ಹಿಂದಿನ ಸಂಸ್ಕೃತಿ ಮುಂದಿನ ಜನಾಂಗಕ್ಕೆ ಪರಿಯಿಸುವ ಉದ್ದೇಶ: ಲೋಕಯ್ಯ ಸೇರ
ವಿಟ್ಲ: ಶಾಲೆಗಳಲ್ಲಿ ಆಟಿದ ಕೂಟ ಕಾರ್ಯಕ್ರಮ ನಡೆಸುವುದು ನಮ್ಮ ಹಿಂದಿನ ಸಂಸ್ಕೃತಿ ಮುಂದಿನ ಜನಾಂಗಕ್ಕೆ ಪರಿಚಯ ಮಾಡುವ ಉದ್ದೇಶ – ಇದೊಂದು ಅತ್ಯುತ್ತಮ ಪ್ರಯತ್ನ, ಮೊಬೈಲ್ ನಿಂದ ದೂರವಾಗಿ ಜನಮನದೊಂದಿಗೆ ಬೆರೆಯಿರಿ ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ದೈವನರ್ತಕರಾದ ಲೋಕಯ್ಯ ಸೇರ ಹೇಳಿದರು.
ಅವರು ಕರ್ನಾಟಕ ಪ್ರೌಢಶಾಲೆಯಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಋಷಿ – ಕೃಷಿ – ಪ್ರಕೃತಿ ಇದುವೇ ನಮ್ಮ ಗುರು, ನಂಬಿಕೆಯೇ ದೇವರು, ಜ್ಞಾನವೇ ಜನಪದ, ಇದನ್ನು ಅರಿತು ತುಳುನಾಡಿನ ಮೂಲ ಸಂಸ್ಕೃತಿ ಉಳಿಸಿ ಎಂದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಕೆ. ಭಂಡಾರಿರವರು ಮಾತನಾಡಿ ‘ಮೈದಾ’ದಿಂದ ತಯಾರಿಸುವ ಬೇಕರಿ ಉತ್ಪನ್ನಗಳು ಜಂಕ್ ಫುಡ್ ಗಳಿಂದ ದಿನೇ ದಿನೇ ಆರೋಗ್ಯ ಹಾಳಾಗುತ್ತದೆ, ಆದಷ್ಟು ಮನೆಯ ಸಾಂಪ್ರದಾಯಿಕ ಆಹಾರಕ್ಕೆ ಮರಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಪ್ರಯುಕ್ತ ಔಷಧೀಯ ಗಿಡಗಳ ಪ್ರದರ್ಶನ – ಪ್ರಾತ್ಯಕ್ಷಿಕೆ, ಸಾಮೂಹಿಕ ರಸಪ್ರಶ್ನೆ, ತುಳು ಗೀತ ಗಾಯನ, ತುಳು ಭಾಷಣ ಇತ್ಯಾದಿ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಹಾಜಿ ಇಬ್ರಾಹಿಂ ಮಾಣಿ, ನಿವೃತ್ತ ಕನ್ನಡ ಶಿಕ್ಷಕರಾದ ಎಂ.ಕೆ. ಬಾಲಕೃಷ್ಣ, ಮುಖ್ಯ ಶಿಕ್ಷಕರಾದ ಎಸ್.ಚೆನ್ನಪ್ಪ ಗೌಡ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಸಾರಿಕಾ, ಶಿಕ್ಷಕರ – ರಕ್ಷಕ ಸಂಘದ ಅಧ್ಯಕ್ಷರಾದ ಹರೀಶ್ ಮಾಣಿ, ಮೊದಲಾದವರು ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕರಾದ ಜಯರಾಮ ಕಾಂಚನ ರವರು ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಶಿಕ್ಷಕಿ ಸುಶ್ಮಿತಾ ಸ್ವಾಗತಿಸಿ, ಶಿಕ್ಷಕ ಎನ್. ಗಂಗಾಧರ ಗೌಡ ವಂದಿಸಿ, ವಿದ್ಯಾರ್ಥಿಗಳಾದ ಧನುಶ್ರೀ ಮತ್ತು ತೃಷಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.