ಕೊಣಾಲು: ರಸ್ತೆ ಸಂಪರ್ಕ ಬಂದ್-ಎಸಿ ಭೇಟಿ, ಪರಿಶೀಲನೆ

0

ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75ರಿಂದ ಕಡೆಂಬಿಲ ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಬಂದ್ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು ಆ.4ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಕಡೆಂಬಿಲದಿಂದ ಕೋಲ್ಪೆ ಮೂಲಕ ರಾಷ್ಟ್ರೀಯ ಹೆದ್ದಾರಿ ೭೫ಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆ ಸುಮಾರು 80 ವರ್ಷಗಳಿಂದ ಬಳಕೆಯಲ್ಲಿದ್ದು, ಇದೀಗ ಸದ್ರಿ ರಸ್ತೆ ಪಕ್ಕದ ಜಾಗವನ್ನು ಕೇರಳ ಮೂಲದ ಸೆಬಾಸ್ಟಿನ್ ಎಂಬವರು ಖರೀದಿಸಿದ್ದು, ಈ ಜಾಗಕ್ಕೆ ರಾಷ್ಟ್ರೀಯ ಹೆದ್ದಾರಿಗಿಂತಲೂ ಎತ್ತರವಾಗಿ ಮಣ್ಣು ತುಂಬಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು ಬಳಕೆ ಮಾಡುತ್ತಿದ್ದ ರಸ್ತೆ ಮುಚ್ಚಿ ಹೋಗಿದ್ದು, ಈ ರಸ್ತೆಯ ಸುಮಾರು 200 ಮೀ.ಗೆ ಜಿ.ಪಂ.ಅನುದಾನದಿಂದ ಮಾಡಲಾಗಿದ್ದ ಕಾಂಕ್ರಿಟೀಕರಣವನ್ನೂ ಅಗೆದು ಹಾಕಲಾಗಿದೆ. ಸುಮಾರು 80 ವರ್ಷ ಊರ್ಜಿತದಲ್ಲಿದ್ದ ಸಂಪರ್ಕ ರಸ್ತೆ ಬಂದ್ ಮಾಡಿರುವುದರಿಂದ ತಮ್ಮ ದೈನಂದಿನ ವ್ಯವಹಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಈ ಹಿಂದೆ ಊರ್ಜಿತದಲ್ಲಿದ್ದ ಕೋಲ್ಪೆ-ಕಡೆಂಬಿಲ 20 ಅಡಿ ಅಗಲದ ಪಂಚಾಯತ್ ರಸ್ತೆಯನ್ನು ಮರು ನಿರ್ಮಾಣ ಮಾಡಿಕೊಡಬೇಕೆಂದು ಕಡೆಂಬಿಲ ನಿವಾಸಿಗಳು ಮನವಿ ಮಾಡಿದ್ದರು.


ನೇರ ರಸ್ತೆ ಸಂಪರ್ಕ:
ಸಾರ್ವಜನಿಕ ರಸ್ತೆ ಮುಚ್ಚಿಹೋಗಿದ್ದರೂ ಪಕ್ಕದ ಜಾಗದ ಮಾಲಕ ಸೆಬಾಸ್ಟಿನ್‌ರವರು ತಮ್ಮ ಪಟ್ಟಾ ಜಾಗದ ಮೂಲಕ ಕಡೆಂಬಿಲದಿಂದ ಕೋಲ್ಪೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ನೇರವಾಗಿ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಆಕ್ಷೇಪ ಸೂಚಿಸಿರುವ ರಸ್ತೆ ಬಳಕೆದಾರರು ಹಿಂದಿನ ಪಂಚಾಯತ್ ರಸ್ತೆಯನ್ನೇ ಊರ್ಜಿತದಲ್ಲಿಡಬೇಕೆಂದು ಒತ್ತಾಯಿಸಿದ್ದರು. ಸೆಬಾಸ್ಟಿನ್‌ರವರು ತಾವು ಖರೀದಿಸಿದ್ದ ಜಾಗದ ಪರಿಸರದಲ್ಲಿದ್ದ ಸುಮಾರು ೫ ಎಕ್ರೆ ಸರಕಾರಿ ಜಾಗವನ್ನೂ ಒತ್ತುವರಿ ಮಾಡಿಕೊಂಡಿಕೊಂಡು ಮಣ್ಣು ತುಂಬಿಸಿದ್ದಾರೆ ಎಂದೂ ಗ್ರಾಮಸ್ಥರು ಆರೋಪಿಸಿದ್ದಾರೆ.


ಎಸಿ ಭೇಟಿ, ಪರಿಶೀಲನೆ:
ಗ್ರಾಮಸ್ಥರ ಮನವಿಯ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಗಿರೀಶ್ ನಂದನ್‌ರವರು ಆ.೪ರಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬಳಕೆದಾರರ ಬೇಡಿಕೆ ಆಲಿಸಿದರು. ಬಳಿಕ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರು, ಸಾರ್ವಜನಿಕ ರಸ್ತೆ ಮುಚ್ಚಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುತ್ತೇನೆ. ಗ್ರಾಮ ಪಂಚಾಯತ್ ರಸ್ತೆ ಆಗಿರುವುದರಿಂದ ಅಳತೆ ಮಾಡಿ ಸದ್ರಿ ರಸ್ತೆ ಊರ್ಜಿತದಲ್ಲಿಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲು ತಾ.ಪಂ.ಇಒ ನವೀನ್ ಭಂಡಾರಿಯವರಿಗೆ ಸೂಚನೆ ನೀಡಲಾಗುವುದು. ರಸ್ತೆ ಅಗೆದಿರುವುದು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕೆ.ಕೆ.ಉಸ್ಮಾನ್ ಕಡೆಂಬಿಲ, ಯು.ಕೆ.ಹಮೀದ್ ಕಡೆಂಬಿಲ, ಇಕ್ಬಾಲ್, ಜಗನ್ನಾಥ ಶೆಟ್ಟಿ ಕೋಲ್ಪೆ, ಚಂದ್ರ ಆಚಾರಿ, ಕೆ.ಮೊದಿನ್ ಕೋಲ್ಪೆ, ರಫೀಕ್, ಇಸ್ಮಾಯಿಲ್ ಕೋಲ್ಪೆ, ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಪಕೀರ್ ಸಾಹೇಬ್ ಕಡೆಂಬಿಲ, ರಘುರಾಮ ಶೆಟ್ಟಿ, ಕೇಶವ ಪೂಜಾರಿ ಮತ್ತಿತರರು ಸಮಸ್ಯೆ ಕುರಿತು ಸಹಾಯಕ ಆಯುಕ್ತರ ಗಮನಕ್ಕೆ ತಂದರು. ಕಂದಾಯ ನಿರೀಕ್ಷಕ ಪೃಥ್ವಿರಾಜ್, ಗ್ರಾಮಕರಣಿಕ ಸತೀಶ್, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಗೌಡ, ಪಿಡಿಒ ಜಗದೀಶ್ ನಾಯ್ಕ್, ಸದಸ್ಯರಾದ ವಿ.ಸಿ.ಜೋಸೆಫ್, ನೋಣಯ್ಯ ಗೌಡ ಡೆಬ್ಬೇಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here