್ಲಿ ಹಿಂದಿನ ದಾಖಲೆಗಳು ಇಲ್ಲ, ಅವರು ಕೆದಂಬಾಡಿ ಗ್ರಾಪಂ ಅನ್ನು ಸಂಪರ್ಕಿಸಿ ಅಲ್ಲಿ ವಿಚಾರಿಸಬಹುದಾಗಿದೆ. ಫಲಾನುಭವಿಗಳು 2015 ಜನವರಿಯಿಂದ ವಾಸವಿರುವ ಬಗ್ಗೆ ದಾಖಲೆಗಳನ್ನು ನೀಡಿದರೆ ನಿರಾಕ್ಷೇಪಣಾ ಪತ್ರ ನೀಡಬಹುದು ಎಂದರು. ಇದಕ್ಕೆ ಉತ್ತರಿಸಿದ ಅಬ್ದುಲ್ ಖಾದರ್ ಮೇರ್ಲರವರು, ಈಗಾಗಲೇ 94ಸಿ ಗೆ ಅರ್ಜಿ ಸಲ್ಲಿಸಿದವರು ಬಹುತೇಕ ಬಡವರೇ ಆಗಿದ್ದಾರೆ. ಮನೆ ಕಟ್ಟಿಕೊಂಡಿದ್ದಾರೆ. ಅವರಲ್ಲಿ ಈ ಹಿಂದಿನ ಯಾವುದೇ ದಾಖಲೆಗಳು ಇಲ್ಲ. ಇಲ್ಲಿ ಪಂಚಾಯತ್ ಮತ್ತು ಕಂದಾಯ ಇಲಾಖೆಯ ನಡುವೆ ಫಲಾನುಭವಿಗಳು ಮಾತ್ರ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಣ ಇದ್ದವರೂ ಎಲ್ಲವನ್ನು ಮಾಡಿಕೊಳ್ಳುತ್ತಿದ್ದಾರೆ. ಬಡವರಿಗೆ ಯಾವುದೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.