ತುಳು 2ನೇ ರಾಜ್ಯಭಾಷೆಯನ್ನಾಗಿಸುವಲ್ಲಿ ಪ್ರಯತ್ನ: ಭಾಗೀರಥಿ ಮುರುಳ್ಯ
- ತುಳು ಚಟುವಟಿಕೆಗೆ 10 ಎಕ್ರೆ ಜಾಗ ಮಂಜೂರುಗೊಳಿಸಿ: ಶಶಿಧರ ಶೆಟ್ಟಿ
ರಾಮಕುಂಜ: ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ತೃತೀಯ ಭಾಷೆ ತುಳು ವಿಷಯದಲ್ಲಿ ಪೂರ್ಣಾಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನೇತ್ರಾವತಿ ತುಳುಕೂಟ ರಾಮಕುಂಜ ಮತ್ತು ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆ, ರಾಮಕುಂಜ ಇದರ ಸಹಯೋಗದಲ್ಲಿ ಆ.6ರಂದು ಬೆಳಿಗ್ಗೆ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ಅವರು ಮಾತನಾಡಿ, ಇಂಗ್ಲಿಷ್ ವ್ಯಾಮೋಹದ ಇಂದಿನ ಸಂದರ್ಭದಲ್ಲೂ ವಿದ್ಯಾರ್ಥಿಗಳು ತುಳು ಕಲಿಕೆಗೆ ಆಸಕ್ತಿ ತೋರ್ಪಡಿಸುತ್ತಿರುವುದು ಶ್ಲಾಘನೀಯವಾಗಿದೆ. ತುಳು ಭಾಷೆಯ ವ್ಯಾಮೋಹ, ತುಳುನಾಡಿನ ಆಚರಣೆ ಎಳವೆಯಲ್ಲಿಯೇ ಮಕ್ಕಳಲ್ಲಿ ಬೆಳೆಸಬೇಕು. ತುಳು ಭಾಷೆಗೆ ಸೂಕ್ತ ಸ್ಥಾನಮಾನ ಸಿಗಬೇಕು. ಈ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಈಗಾಗಲೇ ಧ್ವನಿ ಎತ್ತಲಾಗಿದೆ. ತುಳು ಭಾಷೆಯನ್ನು 2ನೇ ರಾಜ್ಯ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಮುಂದೆ ಎಲ್ಲರೂ ಒಟ್ಟುಸೇರಿ ಪ್ರಯತ್ನಿಸುವುದಾಗಿ ಹೇಳಿದರು.
10 ಎಕ್ರೆ ಜಾಗ ಮಂಜೂರು ಮಾಡಿಸಿ:
ಕಾರ್ಯಕ್ರಮ ಉದ್ಘಾಟಿಸಿದ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಇದರ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅವರು ಮಾತನಾಡಿ, ಈ ಹಿಂದೆ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ದಯಾನಂದ ಕತ್ತಲ್‌ಸರ್ ಅವರು ತುಳು ಕಲಿಸುವ ಶಾಲೆಗಳಲ್ಲಿ ತುಳು ಶಿಕ್ಷಕರ ನೇಮಕಕ್ಕಾಗಿ ಸರಕಾರದ ಮಟ್ಟದಲ್ಲಿ ಬಹಳಷ್ಟು ಪ್ರಯತ್ನಿಸಿದ್ದರು. ಆದರೆ ಇದಕ್ಕೆ ಸೂಕ್ತ ರೀತಿಯ ಸ್ಪಂದನೆ ಸಿಕ್ಕಿಲ್ಲ. ಸುನಿಲ್‌ಕುಮಾರ್‌ರವರು ಸಚಿವರಾಗಿದ್ದ ವೇಳೆ ತುಳುವನ್ನು 2ನೇ ರಾಜ್ಯಭಾಷೆಯನ್ನಾಗಿಸುವ ನಿಟ್ಟಿನಲ್ಲಿ ಡಾ.ಮೋಹನ್ ಆಳ್ವರ ನೇತೃತ್ವದ ಸಮಿತಿ ರಚನೆ ಮಾಡಿ, ಇದರ ವರದಿಯನ್ನು ಸರಕಾರಕ್ಕೆ ಮುಟಿಸಿದ್ದರು. ಆದರೆ ಸರಕಾರ ಬದಲಾವಣೆಯಿಂದಾಗಿ ಇದೂ ಸಾಧ್ಯವಾಗಿಲ್ಲ. ಈಗಿನ ಶಾಸಕ ಅಶೋಕ್ ಕುಮಾರ್ ರೈಯವರು ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ತುಳು 2ನೇ ರಾಜ್ಯ ಭಾಷೆಯಾಗಿ ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಯಬೇಕು. ತುಳು ಚಟುವಟಿಕೆ ವಿನಿಯೋಗಕ್ಕಾಗಿ 10 ಎಕ್ರೆ ಜಾಗ ಮಂಜೂರುಗೊಳಿಸುವಲ್ಲಿ ಜಿಲ್ಲೆಯ ಶಾಸಕರು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಹೇಳಿದ ಅವರು, ತುಳು ಭಾಷೆಯ ಬೆಳವಣಿಗೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಕ್ಕೆ ಸಹಕಾರ ನೀಡುವುದಾಗಿ ಹೇಳಿದರು.
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ತುಳು ಲಿಪಿಯಲ್ಲಿಯೇ ಸಹಿ ಮಾಡುತ್ತಿದ್ದರು. ಇದರಿಂದ ಉತ್ತೇಜನಗೊಂಡು ಅವರ ಹುಟ್ಟೂರಿನ ಈ ಶಾಲೆಯಲ್ಲಿ ಕಳೆದ 22 ವರ್ಷದಿಂದ ತುಳುವಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮ ಆಯೋಜಿಸಿದ್ದೇವೆ. ಪ್ರತಿವರ್ಷವೂ ಆಟಿ ಅಮಾವಾಸ್ಯೆ ಸೇರಿದಂತೆ ತುಳುಹಬ್ಬಗಳ ಆಚರಣೆ ಮಾಡಲಾಗುತ್ತಿದೆ. ಶಾಲೆಯಲ್ಲಿ ತುಳು ಲ್ಯಾಬ್, ತುಳು ಪುಸ್ತಕ ವಾಚನಾಲಯವಿದೆ. 62 ವಿವಿಧ ಜಾತಿಯ ಗಿಡಗಳನ್ನು ಬೆಳೆಸಿ ಮಕ್ಕಳಿಗೆ ಅರಿವು ನೀಡಲಾಗುತ್ತಿದೆ. ಹೊರ ಜಿಲ್ಲೆಯ 12 ವಿದ್ಯಾರ್ಥಿಗಳೂ ತುಳು ಕಲಿಯುತ್ತಿದ್ದಾರೆ ಎಂದರು. ಸರಕಾರದ ಸಹಾಯಧನ ಬಯಸದೇ ಪ್ರತಿ ಶಾಲೆಗಳಲ್ಲೂ ತುಳುಕೂಟ ರಚನೆ ಮಾಡಿಕೊಂಡು ಅದರ ಮೂಲಕ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ತುಳು ಭಾಷೆಯ ನಿರ್ಲಕ್ಷ್ಯ ಮಾಡದೇ ಬೆಳೆಸಬೇಕೆಂದು ಹೇಳಿದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್‌ರವರು ಶುಭಹಾರೈಸಿದರು. ಮೈಸೂರು ಎಸ್‌ಎಲ್‌ವಿ ಸಂಸ್ಥೆಯ ಯೋಗೀಶ್, ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ವಸಂತ ಕುಮಾರ್, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ, ಭರತ್‌ಕುಮಾರ್ ಶೆಟ್ಟಿ ಕೇರಿ ತಣ್ಣೀರುಪಂತ, ಈಶ್ವರಮಂಗಲ ಜೈ ಗುರುದೇವ್ ಕಂಪ್ಯೂಟರ್‌ನ ಗಿರೀಶ ರೈ ನೀರ್ಪಾಡಿ, ಆಲಂಕಾರು ಶರವು ಇಂಡಸ್ಟ್ರೀಸ್‌ನ ಪ್ರಶಾಂತ್ ರೈ ಬಳಂಪೋಡಿ, ಆತೂರು ಪೃಥ್ವಿ ಟ್ರೇಡರ್‍ಸ್‌ನ ದಿವಾಕರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆ.೬ರಂದೇ ಹುಟ್ಟುಹಬ್ಬವನ್ನೂ ಆಚರಿಸುತ್ತಿರುವ ಅಖಿಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡಾ ಅವರನ್ನು ನೇತ್ರಾವತಿ ತುಳುಕೂಟ ಹಾಗೂ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಶಿಕ್ಷಕಿ ಸರಿತಾ ಸ್ವಾಗತಿಸಿ, ಸಂಸ್ಥೆಯ ಮೇನೇಜರ್ ರಮೇಶ್ ರೈ ವಂದಿಸಿದರು. ಶಿಕ್ಷಕಿಯರಾದ ಅಕ್ಷತಾ, ಸರಿತಾ, ಲೋಕನಾಥ್ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಹರಿಣಿ, ಅಕ್ಷತ, ಸಂಚಿತ ಪ್ರಾರ್ಥಿಸಿದರು. ಸಂಸ್ಥೆಯ ಶಿಕ್ಷಕರು ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಅಶೋಕ್ ರೈ ಭೇಟಿ:
ಶಾಸಕ ಅಶೋಕ್‌ಕುಮಾರ್ ರೈಯವರು ಸಂಜೆ ಭೇಟಿ ನೀಡಿ ಶುಭ ಹಾರೈಸಿದರು.
ಪುತ್ತೂರು/ಸುಳ್ಯ ಶಾಸಕರಿಗೆ ಬೇಡಿಕೆ ಸಲ್ಲಿಕೆ
ರಾಜ್ಯದಲ್ಲಿ ತುಳು ಭಾಷೆಯನ್ನು 2ನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡುವುದು
ತುಳು ಭಾಷೆ ಬೋಧಿಸುವ ಶಾಲೆಗಳಿಗೆ ತಲಾ 50ಸಾವಿರದಂತೆ ಶಾಸಕರ ನಿಧಿಯಿಂದ ಆರ್ಥಿಕ ಅನುದಾನ
ಪಿಯುಸಿ ವಿಭಾಗದಲ್ಲಿ ತುಳು ಪಠ್ಯಕ್ರಮವನ್ನು ಸೇರಿಸುವುದು
ತುಳುಭಾಷೆಯನ್ನು ಬೋಧಿಸುವ ಶಿಕ್ಷಕರಿಗೆ ಬಿ.ಎಡ್ ಪದವಿಯನ್ನು ನೀಡುವುದು
ಶಾಲೆಯಲ್ಲಿ ತುಳುಕೂಟ ರಚನೆ, ಸಂಘಟನೆ ಮತ್ತು ಹೆಚ್ಚು ಮಕ್ಕಳು ತುಳು ಭಾಷೆಯನ್ನು ಕಲಿಯುವಂತೆ ಕ್ರಮ ಕೈಗೊಳ್ಳುವುದು