ಸುಧಾಕರ್ ಕಾಣಿಯೂರು
ಕಾಣಿಯೂರು: ಹಳ್ಳಿ ಸರಕಾರ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯತ್‌ಗಳ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರದ ಮೊದಲನೇಯ ಅವಧಿ ಪೂರ್ಣಗೊಳ್ಳುತ್ತಿದೆ. ಮುಂದಿನ ಎರಡನೇ ಅವಧಿಗೆ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿ ಪ್ರಕ್ರಿಯೆಯೂ ನಡೆದಿದೆ. ಬೆಳಂದೂರು ಗ್ರಾ.ಪಂ.ನಲ್ಲಿ ಬಿಜೆಪಿ ಬೆಂಬಲಿತರಿಗೆ ಸ್ಪಷ್ಟ ಬಹುಮತವಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಮೀಸಲು ಅಭ್ಯರ್ಥಿ ಇಲ್ಲದೇ ಇರುವುದರಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಅಧ್ಯಕ್ಷ ಸ್ಥಾನದ ಅದೃಷ್ಟ ಒಲಿದು ಬಂದಿದೆ.
ಬೆಳಂದೂರು ಗ್ರಾಮ ಪಂಚಾಯತ್‌ನ ಒಟ್ಟು 15 ಸ್ಥಾನಗಳ ಪೈಕಿ 10 ಬಿಜೆಪಿ ಬೆಂಬಲಿತ ಹಾಗೂ 5 ಕಾಂಗ್ರೆಸ್ ಅಭ್ಯರ್ಥಿಗಳ ಪಾಲಾಗಿತ್ತು. ಹಿಂದುಳಿದ ವರ್ಗ ‘ಎ’ ಮಹಿಳೆಗೆ ಅಧ್ಯಕ್ಷ ಸ್ಥಾನ ಮೀಸಲಾತಿ ನಿಗದಿಯಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿದೆ. ಹಿಂದುಳಿದ ವರ್ಗ ಎ ಮಹಿಳೆ ಮೀಸಲು ಸ್ಥಾನದಿಂದ ಬೆಳಂದೂರು ವಾರ್ಡ್ ೧ರಲ್ಲಿ ಕಾಂಗ್ರೆಸ್ ಬೆಂಬಲಿತವಾಗಿ ಸ್ಪರ್ಧಿಸಿದ್ದ, ಗ್ರಾಮ ಪಂಚಾಯತ್‌ನ ಮೊದಲನೇ ಅವಧಿಯಲ್ಲಿ ಉಪಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿ ಅನುಭವವಿರುವ ತೇಜಾಕ್ಷಿ ಕೊಡಂಗೆಯವರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾದರೆ, ಕಾಮಣ ವಾರ್ಡ್ 1ರಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿರುವ ಪಾರ್ವತಿ ಮರಕ್ಕಡರವರೂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನ ಇಬ್ಬರೂ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದರೆ, ಇತ್ತ ಸ್ಪಷ್ಟ ಬಹುಮತವನ್ನು ಹೊಂದಿರುವ ಬಿಜೆಪಿ ಯಾರನ್ನು ಬೆಂಬಲಿಸಬಹುದು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಉಪಾಧ್ಯಕ್ಷರು ಯಾರಾಗುತ್ತಾರೆ ?.. ಬೆಳಂದೂರು ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮೀಸಲಾತಿ ನಿಗದಿಯಾಗಿದ್ದು, ಗ್ರಾಮ ಪಂಚಾಯತ್‌ನ 15 ಮಂದಿ ಸದಸ್ಯರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ಹೊಂದಿದ್ದಾರೆ. ಆದರೆ 10 ಮಂದಿ ಬಿಜೆಪಿ ಬೆಂಬಲಿತ ಸದಸ್ಯರಲ್ಲಿ ಓರ್ವರು ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸುವುದು ಖಚಿತವಾಗಿದೆ.
ಉಪಾಧ್ಯಕ್ಷತೆ ಕಾಂಗ್ರೆಸ್‌ನ ಪಾಲಾಗಿತ್ತು: ಬೆಳಂದೂರು ಗ್ರಾಮ ಪಂಚಾಯತ್‌ನಲ್ಲಿ ಈ ಹಿಂದೆ ಮೊದಲ ಅವಧಿಯಲ್ಲಿಯೂ ಬಿಜೆಪಿಗೆ ಬಹುಮತವಿದ್ದರೂ ಮೀಸಲಾತಿಯಲ್ಲಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ನ ಪಾಲಾಗಿತ್ತು. ಸದಸ್ಯೆ ತೇಜಾಕ್ಷಿ ಕೊಡಂಗೆ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಬೆಳಂದೂರು ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಗಣನೆ ಆರಂಭವಾಗಿದ್ದು, ಯಾರಿಗೆ ನೂತನ ಅಧ್ಯಕ್ಷ ಗಿರಿ ಸಿಗಬಹುದು, ಯಾರು ಉಪಾಧ್ಯಕ್ಷ ಪಟ್ಟ ಅಲಂಕರಿಸಬಹುದೆಂಬ ಕುತೂಹಲಕ್ಕೆ ಕಾರಣವಾಗಿದೆ. ಬದಲಾದ ಹೊಸ ಮೀಸಲಾತಿ ಕದನ ಈ ಬಾರಿ ಕುತೂಹಲ ಸೃಷ್ಟಿಸಿದ್ದು, ಆ.19ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಲಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಆಯ್ಕೆ ಮೂಲಕ ಕುತೂಹಲಕ್ಕೆ ತೆರೆ ಕಾಣಲಿದೆ.
ನಾನು ಅಧ್ಯಕ್ಷ ಸ್ಥಾನದ ಅಕಾಂಕ್ಷಿಯಾಗಿzನೆ. ಅಧ್ಯಕ್ಷರಾಗಬೇಕೆಂಬ ಎಲ್ಲರ ಒಲವು ಕೂಡ ನನ್ನ ಮೇಲಿದೆ. ಅದಲ್ಲದೇ ಮೊದಲನೆ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಅನುಭವವು ಇದೆ. ಮತ್ತೆ ಆಯ್ಕೆ ಮಾಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಒಟ್ಟಿನಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ದಳಾಗಿದ್ದೇನೆ.
-ತೇಜಾಕ್ಷಿ ಕೊಡಂಗೆ
ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ ಎ ಮೀಸಲಾತಿ ಬಂದಿದ್ದರಿಂದ ನನಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಇದೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಹೌದು. ಅಧ್ಯಕ್ಷ ಸ್ಥಾನ ಸಿಕ್ಕಿದರೆ ಒಳ್ಳೆಯ ರೀತಿಯಲ್ಲಿ ನಿಭಾಯಿಸುತ್ತೇನೆ ಎಂಬ ಭರವಸೆ ನನಗೆ ಇದೆ.
-ಪಾರ್ವತಿ ಮರಕ್ಕಡ