ಇಳಂತಿಲ ಗ್ರಾ.ಪಂ.: ಅಧ್ಯಕ್ಷರಾಗಿ ತಿಮ್ಮಪ್ಪ ಗೌಡ, ಉಪಾಧ್ಯಕ್ಷರಾಗಿ ಸವಿತಾ

0

ಕಾಂಗ್ರೆಸ್ ಬೆಂಬಲಿತ ಏಕೈಕ ಸದಸ್ಯನಾದರೂ ನಾಲ್ಕು ಮತ ಪಡೆದ ಈಸುಬು
ಫಲಿತಾಂಶದ ಬಳಿಕ ಬಿಜೆಪಿ ಬೆಂಬಲಿತ ಸದಸ್ಯರಿಬ್ಬರ ರಾಜೀನಾಮೆ

ಉಪ್ಪಿನಂಗಡಿ: ಇಳಂತಿಲ ಗ್ರಾ.ಪಂ.ನ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ತ್ರಿಕೋಣ ಸ್ಪರ್ಧೆ ನಡೆದು ಬಿಜೆಪಿ ಬೆಂಬಲಿತ ಸದಸ್ಯ ತಿಮ್ಮಪ್ಪ ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಸವಿತಾ ಎಚ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬೆಂಬಲಿತ ಏಕೈಕ ಸದಸ್ಯರಾಗಿದ್ದ ಈಸುಬು ಅವರು ನಾಲ್ಕು ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಚುನಾವಣೆ ಫಲಿತಾಂಶದ ಬಳಿಕ ಅಧ್ಯಕ್ಷ ಆಕಾಂಕ್ಷಿಯಾಗಿದ್ದುಕೊಂಡು ಚುನಾವಣೆಯಲ್ಲಿ ಸೋತ ಬಿಜೆಪಿ ಬೆಂಬಲಿತ ಸದಸ್ಯ ವಸಂತ ಶೆಟ್ಟಿ ಹಾಗೂ ಇನ್ನೋರ್ವ ಬಿಜೆಪಿ ಬೆಂಬಲಿತ ಸದಸ್ಯ ವಿಜಯಕುಮಾರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಘಟನೆಯೂ ನಡೆದಿದೆ.


ಇಳಂತಿಲ ಗ್ರಾ.ಪಂ.ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮೀಸಲಾತಿಯಿದ್ದರೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ)ಗೆ ಮೀಸಲಾಗಿತ್ತು. ಇಲ್ಲಿ ಒಟ್ಟು 14 ಸದಸ್ಯ ಬಲವಿದ್ದು, ಅದರಲ್ಲಿ 12 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು, ಎಸ್‌ಡಿಪಿಐ ಬೆಂಬಲಿತ ಸದಸ್ಯೆ ಒಬ್ಬರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಒಬ್ಬರು ಇದ್ದರು. ಆ.7ರಂದು ನಡೆದ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯರಾದ ತಿಮ್ಮಪ್ಪ ಗೌಡ, ವಸಂತ ಶೆಟ್ಟಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ಈಸುಬು ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸದಸ್ಯೆ ಸವಿತಾ ಎಚ್. ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ತಿಮ್ಮಪ್ಪ ಗೌಡ 7 ಮತಗಳನ್ನು ಪಡೆದರೆ, ವಸಂತ ಶೆಟ್ಟಿ 3 ಹಾಗೂ ಈಸುಬು ಅವರು 4 ಮತಗಳನ್ನು ಪಡೆದರು.


ಫಲಿತಾಂಶದ ಬಳಿಕ ಬಿಜೆಪಿ ಬೆಂಬಲಿತ ಸದಸ್ಯರಾದ ವಸಂತ ಶೆಟ್ಟಿ ಹಾಗೂ ವಿಜಯಕುಮಾರ್ ಅವರು ತಮ್ಮ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಗ್ರಾ.ಪಂ. ನಿಕಟಪೂರ್ವಾಧ್ಯಕ್ಷೆ ಚಂದ್ರಿಕಾ ಭಟ್ ಸ್ಪಷ್ಟಪಡಿಸಿದ್ದಾರೆ.
ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ್ ಚುನಾವಣಾಧಿಕಾರಿಯಾಗಿ ಹಾಗೂ ಉಪ ಚುನಾವಣಾಧಿಕಾರಿಯಾಗಿ ಇಳಂತಿಲ ಗ್ರಾ.ಪಂ. ಪಿಡಿಒ ಚೆನ್ನಪ್ಪ ನಾಯ್ಕ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here