ಭಾವನಾತ್ಮಕ ಶಕ್ತಿ ಹಿಂದೂ ಧರ್ಮದಲ್ಲಿದೆ : ಮಾಣಿಲ ಶ್ರೀ
ವಿಟ್ಲ: ಪ್ರೀತಿ ಪ್ರೇಮದ ತತ್ವ ಸಂದೇಶ ನಮ್ಮಲ್ಲಿರಬೇಕು. ಯಜ್ಞದಲ್ಲಿ ಭಕ್ತಿ ಎಂಬ ಹವಿಸ್ಸನ್ನು ಸಮರ್ಪಿಸುವ ಮನಸ್ಸು ನಮ್ಮದಾಗಬೇಕು. ನಮ್ಮೊಳಗಿನ ಹಂಬಲ, ಅಹಂಭಾವ ಅಹಂಕಾರ ತೊರೆಯಬೇಕು. ಪ್ರೀತಿ, ಭೀತಿ, ನೀತಿ ಜೀವನದಲ್ಲಿ ಕಡಿಮೆಯಾಗುತ್ತಿದೆ. ಸನಾತನ ಹಿಂದೂ ಧರ್ಮದ ಆರಾಧನಾ ಕೇಂದ್ರಗಳು ನಮ್ಮ ಶಕ್ತಿ. ನಾವು ನಮ್ಮ ನಡೆಯ ಬಗ್ಗೆ, ಬದುಕಿನ ಬಗ್ಗೆ ಯೋಚಿಸಬೇಕಾಗಿದೆ. ಭಾವನಾತ್ಮಕ ಶಕ್ತಿ ಹಿಂದೂ ಧರ್ಮದಲ್ಲಿದೆ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬ ಮಹೋತ್ಸವದ ಅಂಗವಾಗಿ 48 ದಿನಗಳ ಕಾಲ ನಡೆಯುವ ಸಾಮೂಹಿಕ ಶ್ರೀಲಕ್ಷ್ಮೀ ಪೂಜೆಯ ಇಪ್ಪತ್ತೆರಡನೇ ದಿನವಾದ ಆ.6ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಜಗತ್ತಿನಲ್ಲಿ ಸಾಮರಸ್ಯ ಮೊಳಗಬೇಕು. ನಮ್ಮಲ್ಲಿ ಬಾಲಭೋಜನದಲ್ಲಿ ಪಾಲ್ಗೊಂಡ ಮಕ್ಕಳು ಸುಸಂಸ್ಕೃತರಾಗಿ ಉನ್ನತ ಹುದ್ದೆಗಳಲ್ಲಿದ್ದಾರೆ.
ಭಾಲಭೋಜನ ಕಾರ್ಯಕ್ರಮ ಮನೆಮನೆಗಳಲ್ಲಿ ನಿತ್ಯ ನಿರಂತರವಾಗಿ ನಡೆಯಬೇಕಿದೆ. ದೇಶಪ್ರೇಮ ರಾಷ್ಟ್ರ ಪ್ರೇಮ ನಮ್ಮಲ್ಲಿ ಮೂಡಬೇಕು. ಕೆಟ್ಟದರಲ್ಲಿಯೂ ಒಳ್ಳೆಯದನ್ನು ನೋಡುವ ಮನಸ್ಸು ನಿಮ್ಮದಾಗಲಿ. ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಬೆಂಗಳೂರು ಮಂಜುನಾಥ ಸ್ವೀಟ್ಸ್ ಮಾಲೀಕ ಲೋಕೇಶ್, ನಾಗರಾಜ್, ನವೋದಯ ಪೆರುವಾಯಿ ವಲಯ ಪ್ರೇರಕ ಸುಕುಮಾರ, ಉಳ್ಳಾಲ ಪೊಲೀಸ್ ಎಚ್. ಸಿ. ವಿನೋದ್ ಕುಮಾರ್, ಉದ್ಯಮಿ ನರಸಿಂಹ, ಪೆರುವಾಯಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಮೋಕ್ಷಿತ್, ರೇಖಾ ಶಿವ ಕಾಮತ್ ಮಂಗಳೂರು, ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ಅಶ್ವಿತ್ ಕುಲಾಲ್ ಪಡಂಗಡಿ ಕಾರ್ಯಕ್ರಮ ನಿರೂಪಿಸಿದರು.