ಇನ್ನರ್ ವ್ಹೀಲ್ ಕ್ಲಬ್ ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿ- ಸನ್ಮಾನ

0

ಕ್ಲಬ್‌ನ ಹಲವು ಯೋಜನೆಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ ಪೂರ್ಣಿಮಾ ರವಿ

ಪುತ್ತೂರು: ಪುತ್ತೂರು ಇನ್ನರ್ ವ್ಹೀಲ್ ಕ್ಲಬ್‌ನಿಂದ ಕೈಗೊಂಡಿರುವ ಹಲವಾರು ಸಮಾಜಮುಖಿ ಯೋಜನೆಗಳ ಕುರಿತು ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಅವರು ಶ್ಲಾಘನೆ ವ್ಯಕ್ತಪಡಿಸಿ, ಅಭಿನಂದಿಸಿದರು.

ಪುತ್ತೂರು ಇನ್ನರ್‌ವ್ಹೀಲ್ ಕ್ಲಬ್‌ಗೆ ಆ.9 ರಂದು ಜಿಲ್ಲಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭ ಪುತ್ತೂರು ಮನೀಷಾ ಸಭಾಂಗಣದಲ್ಲಿ ನಡೆದ ಸನ್ಮಾನ ಮತ್ತು ಹಲವು ಯೋಜನೆಗಳಿಗೆ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇನ್ನರ್ ವೀಲ್ ಕ್ಲಬ್ ವಿಶ್ವಾದ್ಯಂತ 100ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಪುತ್ತೂರು ಇನ್ನರ್ ವೀಲ್ ಕ್ಲಬ್‌ನ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಅವರು ಅಧಿಕಾರ ಪಡೆದ ಕೆಲವೇ ಸಮಯದಲ್ಲಿ ಹಲವು ಉತ್ತಮ ಸಮಾಜಮುಖಿ ಯೋಜನೆ ಹಾಕೊಂಡಿದ್ದಾರೆ. ಇದು ಮಾದರಿ ಕಾರ್ಯಕ್ರಮವಾಗಿದೆ. ಇದನ್ನು ಮುಂದೆಯೂ ಮುಂದುವರಿಸಿ ಎಂದು ಹೇಳಿ ಜಿಲ್ಲಾ ಕಾರ್ಯಕ್ರಮದ ರೂಪುರೇಶೆಗಳನ್ನು ತಿಳಿಸಿದರು.


ಧನಾತ್ಮಕ ಚಿಂತನೆಯ ಸದಸ್ಯರಿಂದಾಗಿ ಕಾರ್ಯಕ್ರಮ ಯಶಸ್ವಿ:
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಅವರು ಮಾತನಾಡಿ ಜೂನ್ 15ಕ್ಕೆ ನಮ್ಮ ಪದಗ್ರಹಣ ಸಮಾರಂಭ ಮುಗಿದು ಜು.2 ಮತ್ತು 3ಕ್ಕೆ ಮೈಸೂರಿನಲ್ಲಿ ಜಿಲ್ಲಾ ಎಸೆಂಬ್ಲಿಯಲ್ಲಿ ಪಾಲ್ಗೊಂಡೆವು.ಆ ಬಳಿಕ ಜಿಲ್ಲಾ ಅಧ್ಯಕ್ಷರ ಪುತ್ತೂರು ಅಧಿಕೃತ ಭೇಟಿಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಬೇಕು, ಯೋಜನೆಗಳನ್ನು ಹಾಕಬೇಕೆಂದಾಗ ನಮ್ಮ ಸದಸ್ಯರ ಧನಾತ್ಮಕ ಚಿಂತನೆ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿದೆ.ಹಲವು ಯೋಜನೆಗಳನ್ನು ಈ ವರ್ಷ ಹಾಕಿಕೊಂಡಿದ್ದು ಅವೆಲ್ಲವು ಕ್ಲಬ್ ಸದಸ್ಯರ ಸಹಕಾರದಿಂದ ನಡೆಯಲಿದೆ ಎಂದರು.

ಸನ್ಮಾನ:
ಬಹುಮುಖ ಪ್ರತಿಭೆಯಾಗಿರುವ ಇನ್ನರ್‌ವ್ಹೀಲ್ ಕ್ಲಬ್‌ನ ಆಶಾ ನಾಯಕ್ ಮತ್ತು ಸುದ್ದಿ ಬಿಡುಗಡೆ ಪತ್ರಿಕೆ ಹಿರಿಯ ವರದಿಗಾರ ಲೋಕೇಶ್ ಬನ್ನೂರು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನ ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ದಂಪತಿಯನ್ನು ಗೌರವಿಸಲಾಯಿತು.

ಕ್ಲಬ್ ಬುಲೆಟಿನ್ ಬಿಡುಗಡೆ:
ಕ್ಲಬ್ ಎಡಿಟರ್ ಸುಧಾ ಕಾರ್ಯಪ್ಪ ಅವರ ಸಂಪಾದಕತ್ವದಲ್ಲಿ ಸಂಘದ ಕ್ಲಬ್ ಬುಲೆಟಿನ್ ಮತ್ತು ಕ್ಲಬ್ ಸದಸ್ಯರ ವಿಳಾಸಗಳನ್ನೊಳಗೊಂಡ ಕೈಪಿಡಿಯನ್ನು ಜಿಲ್ಲಾಧ್ಯಕ್ಷೆ ಪೂರ್ಣಿಮಾ ರವಿ ಅವರು ಬಿಡುಗಡೆಗೊಳಿಸಿದರು.

ವಿವಿಧ ಕೊಡುಗೆಗಳು:
ಸಂಘದ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಲಾಯಿತು. ನೆಲ್ಲಿಕಟ್ಟೆ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಫಿಸಿಯೋ ಥೆರಫಿಯಲ್ಲಿರುವ 55 ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಘಟಕ, ಪರ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯ ನಲಿಕಲಿ ವಿಭಾಗಕ್ಕೆ ಟೇಬಲ್, ಸರಕಾರಿ ಆಸ್ಪತ್ರೆಯ ಟಿಬಿ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಲಾಯಿತು. ಮುಳಿಯ ಮತ್ತು ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿ ವಿದ್ಯಾರ್ಥಿ ದತ್ತು ಸ್ವೀಕಾರವಾಗಿ ರೂ.32 ಸಾವಿರ ಚೆಕ್ ಮೂಲಕ ನೀಡಲಾಯಿತು. ನವೋದಯ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗೆ ಕ್ಲಬ್‌ನ ಕಾರ್ಯದರ್ಶಿ ಶ್ರೀದೇವಿ ಅವರು ವೈಯಕ್ತಿಕವಾಗಿ ಕ್ಲಬ್ ಮೂಲಕ ಆರ್ಥಿಕ ನೆರವು ನೀಡಿದರು. ಉಳಿದಂತೆ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ವಿದ್ಯಾರ್ಥಿಗಳಿಗೆ ಕೈ ತೊಳೆಯುವ ವಾಶ್ ಬೇಸಿನ್ ಸಹಿತ ಹಲವು ಕೊಡುಗೆಗಳನ್ನು ನೀಡಲಾಯಿತು. ರಾಧಿಕಾ ಶೆಣೈ ಅತಿಥಿಗಳನ್ನು ಪರಿಚಯಿಸಿದರು. ಕ್ಲಬ್ ಕಾರ್ಯದರ್ಶಿ ಶ್ರೀದೇವಿ ರೈ ವರದಿ ವಾಚಿಸಿದರು. ವೇದಿಕೆಯಲ್ಲಿ ಕ್ಲಬ್‌ನ ಕೋಶಾಧಿಕಾರಿ ಸೀಮಾ ನಾಗರಾಜ್, ಉಪಾಧ್ಯಕ್ಷೆ ರಾಜೇಶ್ವರಿ ಆಚಾರ್ ಉಪಸ್ಥಿತರಿದ್ದರು.

ಕೃಷ್ಣವೇಣಿ ಮುಳಿಯ, ಸಂಧ್ಯಾಶಶಿಧರ್ ಕಜೆ, ಸಂಧ್ಯಾ ಛಾಯ, ಕವಿತಾ ಕೊಳತ್ತಾಯ, ಜಯಶ್ರೀ ಪಡಿವಾಳ್ ಅವರು ಪ್ರಾರ್ಥಿಸಿದರು.ಸಂಧ್ಯಾ ಕಜೆ ಇನ್ನರ್ ವ್ಹೀಲ್ ಪ್ರಾರ್ಥನೆ ಹಾಡಿದರು. ಕ್ಲಬ್ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಸ್ವಾಗತಿಸಿದರು. ರಾಧಿಕಾ ಶೆಣೈ ವಂದಿಸಿದರು. ಕ್ಲಬ್‌ನ ಹಿರಿಯ ನಿರ್ದೇಶಕರಾದ ಮಂಜುಳಾ ಭಾಸ್ಕರ್, ಮನೋರಮಾ ಸೂರ್ಯ ಕಾರ್ಯಕ್ರಮ ನಿರ್ವಹಿಸಿದರು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ರೋಟರಿ ಕ್ಲಬ್‌ನ ಪ್ರಮುಖರಾದ ವಿಶ್ವಾಸ್ ಶೆಣೈ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ಕೃಷ್ಣವೇಣಿ ಮುಳಿಯ, ಸ್ವರ್ಣಲತಾ, ಪುತ್ತೂರು ಉಮೆಶ್ ನಾಯಕ್, ಡಾ. ರಾಜೇಶ್ ಬೆಜ್ಜಂಗಳ ಅಭೀಷ್, ಬಾಲಕೃಷ್ಣ ಕೊಳತ್ತಾಯ, ಸವಿತಾಪ್ರವೀಣ್ ಕುಂಟ್ಯಾನ ಸಹಿತ ಮಡಿಕೇರಿ, ಸುಳ್ಯದ ಇನ್ನರ್‌ವ್ಹೀಲ್ ಕ್ಲಬ್‌ನ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.ಸಭೆಯ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here