ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

ರೂ.1.13 ಕೋಟಿ ನಿವ್ವಳ ಲಾಭ
ಸದಸ್ಯರಿಗೆ ಶೇ.16 ಡಿವಿಡೆಂಡ್
ಸಾಲ ವಸೂಲಾತಿ ಶೇ.99.71 ಸಾಧನೆ


ಕಾವು : ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2022-23ನೇ ಆರ್ಥಿಕ ಸಾಲಿನಲ್ಲಿ ರೂ.243.48 ಕೋಟಿ ವ್ಯವಹಾರ ನಡೆಸಿ ರೂ.1.13 ಕೋಟಿ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.16 ಲಾಭಾಂಶ ನೀಡಲಾಗುವುದು, ವರ್ಷಾಂತ್ಯಕ್ಕೆ ಸಾಲ ವಸೂಲಾತಿಯಲ್ಲಿ ಶೇ.99.71 ಸಾಧನೆ ಮಾಡಿದ್ದು, ಸತತ 19 ವರ್ಷದಿಂದ ಆಡಿಟ್‌ನಲ್ಲಿ ಎ ಶ್ರೇಣಿಯನ್ನು ಪಡೆದುಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಹೇಳಿದರು.

ಅವರು ಆ.12ರಂದು ಸಂಘದ ಪ್ರಧಾನ ಕಛೇರಿ ಕಾವು ಇದರ ಶಿವಸದನ ಸಭಾಭವನದಲ್ಲಿ ನಡೆದ ಸಂಘದ 2022-23ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು.

ರೂ.1.13 ಕೋಟಿ ನಿವ್ವಳ ಲಾಭ:
ಸಂಘವು 2022-23ನೇ ಸಾಲಿನಲ್ಲಿ ಒಟ್ಟು ರೂ.243.48 ಕೋಟಿಗಳಷ್ಟು ವಾರ್ಷಿಕ ವ್ಯವಹಾರವನ್ನು ಮಾಡಿ ರೂ.1,13,65,742 ನಿವ್ವಳ ಲಾಭ ಹೊಂದಿದ್ದು, ಲಾಭಾಂಶವನ್ನು ನಿಯಮಾವಳಿಯ ಪ್ರಕಾರ ಹಂಚಿಕೆ ಮಾಡಿ ಸದಸ್ಯರಿಗೆ ಶೇ.16 ಡಿವಿಡೆಂಡ್ ಮತ್ತು ಸಂಘದ ಸಿಬ್ಬಂದಿಗಳಿಗೆ ಎರಡು ತಿಂಗಳ ಸಂಬಳದ ಬೋನಸ್ ನೀಡಲಾಗುವುದು. ವರ್ಷಾಂತ್ಯಕ್ಕೆ ಸಂಘದಲ್ಲಿ 2181 ಜನ ಸದಸ್ಯರಿದ್ದು, ರೂ.2,24,17,330 ಪಾಲು ಬಂಡವಾಳವಿದೆ. ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ. 34,26,49,692 ಹೊಂದಿರುತ್ತದೆ. ಲಾಭಾಂಶವನ್ನು ಮಹಾಸಭೆಯ ಬಳಿಕ ಸದಸ್ಯರ ಉಳಿತಾಯ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು ಎಂದು ನನ್ಯ ಅಚ್ಚುತ ಮೂಡೆತ್ತಾಯರು ಹೇಳಿದರು.

ಸಾಲ ವಸೂಲಾತಿಯಲ್ಲಿ ಶೇ.99.71 ಸಾಧನೆ:
ಸಂಘದಲ್ಲಿ ವರ್ಷಾರಂಭಕ್ಕೆ ರೂ.26,28,82,330 ಸದಸ್ಯರ ಸಾಲ ಹೊರಬಾಕಿಯಿದ್ದು, ವರದಿ ವರ್ಷದಲ್ಲಿ ರೂ. 36,47,34,074 ಸಾಲ ವಿತರಿಸಿದ್ದು, ರೂ. 34,33,92,153 ವಸೂಲಾತಿಯಾಗಿ ವರ್ಷಾಂತ್ಯಕ್ಕೆ ರೂ.28,42,24,251 ಸಾಲ ಹೊರ ಬಾಕಿ ಇದ್ದು, ಸಾಲ ವಸೂಲಾತಿಯಲ್ಲಿ ಶೇ.99.71 ಸಾಧನೆ ಮಾಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ವಿದ್ಯಾರ್ಥಿವೇತನ ವಿತರಣೆ:
ಸಂಘದ ಎ ತರಗತಿ ಸದಸ್ಯರ ಮಕ್ಕಳ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗದಲ್ಲಿ ಅತ್ಯುತ್ತಮ ಅಂಕ ಗಳಿಸಿ ಪ್ರಥಮ, ದ್ವಿತೀಯ, ತೃತೀಯಾ ಸ್ಥಾನಗಳಿಸಿದ ಮಕ್ಕಳಿಗೆ ಸಂಘದಿಂದ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಸರವು ಮುರಳಿಮೋಹನ ಶೆಟ್ಟಿಯವರ ಪುತ್ರಿ ಇಂಚರ ಶೆಟ್ಟಿ(ಪ್ರ), ಕಾವು ಅಬ್ದುಲ್ ರಜಾಕ್‌ರವರ ಪುತ್ರಿ ಆಯಿಷಾ ಸಲ್ಮಿ(ದ್ವಿ), ಉಜ್ರುಗುಳಿ ಚಂದ್ರಶೇಖರರವರ ಪುತ್ರ ಯಶ್ವಿತ್ ಯು(ತೃ), ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಟ್ಟುಮೂಲೆ ಗಂಗಾಧರ ಪಾಟಾಳಿಯವರ ಪುತ್ರ ಸುದೀಪ್ ಪಿ(ಪ್ರ), ಬರೆಕೆರೆ ರಾಮಕೃಷ್ಣ ಬಿ.ಎಸ್‌ರವರ ಪುತ್ರಿ ಸಹನಾ ಬಿ.ಆರ್(ದ್ವಿ), ಕೋರಿಗದ್ದೆ ಕೇಶವ ಕೆ. ರವರ ಪುತ್ರಿ ಅನುಷಾ ಕೆ ಕೆ(ತೃ), ವಾಣಿಜ್ಯ ವಿಭಾಗದಲ್ಲಿ ಪೂವಂದೂರು ನಿರ್ಮಲಾ ಕುಮಾರಿಯವರ ಪುತ್ರ ಪ್ರಣಮ್ ರಾವ್(ಪ್ರ), ಸಸ್ಪೆಟ್ಟಿ ಚಿದಾನಂದ ಆಚಾರ್ಯರವರ ಮಗ ಉಜ್ವಲ್ ಸಿ.ಎನ್(ದ್ವಿ), ಮುಂಡ್ಯ ಸುಂದರಿಯವರ ಪುತ್ರ ಭುವನ್ ಎಂ(ತೃ)ರವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ವೇದಿಕೆಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕ ಶರತ್ ಡಿ, ಸಂಘದ ಉಪಾಧ್ಯಕ್ಷ ರಮೇಶ್ ಪೂಜಾರಿ ಮುಂಡ್ಯ, ನಿರ್ದೇಶಕರುಗಳಾದ ಎ.ಮಂಜುನಾಥ ರೈ, ಶಿವಪ್ರಸಾದ್ ಕೊಚ್ಚಿ, ಲೋಕೇಶ್ ಚಾಕೋಟೆ, ರಾಮಣ್ಣ ನಾಯ್ಕ ಕುದ್ರೋಳಿ, ಮೋಹನಾಂಗಿ ಬೀಜಂತಡ್ಕ, ಹೇಮಾವತಿ ಚಾಕೋಟೆ, ಲೋಹಿತ್ ಅಮ್ಚಿನಡ್ಕರವರು ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಶೋಭಾ ಕೆ. ಪ್ರಾರ್ಥಿಸಿದರು. ನಿರ್ದೇಶಕರಾದ ಪ್ರವೀಣ್ ರೈ ಮೇನಾಲ ಸ್ವಾಗತಿಸಿ, ಶ್ರೀಧರ್ ರಾವ್ ನಿಧಿಮುಂಡ ವಂದಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ಮಹಾಸಭೆಯ ತಿಳುವಳಿಕೆ ಪತ್ರವನ್ನು ಓದಿ ದೃಢೀಕರಿಸಿ, ಹಿಂದಿನ ಮಹಾಸಭೆಯ ನಡವಳಿಕೆಗಳನ್ನು ಓದಿದರು. ಸಂಘದ ಸಿಬ್ಬಂದಿಗಳಾದ ಅಭಿಷೇಕ್ ಪಿ.ಎಸ್, ರಾಜೇಶ್ ಡಿ, ಸುನೀಲ್ ಎನ್, ನಿತೇಶ್ ಎಸ್‌ರವರು ವಿವಿಧ ಜವಾಬ್ದಾರಿ ನಿರ್ವಹಿಸಿದರು. ಸಂಘದ ಸಿಬ್ಬಂದಿಗಳಾದ ಸೌಮ್ಯಮಣಿ, ಸಂದೇಶ್, ಜಿತೇಶ್, ವಿಶ್ವನಾಥ ಕೆ, ಜಗದೀಶ್ ರಾವ್, ಆನಂದ ಎಸ್ ರವರು ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಮಹಾಸಭೆ ಮುಕ್ತಾಯವಾಯಿತು.

LEAVE A REPLY

Please enter your comment!
Please enter your name here