ಆ.11ರ ಸಂಚಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಲೇಖನಕ್ಕೆ ಓದುಗರ ಅಭಿಪ್ರಾಯಗಳು
ರಸ್ತೆ ತಡೆ, ಬಂದ್ ಬದಲು ಮೆರವಣಿಗೆ, ಸಭೆ ನಡೆಯಲಿ
ಸೌಜನ್ಯಳ ಪ್ರಕರಣದಲ್ಲಿ ಇಡೀ ಕರ್ನಾಟಕವೇ ಎದ್ದು ನಿಂತಿದೆ ಎಂಬುದು ಸತ್ಯ. ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಇದು ಎಲ್ಲರ ಬೇಡಿಕೆಯೂ ಹೌದು. ರಸ್ತೆ ತಡೆ, ಅಂಗಡಿ ಬಂದ್ ಮಾಡುವುದರ ಬದಲು ಮೆರವಣಿಗೆ, ಸಭೆಗಳನ್ನು ಮಾಡಿ ಮತ್ತು ಸಭೆಯ ತೀರ್ಮಾನಗಳನ್ನು ಸರಕಾರಕ್ಕೆ ಮುಟ್ಟಿಸಿದರೆ ಸಾಕಲ್ಲವೇ? ಸರಕಾರದ ನಿಲುವು ನೋಡಿಕೊಂಡು ಮುಂದಿನ ನಡೆಯ ಬಗ್ಗೆ ಚಿಂತಿಸಬಹುದು ಎಂಬುದು ನನ್ನ ವೈಯುಕ್ತಿಕ ಅಭಿಪ್ರಾಯ.
ಜನರಿಗೆ ತೊಂದರೆಯಾಗುವ ರಸ್ತೆ ತಡೆ, ಬಂದ್ ಸರಿಯಲ್ಲ
ಪುತ್ತೂರಿನಲ್ಲಿ ಹಲವು ವಿಚಾರಗಳಲ್ಲಿ ಬಂದ್ ಮಾಡುತ್ತಿದೆ.ಬಂದ್ ನಿಲ್ಲಿಸಲು ಸುದ್ದಿ ಬಿಡುಗಡೆಯು ಈ ಹಿಂದೆ ಹಲವು ಪ್ರಯತ್ನಗಳನ್ನು ಮಾಡಿದೆ.ಈಗ ಮತ್ತೆ ಸೌಜನ್ಯ ವಿಚಾರದಲ್ಲಿ ಬಂದ್ ಮಾಡಲು ಪುತ್ತಿಲ ಪರಿವಾರ ಮುಂದಾಗಿದೆ.ಪ್ರತಿಭಟನೆ ಉತ್ತಮ ವಿಚಾರ.ಹೋರಾಟದ ಜೊತೆಗೆ ಕಾನೂನಾತ್ಮಕ ಹೋರಾಟಗಳಿಂದ ನ್ಯಾಯ ಸಾಧ್ಯ.ಪ್ರತಿಭಟನೆ, ಮೆರವಣಿಗೆ, ವಾಹನ ಸವಾರರಿಗೆ, ರೋಗಿಗಳಿಗೆ, ಹಲವು ವಿಧದಲ್ಲಿ ತೊಂದರೆಯಾಗಲಿದೆ.ಜನರಿಗೆ ಸಾಕಷ್ಟು ತೊಂದರೆಯಾಗಲಿದೆ.ಕಾನೂನು ಮುಖಾಂತರ ಹೋರಾಟ ನಡೆಸಬೇಕು.ಹೋರಾಟಕ್ಕೆ ಪ್ರತಿ ಮನೆಯವರ ಸಹಕಾರವಿರಬಹುದು.ರಸ್ತೆ ತಡೆ ನಡೆಸಿ ಜನರಿಗೆ ತೊಂದರೆ ಆಗುವ ಪ್ರತಿಭಟನೆ ಸರಿಯಲ್ಲ-
ತೊಂದರೆಯಾಗದಂತೆ ಬಂದ್ ಆಗಲಿ,ರಸ್ತೆ ತಡೆ ನಡೆಸಬಾರದು
ಈ ಬಂದ್ ಆಗಲೇ ಬೇಕು.ದಕ್ಷಿಣ ಕನ್ನಡದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಕಠಿಣವಾಗಿ ಖಂಡಿಸಬೇಕು.ಇಂತಹ ಪ್ರಕರಣ ಮತ್ತೆ ನಡೆಯಬಾರದು.ಇದರಲ್ಲಿ ಯಾವುದೇ ಧರ್ಮದ ವಿಚಾರ ಬರಬಾರದು.ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಲ್ಲಬೇಕು.ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.ಅವರು ಮುಂದೆ ಇಂತಹ ಕೆಲಸ ಮಾಡದಂತಹ ಶಿಕ್ಷೆಯಾಗಬೇಕು.ಅಂಗಡಿ, ಕಚೇರಿಗಳಿಗೆ, ಮಕ್ಕಳಿಗೆ ತೊಂದರೆ ಆಗದಂತೆ ಬಂದ್ ಮಾಡಿ ಪ್ರತಿಭಟನೆ ಮಾಡಬೇಕು.ಈ ಬಂದ್ ಆಚರಿಸಲೇಬೇಕು.ಸತ್ಯಾಗ್ರಹಕ್ಕೂ ತಯಾರಿರಬೇಕು.ರಸ್ತೆ ತಡೆ ನಡೆಸಬಾರದು.ಸೌಜನ್ಯಳಿಗೆ ಸೌಜನ್ಯವಾಗಿ ಪ್ರತಿಭಟಿಸಿ ನ್ಯಾಯ ಒದಗಿಸಬೇಕು.
1 ಗಂಟೆ ಬಂದ್ನಿಂದ ದೊಡ್ಡ ನಷ್ಟವಾಗದು
ಸೌಜನ್ಯಳ ಸಾವಿನ ನ್ಯಾಯಕ್ಕಾಗಿ ಒಂದು ಗಂಟೆ ಬಂದ್ ಆದರೆ ದೊಡ್ಡ ನಷ್ಟವಾಗಲಾರದು.ನಮ್ಮ ಮನೆಯ ಹೆಣ್ಣು ಮಕ್ಕಳಿಗೂ ಇದೇ ಪರಿಸ್ಥಿತಿ ಬಂದರೂ ನಾವು ಆಲೋಚಿಸಬೇಕಾಗುತ್ತದೆ. ಅದಕ್ಕೆ ಮೊದಲೇ ಯೋಚಿಸಬೇಕು.ಹೆಣ್ಣು ಮಕ್ಕಳು ಎಲ್ಲರೂ ಒಂದೇ.ಅರುಣ್ ಪುತ್ತಿಲರಿಂದ ನ್ಯಾಯವೇ ಹೊರತು ಯಾರಿಗೂ ಅನ್ಯಾಯವಾಗುವುದಿಲ್ಲ-
ಬಂದ್, ರಸ್ತೆ ತಡೆ ಬದಲು ಪ್ರತಿಭಟನೆ ಉತ್ತಮ
ಪ್ರತಿಭಟನೆಯ ಮೂಲಕ ನ್ಯಾಯ ಕೇಳುವುದು ಪ್ರಜಾಪ್ರಭುತ್ವ ದೇಶದಲ್ಲಿ ಸರ್ವೇ ಸಾಮಾನ್ಯ ಹಾಗಂತ ನಾವು ಮಾಡುವ ಪ್ರತಿಭಟನೆಯಿಂದ ಸಾರ್ವಜನಿಕರಿಗೆ ಸಮಸ್ಯೆ, ತೊಂದರೆ ಮಾಡುವುದು ಸರಿಯಲ್ಲ. ಬಲತ್ಕಾರವಾಗಿ ಬಂದ್ ಮಾಡಿಸುವುದು, ರಸ್ತೆ ತಡೆ ಮಾಡುವುದು ಸರಿಯಲ್ಲ. ರೋಗಿಗಳಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ವೃದ್ಧರಿಗೆ ಸೇರಿದಂತೆ ಇದರಿಂದ ಬಹಳಷ್ಟು ಜನರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಬಂದ್ ಮಾಡಿಸುವುದು, ರಸ್ತೆ ತಡೆ ಮಾಡುವುದು ಇತ್ಯಾದಿಗಳ ಬದಲು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ಮಾಡುವುದು ಉತ್ತಮ. ಸಹೋದರಿ ಸೌಜನ್ಯಳ ಕುಟುಂಬಕ್ಕೆ ನ್ಯಾಯ ಸಿಗಲಿ ಎನ್ನುವುದೇ ನಮ್ಮೆಲ್ಲರ ಪ್ರಾರ್ಥನೆಯಾಗಿದೆ.
ಬಂದ್ ಬೇಡ-ಪ್ರತಿಭಟನೆಗೆ ಬೆಂಬಲ
ಯಾವುದೇ ಪ್ರತಿಭಟನೆ ನಡೆಯುವಾಗ ಪ್ರತಿಭಟನಾ ಮೆರವಣಿಗೆ ಮಾಡಲಿ, ಅಂಗಡಿಗೆ ಬಂದ್, ರೋಡ್ ಬಂದ್ ಬೇಡ, ಜನರಿಗೆ ತುಂಬಾ ತೊಂದರೆಯಾಗುತ್ತದೆ. ಸಂಬಂಧ ಪಟ್ಟವರಿಗೆ ಮನವಿ ಕೊಡಲಿ, ಪ್ರತಿಭಟನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ.
ಪೊಲೀಸರು ಅನುಮತಿ ನೀಡಬಾರದು
ಸಾರ್ವಜನಿಕರಿಗೆ ತೊಂದರೆಯಾಗುವ ಯಾವುದೇ ಪ್ರತಿಭಟನೆ ರಸ್ತೆ ತಡೆ ಮೆರವಣಿಗೆಗೆ, ಬಲತ್ಕಾರದ ಬಂದ್ಗೆ ಪೊಲೀಸರು ಅನುಮತಿ ನೀಡಬಾರದು. ರಾಜಕೀಯ ಪಕ್ಷಗಳಿಗೆ ಸಂಘ ಸಂಸ್ಥೆಗಳಿಗೆ ಪುತ್ತೂರಿನ ಮುಖ್ಯರಸ್ತೆಯಲ್ಲಿ ಪೊಲೀಸರು ಅನುಮತಿ ಕೊಟ್ಟಲ್ಲಿ ಊರಿನ ಜನರಿಗೆ ಅನೇಕ ರೀತಿಯ ತೊಂದರೆಗಳು ಉಂಟಾಗುತ್ತದೆ.
ನ್ಯಾಯ ಸಿಗುವುದಾದರೆ ಬಂದ್ ಮಾಡಬಹುದು
ಸೌಜನ್ಯ ಪ್ರಕರಣದಲ್ಲಿ ನ್ಯಾಯ ಸಿಗುವುದಾದರೆ ಬಂದ್ ಮಾಡಬಹುದು.ಬಂದ್ ಮಾಡುವುದರಿಂದ ಜನ ಸಾಮಾನ್ಯರಿಗೆ ಸಮಸ್ಯೆಯಾಗುತ್ತದೆ.ಯಾರಿಗೂ ತೊಂದರೆ ಆಗದಂತೆ ರಸ್ತೆ ತಡೆ ಮಾಡಬಹುದು. ಯಾರಿಗೂ ಸಮಸ್ಯೆಯಾಗದಂತೆ ಬಂದ್ ಮಾಡಬೇಕು-
ನ್ಯಾಯಕ್ಕೆ ಜಯ ಸಿಗದಾಗ ಹೋರಾಟ ಅನಿವಾರ್ಯ
ದ.ಕ ಜಿಲ್ಲೆಯಲ್ಲಿ ಹೋರಾಟದ ಬಿಸಿ ಕಾಣಿಸುತ್ತಿದೆ.ಕೊಲೆಗಾರ ಯಾರೆಂಬುದನ್ನು ಪತ್ತೆ ಮಾಡಲು ದ.ಕ ಜಿಲ್ಲೆಯಲ್ಲಿ ಹಲವು ಹೋರಾಟಗಳು ನಡೆದಿವೆ.ರಸ್ತೆತಡೆ, ಬಂದ್ ಮಾಡುವುದು ತಪ್ಪಂತ ಹೇಳುವುದಿಲ್ಲ.ಯಾವಾಗ ನ್ಯಾಯಕ್ಕೆ ಸರಿಯಾಗಿ ಜಯ ಸಿಗದಿದ್ದರೆ ಈ ಮೂಲಕ ಹೋರಾಟ ಮಾಡುವುದಕ್ಕೆ ಸರಕಾರ, ನ್ಯಾಯಾಲಯ ಕಾರಣವಾಗಬಹುದು.ಈ ರಸ್ತೆತಡೆ ಮಾಡುವುದಕ್ಕೆ ನನ್ನ ಬೆಂಬಲವಿದೆ-